

ಸಾಮಾನುಗಳನ್ನು ಸಂರಕ್ಷಿಸಲು ಮನೆಯಲ್ಲಿ ಎಷ್ಟು ಜಾಗವಿದ್ದರೂ ಅದು ಕೆಲವೊಮ್ಮೆ ಕಡಿಮೆಯೇ. ಹೀಗಾಗಿ ಇದಕ್ಕೆಂದೇ ಪ್ರತ್ಯೇಕ ಕೋಣೆಗಳನ್ನೂ ನಿರ್ಮಿಸುವವರಿದ್ದಾರೆ. ಅದಕ್ಕಾಗಿ ಸ್ಟೋರ್ ರೂಮ್ ಅರ್ಥಾತ್ ಸಂಗ್ರಹ ಕೋಣೆಯೂ ಸಿದ್ಧವಾಗಿರುವುದು ಇದೆ.
ಆದರೆ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಬೇಕಾದರೆ, ಮನೆಯಲ್ಲಿ ಜಾಗ ಸಾಲದು. ಬದಲಾಗಿ ದೊಡ್ಡದಾದ ಸಂಗ್ರಹ ಕೋಣೆಗಳೇ ಬೇಕಾಗುತ್ತವೆ. ಉತ್ತರ ಕರ್ನಾಟಕದಲ್ಲಾದರೆ ಹಗೆ (ಭೂಮಿಯೊಳಗೆ ಎಂಟರಿಂದ ಹತ್ತು ಅಡಿಯಷ್ಟು ಆಳವಾಗಿ ಅಗೆದಿರುವ ಭೂಮಿ)ಯಲ್ಲಿ ಜೋಳ, ಗೋಧಿಯಂಥ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ, ಬೇರೆ ಕಡೆ ಏನು ಮಾಡುತ್ತಾರೆ. ಇಲ್ಲಿದೆ ಒಂದು ತಾಜಾ ನೋಟ.
ದೂರದಿಂದ ನೋಡಿದರೆ ಮೀನಿನಂತೆ ಕಾಣುವ ಇದು ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲೆಂದು ನಿರ್ಮಿಸಿದ ವಿಶಿಷ್ಟ ಮನೆ. ಇದಕ್ಕೆ ನಾಲ್ಕು ಬಾಗಿಲುಗಳಿವೆ. ಒಳಗೆ ವೃತ್ತಾಕಾರವಾಗಿದ್ದು 50 ಅಡಿ ಸ್ಥಳಾವಕಾಶವಿದೆ. ಒಂದು ಟ್ರಾಕ್ಟರ್ ಅನ್ನು ಸಲೀಸಾಗಿ ಒಳಗೆ ತಿರುಗಿಸಬಹುದು. ಯಾವ ದ್ವಾರದಿಂದ ನೋಡಿದರೂ ಅದು ಮೀನಿನಂತೆ ಕಾಣಿಸುವುದು ಇದರ ವೈಶಿಷ್ಟ್ಯ.
ಈ ಮನೆಯಿರುವುದು ಸುಳ್ಯದ ಆರಂಬೂರಿನಲ್ಲಿರುವ ರವಿಶಂಕರ ಭಾರದ್ವಾಜರ ಮನೆಯಂಗಳದಲ್ಲಿ. ತೂಗುಸೇತುವೆಗಳ ಸರದಾರನೆಂದು ಖ್ಯಾತರಾದ ಗಿರೀಶ ಭಾರದ್ವಾಜರು ಇದನ್ನು ಕಟ್ಟಿದವರು. ವಿಶೇಷವೆಂದರೆ, ಅವರಿಗೆ ಇದರ ನಿರ್ಮಾಣಕ್ಕೆ ತೆಂಗಿನ ಚಿಪ್ಪಿನ ಆಕಾರವೇ ಪ್ರೇರಣೆ. ತೆಂಗಿನ ಚಿಪ್ಪನ್ನು ಕವುಚಿ ಹಾಕಿದರೆ ಹೇಗಿರುತ್ತದೋ ಅದೇ ರೀತಿಯಲ್ಲಿ ಅದರ ನಿರ್ಮಾಣವಾಗಿದೆ. ಎರಡು ಅಡಿಗೆ ಒಂದರಂತೆ ನಾಲ್ಕು ಎಂಎಂ ಅಳತೆಯ ಕಬ್ಬಿಣದ ಕಂಬಿಗಳನ್ನು ಕಮಾನಿನಂತೆ ಬಾಗಿಸಿ ಕೋಳಿಗೂಡಿನ ಕಬ್ಬಿಣದ ಬಲೆಯನ್ನು ಹೆಣೆದಿದ್ದಾರೆ. ಜಲ್ಲಿ ಇಟ್ಟಿಗೆ ಕಲ್ಲು ಬಳಸಿಲ್ಲ. ತಳಪಾಯ ಹಾಕಿಲ್ಲ. ಮರಳು ಮತ್ತು ಸಿಮೆಂಟನ್ನು ಅಗತ್ಯ ಪ್ರಮಾಣದಲ್ಲಿ ಬೆರೆಸಿ ತುಂಬಿಸಿ ಭದ್ರಗೊಳಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಈ ವಿಶಿಷ್ಟ ಮನೆಯ ರಚನೆಗೆ ಎಂಬತ್ತು ಸಾವಿರ ರುಪಾಯಿ ಖರ್ಚಾಗಿದೆ. ಅಡಕೆ ಭತ್ತ ಎಲ್ಲ ಇದರಲ್ಲಿ ಸುರಕ್ಷಿತವಾಗಿ ಶೇಖರಿಸಬಹುದು. ಬೇಕೆನಿಸಿದರೆ ನಿಮಗೂ ಇಂಥ ಮನೆ ಕಟ್ಟಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, 9448529854.
- ಪ. ರಾಮಕೃಷ್ಣ ಶಾಸ್ತ್ರಿ