

ನನ್ನಮ್ಮ ನಾಲ್ಕೂವರೆ ಅಡಿಯ, ನೀಳ ಜಡೆಯ ನೀಲವೇಣಿ. ಗಲ್ಲದಲ್ಲಿ ಮಚ್ಚೆ, ಎಲ್ಲರನ್ನೂ ಅನುಕರಿಸುವ ಪುಟ್ಟಬಾಯಿಯ ಮಾತಿನಮಲ್ಲಿ. ಮನೆಯವರಿಗಾಗಿ ಗಂಧದಂತೆ ಸವೆದ ದೇವತೆ.
ಹೌದು ನನ್ನಮ್ಮ ಮಾತಿನ ಮಲ್ಲಿ. ಮನೆಮಂದಿಯ, ನೆರೆಹೊರೆಯವರ ಮಾತು ಹಾವ-ಭಾವವನ್ನು ಯಥಾವತ್ತಾಗಿ ಅನುಕರಿಸುವ ಕಲಾವಿದೆ. ನನ್ನ ತಾತ ರಂಗಕಲಾವಿದರು. ಅಂದಮೇಲೆ ಇಷ್ಟಾದರು ಬೇಡವೇ? ಮನೆಯ ಅಲಂಕಾರದ ಎಲ್ಲಾ ಕರಕುಶಲ ಕಲೆ ಬಲ್ಲವಳು. ನನ್ನನ್ನು ವಿವಿಧ ರೀತಿ ಅಲಂಕರಿಸಿ ಖುಷಿಪಡಬೇಕೆಂಬ ತವಕ ಆಕೆಯದು. ಅದಕ್ಕೆ ಸರಿಯಾಗಿ ಅಲಂಕಾರ ಮಾಡಿಸಿಕೊಳ್ಳಲು ನಾನು ತುದಿಗಾಲಲ್ಲಿ ನಿಲ್ಲುತ್ತಿದ್ದೆ. ನಾನು ನಡೆದಾಡಲು ಪ್ರಾರಂಭಿಸಿದಾಗಿನಿಂದ ಪ್ರತಿ ಗೌರಿಹಬ್ಬಕ್ಕೆ ಮೊಗ್ಗಿನ ಜಡೆ ಹಾಕಿ ಫೋಟೊ ತೆಗೆಸುತ್ತಿದ್ದರು.
ತೀರಾ ಚಿಕ್ಕ ಹುಡುಗಿಗೆ ಚೌರಿ ಸೇರಿಸಿ ಉದ್ದ ಜಡೆ ಮಾಡಿ ಕುಚ್ಚು ಕಟ್ಟಿ ಸಿದ್ಧವಾದ ಮೊಗ್ಗಿನ ಜಡೆ ಕೂರಿಸಿ ಹೊಲಿದು, ತುರುಬಿಗೆ ಬಿಲ್ಲೆಯನ್ನು ಹೊಲಿದು ಬಂಗಾರದ ಝುಮುಕಿ, ಮುತ್ತಿನ ಸರ ಹಾಕಿ ಫೋಟೊ ತೆಗೆಸಿಕೊಳ್ಳುವುದೇ ಆ ದಿನದ ಹಬ್ಬ. ಸ್ವಲ್ಪ ಎತ್ತರ ಬೆಳೆದ ಮೇಲೆ ನಮ್ಮಪ್ಪ ಸ್ವತಃ ಟೈಲರ್ ಆದ ಕಾರಣ ಎರಡೇ ಗೇಣಿಗೆ ಕಟ್ಟುವ ಸೀರೆ ಲಂಗ, ಒಂದೇ ಗೇಣಿನ ಕುಬುಸ ಹೊಲಿದುಕೊಡುತ್ತಿದ್ದರು. ಸೀರೆಯನ್ನು ಎರಡು ಮಡಿಕೆ ಮಡಚಿ ಉಡಿಸಿ ಅಲಂಕರಿಸಿ ಬೇಗ ಫೋಟೊ ತೆಗೆಯುವವನನ್ನು ಕರೆದು ತಾ ಮೇಕಪ್ ಹಾಳಾಗಿಬಿಡುತ್ತದೆ, ಮೊಗ್ಗು ಅರಳುತ್ತವೆ, ಚೆನ್ನಾಗಿರಲ್ಲ ಅಥವಾ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಫೋಟೊ ತೆಗೆಸಿಕೊಂಡು ಬಾ ಎಂದು ಜೀವ ತಿನ್ನುತ್ತಿದ್ದಳು ಅಮ್ಮ.
ಫೋಟೊಗ್ರಾಫರ್ ಬಂದ ಕೂಡಲೆ ನಡುಮನೆಯ ಗೋಡೆಗೆ ತನ್ನ ಹೊಸಾ ಸೀರೆಯನ್ನು ತೆರೆಯ ಹಾಗೆ ಕಟ್ಟಿ ಹಿಂದೆ ನಿಲುವುಗನ್ನಡಿ ಹಿಡಿದು ಹಿಂದೆ ಜಡೆ ಮುಂದೆ ನಾನು ಕಾಣುವಂತೆ ಫೋಟೊ ತೆಗೆಸುತ್ತಿದ್ದಳು. ಮುಖ ಗಂಟು ಹಾಕ್ಕೊಬೇಡ. ಸ್ವಲ್ಪ ನಗೇ... ಅಂತ ಕಿಚಾಯಿಸುತ್ತಿದ್ದಳು. ಈ ಮೊಗ್ಗಿನ ಜಡೆ ಸಂಭ್ರಮ ನಾನು ಪ್ರೈಮರಿ ಶಾಲೆ ಮುಗಿಯುವವರೆಗೆ ಮಾತ್ರ ಇತ್ತು. ನಂತರ ಅಮ್ಮನೂ ಕೆಲಸದ ಒತ್ತಡದಿಂದ ಆಸಕ್ತಿ ಕಳೆದುಕೊಂಡಳು. ಪ್ರೌಢಾವಸ್ಥೆಗೆ ಬಂದ ಮೇಲೆ ನನಗೂ ನಾಚಿಕೆ ಪರದೆ ಆವರಿಸಿ ಮೊಗ್ಗಿನ ಜಡೆ ಮಾಸಿಹೋಯಿತು.
ನನ್ನಮ್ಮನದು ಬಾಲ್ಯ ವಿವಾಹ. 13ನೇ ವಯಸ್ಸಿಗೆ ಮದುವೆ ಆದಾಕೆಗೆ ನನ್ನ ಆಗಮನ ಆಡುವ ಕೈಗೆ ಮಗು ಕೊಟ್ಟಂತಾಗಿತ್ತು. ಅದಕ್ಕೇ ಬೊಂಬೆಗೆ ಅಲಂಕರಿಸುವ ಹಾಗೆ ಅಲಂಕರಿಸಿ ಆನಂದಿಸಿದ್ದಾರೆ ಎಂದು ನನಗನ್ನಿಸುತ್ತದೆ. ಈಗ ನಾನು ಎಷ್ಟು ಚಂದವಾಗಿ ಸೀರೆ ಉಟ್ಟರೂ, ವಿಭಿನ್ನ ಶೈಲಿಯಲ್ಲಿ ಕೇಶಾಲಂಕಾರ ಮಾಡಿಕೊಂಡರೂ ಅಮ್ಮ ಉಡಿಸಿದಷ್ಟು, ಬಾಚಿದಷ್ಟು ತೃಪ್ತಿ ಕೊಡುವುದಿಲ್ಲ. ಅವರು ಮಾಡುತ್ತಿದ್ದ ಅಲಂಕಾರದ ಸುಖವೇ ಬೇರೆ.
ಇಂದು ಈ ಅದೃಷ್ಟ ಗೃಹಿಣಿಯರಾಗಿರುವವರ ಮಕ್ಕಳಿಗೆ ಇರಬಹುದು. ನೌಕರಿಗೆ ಹೋಗುವ ಮಹಿಳೆಯರಿಗೆ ಸ್ನಾನ ಮಾಡಿದ ತಲೆಯನ್ನೇ ಒಣಗಿಸಿಕೊಳ್ಳಲು, ಎಣ್ಣೆ ಹಚ್ಚಿಕೊಳ್ಳಲು ಪುರುಸೊತ್ತಿಲ್ಲದಾಗ ಪುಟ್ಟ ಮಗಳಿಗೆ ಅಲಂಕಾರದ ಒಡನಾಟ, ಆ ಸುಂದರ ಅನುಭವ ಕೊಡಲು ಸಾಧ್ಯವೆ? ನಾವು ಪಿಯುಸಿ ಮುಗಿಸುವವರೆಗೆ ಅಮ್ಮ ತಲೆಗೆ ಎಣ್ಣೆ ಹಾಕಿ ಬಾಚುತ್ತಿದ್ದಳು. ಇಂದು ಬಾಬ್ಕಟ್ ಮಾಡಿಸಿದರಾಯಿತು, ಕನ್ನಡಿಮುಂದೆ ನಿಂತು ಮಗಳೇ ಬಾಚಣಿಗೆಯನ್ನು ತಲೆಗೆ ಗೀರಿಕೊಂಡರಾಯಿತು. ಅವರಿಗೆ ಮೊಗ್ಗಿನ ಜಡೆಯ ವ್ಯವಧಾನವೆಲ್ಲಿಯದು?
ಪುಟ್ಟ ಮಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ರಾಧೆಯಂತೆಯೋ ಶ್ರೀಕೃಷ್ಣನಂತೆಯೋ ಅಲಂಕರಿಸುತ್ತಾರೆ. ಅದೂ ಸ್ಪರ್ಧೆಯಲ್ಲಿ, ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಮಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡಿ ಬಟ್ಟೆ, ಮೇಕಪ್ ಕಿಟ್ ಕೊಡಿಸಿ, ನಿಮ್ಮ ಮಿಸ್ ಹತ್ರ ರೆಡಿ ಮಾಡಿಸಿಕೊ. ಇಲ್ಲವೆ ಶಾಲೆಗೆ ಬ್ಯೂಟೀಷಿಯನ್ ಬರುತ್ತಾರೆ ಎಂದು ಜವಾಬ್ದಾರಿಯಿಂದ ಮುಕ್ತರಾಗುವವರೇ ಹೆಚ್ಚು. ಹೀಗಿರುವಾಗ ಮೊಗ್ಗಿನ ಜಡೆಯ ಮಾತೆಲ್ಲಿ?
ಈ ಅಲಂಕಾರ ಕೇವಲ ಮದುವೆಗೆ ಮಾತ್ರ ಸೀಮಿತವಾಗಿದೆ. ವಧುವಿಗೆ ಮೊಗ್ಗಿನ ಜಡೆ ಹಾಕಿಸಿ ಅದೂ ಕಾಣದ ಹಾಗೆ ಮೇಲ್ಮುಸುಕು ತೊಡಿಸಿ ವಿವಿಧ ಭಂಗಿಗಳಲ್ಲಿ ಫೋಟೊ ತೆಗಿಸಿ ಕಿತ್ತು ಎಸೆದರಾಯಿತು. ಜತೆಗೆ ನಾಗರ ಬಿಲ್ಲೆಗಳನ್ನು ಮಧ್ಯ ಇರಿಸಿರುವ ರೆಡಿಮೇಡ್ ಜಡೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ನೈಸರ್ಗಿಕ ಸೌಂದರ್ಯ ಕೊಡುವ ಆನಂದವನ್ನು ಕಬಳಿಸಿಬಿಟ್ಟಿದೆ. ಇಂದು ಸೊಂಪಾಗಿ ಬೆಳೆಯುವ ಮಗಳ ಕೂದಲಿಗೆ ಕತ್ತರಿ ಹಾಕಿ ಕೊತ್ತಂಬರಿ ಸೊಪ್ಪಿನ ಹಾಗೆ ಜುಟ್ಟುಮಾಡಿ ಬಿಡುವುದು ವಾಡಿಕೆ!
- ಶಿಲ್ಪಶ್ರೀ ಯು.