ವಿದ್ಯಾಳ ನೃತ್ಯ ವಿದ್ವತ್ತು

ವಿದ್ಯಾಳ ನೃತ್ಯ ವಿದ್ವತ್ತು
Updated on: 

ಡಾ.ಶ್ರೀವಿದ್ಯಾ ಮುರಳೀಧರ್ ಭರತನಾಟ್ಯದಲ್ಲಿ ಖ್ಯಾತಿವೆತ್ತ ಕಲಾವಿದೆ. ಕಲೆ ಅವರಿಗೆ ಪರಂಪರಾಗತವಾಗಿ ಬಂದ ಆಸ್ತಿ. ಅಜ್ಜ ಕೃಷ್ಣ ಮಣಿಯಾಣಿ ಹೆಸರಾಂತ ಯಕ್ಷಗಾನ ಕಲಾವಿದರು. ಅಜ್ಜಿ ಸರಸ್ವತಮ್ಮ ಸಂಗೀತ ವಿದುಷಿ.
ಮೂರನೇ ವಯಸ್ಸಿನಲ್ಲೇ ಗೆಜ್ಜೆ ಕಟ್ಟಿದ ಶ್ರೀವಿದ್ಯಾಗೆ ಕಲಾರಾಧಕರಾದ ತಂದೆ ರಾಮನ್, ತಾಯಿ ಶಾರದಾ ಪ್ರೋತ್ಸಾಹವಿತ್ತರು. ಮೈಸೂರಿನ ಶ್ರೀಕಂಠದತ್ತ ಒಡೆಯರ್ ಅವರಿಂದ ಚಿನ್ನದ ಪದಕ ಪಡೆದಾಗ ಶ್ರೀವಿದ್ಯಾ ಇನ್ನೂ ಎಂಟರ ಬಾಲೆ. ಮೊದಲ ಗುರು ರಾಜೇಶ್ವರಿ ಸುಬ್ಬರಾವ್. ಬಳಿಕ ಗೆಜ್ಜೆಯ ಹೆಜ್ಜೆಗೆ ನಾದ ತುಂಬಿದವರು ನಾಟ್ಯಾಚಾರ್ಯ ಕೆ. ಮುಳೀಧರರಾಯರು.
ಕೊಡಗಿನ ನೃತ್ಯ ಸೌರಭದ ಪ್ರಾಚಾರ್ಯೆಯಾಗಿ ಎರಡು ದಶಕಗಳಿಂದ ವಿದ್ಯಾರ್ಥಿಗಳಿಗೆ ನೃತ್ಯ ದೀಕ್ಷೆ ನೀಡಿದ ಶ್ರೀವಿದ್ಯಾ ಶ್ರೀ ರಾಮಾಯಣ ದರ್ಶನಂ, ಶ್ರೀಕೃಷ್ಣಲೀಲಾ, ಗೋಕುಲ ಕೃಷ್ಣ ಮುಂತಾದ ನೃತ್ಯ ನಾಟಕಗಳನ್ನು ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ, ನೃತ್ಯವಿದ್ಯೆಯನ್ನು ಉಚಿತವಾಗಿ ಧಾರೆಯುತ್ತಾರೆ.
'ಸೌರಭ ಪರ್‌ಫಾರ್ಮಿಂಗ್ ಆರ್ಟ್ ಸೆಂಟರ್ ಮೂಲಕ ದುಬೈನ ಅನೇಕ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿದ್ದಾರೆ. ಭರತನೃತ್ಯದ ವಿಷಯದಲ್ಲಿ ಪಿಎಚ್‌ಡಿ ಮಾಡಿ ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದವರಲ್ಲಿ ಮೊದಲಿಗರಾದ ಶ್ರೀವಿದ್ಯಾ, ಈ ಪದವಿ ಗಳಿಸಿದ ಕನ್ನಡಿಗರಲ್ಲಿ 3ನೆಯವರು. ಒಡಿಸ್ಸಿ, ಕೂಚುಪುಡಿ, ಮೋಹಿನಿಯಾಟ್ಟಂ ಪ್ರಕಾರಗಳಲ್ಲೂ ಪರಿಣಿತೆ. 'ನಾಟ್ಯ ಮಯೂರಿ', 'ಗೋಲ್ಡ್ ಆಫ್ ಕರ್ನಾಟಕ' ಬಿರುದುಗಳು ಸಂದಿವೆ. ಇವರೇ ಬರೆದ 'ಭಾವರಸ ನಿರೂಪಣಂ' ಗ್ರಂಥವನ್ನು ಕಸಾಪ ಪ್ರಕಟಿಸಿದೆ. ಕೇಂದ್ರ ನೃತ್ಯ ಅಕಾಡೆಮಿ ಫೆಲೋಷಿಪ್ ನೀಡಿ ಗೌರವಿಸಿದೆ.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com