

ಮನೆ ಮನದ ಮಾಧುರ್ಯ. ಮನೆಯಲ್ಲೇ ಪ್ರಶಾಂತ ಹವಾ ಸೃಷ್ಟಿಸುವಲ್ಲಿ ಸಫಲನಾದರೆ ನಾವು ಗೆದ್ದಂತೆ. ಇರುವ ವಸ್ತುಗಳನ್ನು ಸಮರ್ಪಕವಾಗಿ ಬಳಸುವ ಕೌಶಲ್ಯವೊಂದಿದ್ದರೆ ಭವ್ಯ ಭವನ ನಿರ್ಮಾಣ ಸಾಧ್ಯ. ದುಡ್ಡಿಂದ ದೊಡ್ಡ ಮನೆ ಕಟ್ಟಬಹುದೇ ವಿನಾ ವಿನ್ಯಾಸಿತ ಮನೆ ಅಸಾಧ್ಯ. ಮನಸ್ಸಿನಂತೆಯೇ ಮನೆಗೂ ಒಳವಿನ್ಯಾಸ ಬೇಕು. ಅದು ಮತ್ತೊಬ್ಬರನ್ನು ನೋಡಿದಾಕ್ಷಣವೇ ಆಕರ್ಷಿಸುವಂತಿರಬೇಕು.
ಮನೆ ಮಾಡುವ ಮೊದಲು ಮನಸ್ಸಲ್ಲೇ ಮಾಪನ ಮಾಡಿ. ಮೊದಲ ಹಂತ ಮನದಲ್ಲೇ ಮನೆಗೆ ಬಳಿಯಲು ಬಣ್ಣ ಕಲ್ಪಿಸಿಕೊಳ್ಳುವುದು. ನಂತರ ಮನೆಗೆ ಬೇಕಾದ ಪೀಠೋಪಕರಣ ಮತ್ತು ಇತ್ಯಾದಿ ಅಗತ್ಯ ವಸ್ತುಗಳ ಬಗ್ಗೆ ಚಿಂತನೆ. ಶ್ವೇತ ಬಣ್ಣ ಇಷ್ಟವಾದರೆ ಸ್ವಲ್ಪ ಪ್ರಮಾಣದ ಕಪ್ಪು ಬಣ್ಣದ ವಿನ್ಯಾಸಗಳಿರುವಂತೆ ನೋಡಿಕೊಳ್ಳಿ.
ವಾಲ್ ಪೇಪರ್ಸ್
ಇವು ಮನೆಯ ಅಂದ ಹೆಚ್ಚಿಸಲು ಸಹಕಾರಿ. ಬಣ್ಣ ಬಳಿದ ಗೋಡೆಗಳಿಗೆ ಅಲ್ಲಲ್ಲಿ ವಾಲ್ ಪೇಪರ್‌ಗಳು ಇದ್ದರೆ ಮೆರುಗಿಗೆ ಕೈಗನ್ನಡಿ. ಗೋಡೆಗೆ ಅಂಟಿಸಲಷ್ಟೇ ಇವುಗಳನ್ನು ಸೀಮಿತಗೊಳಿಸಬೇಡಿ. ಟಿವಿ ಹಿಂಬದಿಯ ವಿನ್ಯಾಸವಾಗಿ, ಬೆಡ್‌ಗಳ ಹಿನ್ನೆಲೆಯಾಗಿ ಬಳಸಬಹುದು.
ಕುಷನ್
ಸೋಫಾಗಳಿಗೆ ಎರಡು ಮೂರು ರೀತಿಯ ಆಕಾರಗಳುಳ್ಳ ಕುಷನ್‌ಗಳು ಮೆರಗು ನೀಡುತ್ತವೆ. ಕೈಗಳ ವಿಶ್ರಾಂತಿಗಾಗಿ ಜೋಡಿಸಿಡುವ ಕುಷನ್‌ಗಳು ಆಕರ್ಷವಾಗಿದ್ದರೆ ಸೋಫಾಗೆ ಇಮೇಜ್ ಸಿಗುತ್ತೆ. ವೈಢೂರ್ಯ ಮತ್ತು ಒಣಗಿದ ದ್ರಾಕ್ಷಿ ಬಣ್ಣಗಳ ಕುಷನ್‌ಗಳು ತಟಸ್ಥಭಾವದ ಗೋಡೆಗಳಿಗೆ ಸರಿ ಹೊಂದುತ್ತವೆ. ಹೊಂಬಣ್ಣ ಮತ್ತು ಒಣಗಿದ ದ್ರಾಕ್ಷಿ ಬಣ್ಣದ ಕುಷನ್‌ಗಳು ಬೂದು, ಬಿಳಿ, ಕಪ್ಪು ಬಣ್ಣಗಳ ಹಿನ್ನೆಲೆಗೆ ತಕ್ಕುದಾಗಿವೆ.
ನೆಲಗಂಬಳಿ
ರೆಡಿಮೇಡ್ ನೆಲಗಂಬಳಿ ಕೊಳ್ಳುವ ಮುನ್ನ ಯೋಚಿಸಿ. ಬಣ್ಣ ಹೇಗಿರಬೇಕು, ಎಂಥ ಆಕಾರವಿರಬೇಕು, ಯಾವ ಕೊಠಡಿಗೆ ಸರಿಹೋಗುತ್ತೆ ಎಂದು ಎಚ್ಚರದಿಂದ ಆರಿಸಿ. ಹೆಚ್ಚು ಬಣ್ಣ ಮತ್ತು ವಿನ್ಯಾಸಿತ ಕಿಟಕಿ ಪರದೆಗಳಾಗಿದ್ದಲ್ಲಿ ಅವುಗಳಿಗೆ ತಕ್ಕುದಾದ ನೆಲಗಂಬಳಿಗಳು ಹೆಚ್ಚು ವರ್ಣಯುತವಾಗಿದ್ದರೆ ಅಡ್ಡಿಯಿಲ್ಲ.
ಲೈಟಿಂಗ್
ಬೆಳಕಿನ ವ್ಯವಸ್ಥೆ ಮಾಡುವಾಗ ಕೊಠಡಿಯ ಥೀಮ್ ನೋಡಿಕೊಂಡು ಹೊಂದಿಸಬೇಕು. ರಂಗಾಗಿ ಕಾಣಲು ಬೆಳಕಿನ ರಂಗು ಶ್ರೀಮಂತಿಕೆ ನೀಡುತ್ತದೆ. ಸ್ಪಾಟ್‌ಲೈಟ್, ಪೆಂಡೆಂಟ್ ಲೈಟ್, ವಾಲ್ ವಾಷರ್ಸ್, ಕ್ಯಾಬಿನೆಟ್ ಲೈಟ್‌ಗಳೆಲ್ಲವೂ ಒಂದೇ ರೂಮ್‌ನಲ್ಲಿರುವುದು ಶೋಭೆ ತರುವುದಿಲ್ಲ. ಸಂಪ್ರದಾಯಸ್ಥ ಮನೆಯಲ್ಲಿ ಜಿಗಿಜಿಗಿ ಲೈಟಿಂಗ್ಸ್ ಆಭಾಸವೇ ಸರಿ.
ನೈಸರ್ಗಿಕ ಲುಕ್ಕು
ಗೋಡೆ ಚಿತ್ರ, ತೈಲಚಿತ್ರ ಇತ್ಯಾದಿ ಗೋಡೆಯ ವಿಸ್ತಾರಕ್ಕೆ ಸರಿಯಾಗಿ ಜೋಡಿಸಿಟ್ಟರೆ ನೋಡುಗರಿಗೆ ಮನೋಲ್ಲಾಸ. ರೂಮ್ ಸುಂದರವಾಗಿ ವಿನ್ಯಾಸಗೊಂಡಿದ್ದರೆ ಪ್ರಶಾಂತ ವಾತಾವರಣ ಸೃಷ್ಟಿಯಾಗಿ ಕ್ಷೇಮಯುತ ಮಾತುಗಳು ಹೊಮ್ಮುತ್ತವೆ. ಕೊಠಡಿಯಲ್ಲಿ ನೀರಿನ ತಾಣಗಳನ್ನು ನಿರ್ಮಿಸಿದರೆ ಉತ್ತಮ. ಚಿಕ್ಕದಾದ ಕೆರೆ, ನೀರಿನ ತೊರೆ, ಝರಿಯಂತೆ ಕೃತಕವಾಗಿ ನಿರ್ಮಿಸಿದರೂ ನೈಸರ್ಗಿಕ ಹವಾ ನೀಡುವಂತಿರಬೇಕು. ಅಕ್ವೇರಿಯಂ ಇದ್ದರೆ ಇನ್ನಷ್ಟು ಕಳೆ. ಜಾಗರೂಕತೆಯಿಂದ ವ್ಯವಸ್ಥೆಯ ಬಗ್ಗೆ ನಿಗಾ ಇರಲಿ.
ಕಿಟಕಿ ಕಳೆ
ತೆಳು ಬಣ್ಣ ಕೊಠಡಿಯ ಸೌಂದರ್ಯವನ್ನು ಹಿಗ್ಗಿಸುತ್ತದೆ. ಕಡು ಬಣ್ಣಗಳ ಬಳಕೆ ಕೊಠಡಿಯನ್ನು ಸುಖೋಷ್ಣತೆಯಲ್ಲಿಡುತ್ತದೆ. ಚಿತ್ತಾರಗಳನ್ನೊಳಗೊಂಡ ಪರದೆಗಳು ಹಿತ. ಇಲ್ಲೂ ಪರದೆಗಳ ಬಣ್ಣಗಳಿಗೆ ಪ್ರಾಮುಖ್ಯ ಬೇಕು.
- ಮಂಜುನಾಥ್ ಎಲ್.ಕೆ.