

ಅವತ್ತು ಬರ್ಬರ ಅತ್ಯಾಚಾರಕ್ಕೆ ಒಳಗಾದ ನಿರ್ಭಯಾ ಆಸ್ಪತ್ರೆಯಲ್ಲಿ ಸಾವನ್ನು ಸಮೀಪಿಸುತ್ತಿರುವಾಗ, ಇತ್ತ ದೊಡ್ಡ ಜನಸಮೂಹವೊಂದು ಆಕೆಗೆ ಕಂಬನಿ ಮಿಡಿಯುತ್ತಲೇ ಆಕ್ರೋಶದಿಂದ ಎದ್ದುನಿಂತಿತ್ತು. ಅವಳನ್ನು ಆ ನರಕಕ್ಕೆ ದೂಡಿದವರಿಗೆ ಕಠಿಣ ಶಿಕ್ಷೆಯಾಗಲಿ, ಮಹಿಳೆಯರ ಮೇಲಿನ ಅತ್ಯಾಚಾರ ಕೊನೆಯಾಗಲಿ ಎಂದು ಇಂಡಿಯಾ ಗೇಟ್ ಬಳಿ ನೆರೆದಿದ್ದ ಜನಸಾಗರ, 'ಸಾಕಿನ್ನು' ಎಂದು ಎದ್ದುನಿಂತ ಭಾರತದ ಬಿಂಬವೊಂದನ್ನು ಕಟ್ಟಿಕೊಟ್ಟಿತ್ತು. ಅದನ್ನು ಗಮನಿಸಿದವರಿಗೆ, 'ಇಲ್ಲ, ಇನ್ನು ಅತ್ಯಾಚಾರ- ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯಗಳು ಗಣನೀಯವಾಗಿ ತಗ್ಗುವ ಕಾಲ ಬಂದಿದೆ. ಈ ಪರಿ ಜನಾಕ್ರೋಶವನ್ನು ಪತ್ರಿಕೆ- ಟಿವಿಗಳಲ್ಲಿ ಗಮನಿಸುತ್ತಿರುವ ಯಾರೇ ಆದರೂ ತುಸುವಾದರೂ ಚುರುಕು ಮುಟ್ಟಿಸಿಕೊಳ್ಳುತ್ತಾರೆ. ಮಹಿಳೆಯ ಮೇಲೆ ಆಕ್ರಮಣ ಮನೋಭಾವ ತೋರಿಸುವುದಕ್ಕೂ ಮುಂಚೆ ಈ ಪ್ರತಿಭಟನೆಯ ದೃಶ್ಯ ಕಣ್ಣೆದುರು ತಂದುಕೊಂಡು ಹೆದರುತ್ತಾರೆ' ಎಂಬ ಆಶಾಭಾವ, ಸಮಾಜ ಜಾಗೃತವಾಗಿದೆ ಎಂಬ ಭರವಸೆಯ ಧ್ವನಿ ಅನುರಣಿಸಿದಂತಾಗಿತ್ತು.
ಆದರೆ... ಮುಂಬೈ, ಬೆಂಗಳೂರು, ಮಂಗಳೂರು, ಹರ್ಯಾಣ, ದೆಹಲಿ... ಎತ್ತ ಕಣ್ಣು ಹಾಯಿಸಿದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಸಮಾಚಾರಗಳೇ ಅತಿಯಾಗಿ ಹರಿದುಬರುತ್ತ ಖಿನ್ನರನ್ನಾಗಿಸುತ್ತಿವೆ. ಹಾಗೆ ನೋಡಿದರೆ ಸಮಾಜ ಎಚ್ಚೆತ್ತುಕೊಂಡಿರುವುದು, ಅತ್ಯಾಚಾರ ಪ್ರಕರಣಗಳನ್ನು ಹಿಂದಿಗಿಂತ ಗಂಭೀರವಾಗಿ ಹಾಗೂ ಆಕ್ರೋಶಿತ ಮನೋಭಾವದಿಂದ ನೋಡುತ್ತಿರುವುದು ಸುಳ್ಳಲ್ಲ. 'ಅತ್ಯಾಚಾರಿಯನ್ನು ಗಲ್ಲಿಗೇರಿಸಿ' ಎಂದೇ ಜನಸಮೂಹದ ಒಡಲಿನಿಂದ ಕೇಳಿಬರುತ್ತಿರುವ ಕೂಗು. ಕಾನೂನಿನ ವಿಷಯದಲ್ಲಿ ಬದಲಾಗಬೇಕಿರುವ ಸಂಗತಿಗಳು ಇನ್ನೂ ಇವೆ ನಿಜ. ಅತ್ಯಾಚಾರದಂಥ ವಿಕೃತಿಯನ್ನು ನಡೆಸುವ ಬಲ ಪ್ರದರ್ಶಿಸಿದವನನ್ನು, ಆತನಿಗೆ 18 ವರ್ಷ ತುಂಬಿರಲಿಲ್ಲ ಎಂಬ ಕಾರಣಕ್ಕೆ ಅತಿ ಕಡಿಮೆ ಶಿಕ್ಷೆಗೆ ಸೀಮಿತಗೊಳಿಸುವ ಅಸಹಾಯಕ ಪರಿಸ್ಥಿತಿಯಲ್ಲಿ ಕಾಯ್ದೆ-ಕಟ್ಟಳೆ ಇರುವುದು ಶೋಚನೀಯ. ಇಷ್ಟಾಗಿಯೂ ನಿರ್ಭಯಾ ಪ್ರಕರಣದ ನಂತರ ನ್ಯಾಯಾಲಯಗಳ ಸಂವೇದನೆ ಇನ್ನಷ್ಟು ಚುರುಕುಗೊಂಡಿದೆ. ಅತ್ಯಾಚಾರಕ್ಕೆ ಒಳಗಾದವಳಿಗೆ ಪದೇ ಪದೆ ವಿಚಾರಣೆಯ ಕಷ್ಟ ಕೊಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಸಕಾರಾತ್ಮಕ ಬದಲಾವಣೆಗಳಲ್ಲೊಂದು.
ಇಷ್ಟೆಲ್ಲ ಆದರೂ ಅತ್ಯಾಚಾರದ ಮನಸ್ಥಿತಿಯ ಪುರುಷನ ಎದೆಯಲ್ಲೇಕೆ ಭಯವೊಂದು ಮಡುಗಟ್ಟಿಲ್ಲ? ಅದೇಕೆ ಪ್ರತಿದಿನ ಪತ್ರಿಕೆ ತೆರೆದಾಗಲೂ ಅತ್ಯಾಚಾರ ಹಾಗೂ ಲೈಂಗಿಕ ಹಲ್ಲೆಯ ಸುದ್ದಿಗಳನ್ನೇ ಹೆಚ್ಚಾಗಿ ಓದಬೇಕಾದ ಸ್ಥಿತಿ ಇದೆ? ಈ ಪ್ರಶ್ನೆ ಬಂದಾಗಲೆಲ್ಲ ಕಾನೂನು ಹಾಗೂ ಆ ಕ್ಷಣದ ಆಕ್ರೋಶದಾಚೆ ಯೋಚಿಸುವಂತಾಗುತ್ತದೆ.
ಯಾವ ಅತ್ಯಾಚಾರಕ್ಕೂ ಸಹಾನೂಭೂತಿಯ ಅಗತ್ಯ ಇಲ್ಲವಾದರೂ ಎಲ್ಲ ಅತ್ಯಾಚಾರಗಳನ್ನೂ ಒಂದು ತಕ್ಕಡಿಯಲ್ಲಿ ತೂಗಲಾಗದು. ಕಾಮಾತುರಕ್ಕೆ ಬಿದ್ದು ನಡೆಯುವ ಅತ್ಯಾಚಾರಗಳು ಕೆಲವು ಮಾತ್ರ. ವಾಸ್ತವದಲ್ಲಿ ಅತ್ಯಾಚಾರದ ಹಿಂದಿರುವ ಪರಿಕಲ್ಪನೆಯೇ ಬಲಪ್ರದರ್ಶನ. 'ನೀನು ನನಗೆ ಸೇರಿದವಳು ಹಾಗೂ ನಿನ್ನನ್ನು ದಕ್ಕಿಸಿಕೊಳ್ಳಬಲ್ಲೆ' ಎಂಬ ಹೇಳಿಕೆಯೊಂದರ ಅತಿವಿಕೃತ ಅಭಿವ್ಯಕ್ತಿಯೇ ಅತ್ಯಾಚಾರ. ಹಾಗೆಂದೇ ಅರವತ್ತರ ವೃದ್ಧೆಯ ಮೇಲೂ ಅತ್ಯಾಚಾರವಾಗುತ್ತದೆ. ತಾನು ಆಕೆಗಿಂತ ಮೇಲು ಎಂಬುದನ್ನು ನಿರೂಪಿಸುವುದಕ್ಕೆ ಪುರುಷ ಏನೆಲ್ಲ 'ಇಗೋ' ಆಟಗಳನ್ನು ಹೆಣೆಯುತ್ತಾನೆ. ಅವನ ಅಹಮಿಕೆಯ ತೀವ್ರತೆ ಎಷ್ಟಿದೆ ಎಂಬುದರ ಮೇಲೆ ಈ ಆಟ ಕೆಲವೊಮ್ಮೆ ತಮಾಷೆಯದ್ದಾಗಿಯೂ, ಕೆಲ ಹಂತಗಳಲ್ಲಿ ಕಿರಿಕಿರಿಯದ್ದಾಗಿಯೂ ಆಗಿರುತ್ತದೆ. ಪಿಎಚ್‌ಡಿ ಗೈಡ್ ತನ್ನ ವಿದ್ಯಾರ್ಥಿನಿಯನ್ನು ಹಾಸಿಗೆಗೆ ಬಲವಂತಿಸುವುದು ತಾನು ಅದನ್ನು ದಕ್ಕಿಸಿಕೊಳ್ಳಬಲ್ಲೆ ಎಂಬುದನ್ನು ಸಾಬೀತುಪಡಿಸುವುದಕ್ಕೆ. ಒಳ್ಳೆ ಡ್ರೆಸ್ ಮಾಡಿಕೊಂಡು ಕೆಲಸಕ್ಕೆ ಹೋಗುವವಳನ್ನು ನೋಡುತ್ತ, 'ಹುಡುಗಿಯಾದರೂ ನನಗಿಂತ ಮೇಲಿದ್ದಾಳೆ' ಎಂದು ಹತಾಶಗೊಳ್ಳುವ ಬೀದಿಬದಿಯ ಹುಡುಗ ಸಮಯಸಾಧಿಸಿ ಆಕೆಯ ಮೇಲೆ ಬೀಳುವುದು ಆ ಮೂಲಕವಾದರೂ ತಾನು 'ಬಲಿಷ್ಠ' ಎಂದು ತೋರಿಸಿಕೊಳ್ಳುವುದಕ್ಕೆ. ಕೊನೆಗೂ ಅತ್ಯಾಚಾರ ಎಂಬುದು ಒಂದು 'ಪವರ್ ಸ್ಟೇಟ್‌ಮೆಂಟ್'!
ಹೀಗಾಗಿ ಅತ್ಯಾಚಾರ ಅಂತ್ಯವಾಗುವುದಕ್ಕೆ ಕಾನೂನುಗಳನ್ನು ಬಲಪಡಿಸುವ, ಹುಡುಗಿಯರು ಆತ್ಮರಕ್ಷಣೆಗೆ ಕರಾಟೆ ಕಲಿಯುವ ಕ್ರಮಗಳೆಲ್ಲ ಚರ್ಚೆಯಾದಂತೆಯೇ ಇವೆಲ್ಲಕ್ಕೂ ಅಗತ್ಯವಾಗಿ ಗಮನಿಸಬೇಕಾದ ಸಂಗತಿ 'ಹುಡುಗರನ್ನು ಬೆಳೆಸುವ' ಬಗ್ಗೆ. ನಮ್ಮ ಮನೆಯ ಹುಡುಗಿಯರ ಸುರಕ್ಷತೆ ಬಗ್ಗೆ ತೀರಾ ಕಳವಳಗೊಂಡಿರುವ ಈ ಹೊತ್ತಿನಲ್ಲಿ ನಾವು ನಿಜಕ್ಕೂ ಯೋಚಿಸಬೇಕಿರುವುದು ಹುಡುಗರ ಬಗ್ಗೆ! ಪುರುಷ- ಮಹಿಳೆಯರು ಸಮಾನರು ಎಂಬುದು ಭಾಷಣ ಹೊಡೆದು ಮನದಟ್ಟಾಗಿಸುವ ವಿಷಯವಲ್ಲ. ಬೆಳೆವಣಿಗೆ ಹಂತದಲ್ಲೇ ಹುಡುಗರ ಎದೆಯಲ್ಲಿ ನಾಟಿ ಮಾಡಬೇಕಾದ ಧೋರಣೆ ಅದು. ಅತಿಯಾಗಿ ಅಳುತ್ತಿರುವ ಹುಡುಗನನ್ನು ನೀವು ಹೇಗೆ ಸುಮ್ಮನಾಗಿಸುತ್ತೀರಿ? 'ಇದೇನೋ... ಒಳ್ಳೆ ಹೆಣ್ಮಕ್ಕಳ ಹಾಗೆ ಅಳ್ತಿದ್ದೀಯಲ್ಲ ಛೀ, ಛೀ..'. ನೀನು ಹೆಣ್ಣಿಗಿಂತ ಬಲಿಷ್ಠ ಹಾಗೂ ಅದನ್ನು ಪ್ರೂವ್ ಮಾಡಬೇಕಾದ ಜವಾಬ್ದಾರಿ ನಿನಗಿದೆ ಅಂತ ಆಗಲೇ ಸಂದೇಶ ರವಾನೆಯಾಗುತ್ತದೆ. 'ಕತ್ತಲು ಅಂದ್ರೆ ಹೆದರ್ತೀಯಾ, ಹೆಣ್ಮಕ್ಕಳ ಥರ', 'ಆ ಹುಡುಗಿನೇ ಅಷ್ಟು ಚೆನ್ನಾಗಿ ಕಾರು ಓಡಿಸ್ತಾಳೆ, ಹುಡುಗನಾಗಿ ನಿಂಗೆ ಬರಲ್ಲ ಅಂದ್ರೆ ನಾಚ್ಗೆ ಆಗ್ಬೇಕು', 'ನಿನ್ ಕೈಲಿ ಇದಾಗಲ್ಲ, ಬಳೆ ತೊಟ್ಕೋ'... ಹೀಗೆ ಪ್ರಬಲ-ದುರ್ಬಲ ಕಲ್ಪನೆಗಳು ಪುರುಷ-ಸ್ತ್ರೀಯರ ನಡುವೆ ನಿತ್ಯವೂ ಹಂಚಲಾಗುತ್ತದೆ. 'ನನ್ಮಗನಿಗೆ ಕಾಫಿ ಮಾಡ್ಕೋಳಕ್ಕೂ ಬರಲ್ಲ' ಅಂತ ಅಭಿಮಾನದಿಂದ ಹೇಳಿಕೊಳ್ಳುವ ಅಮ್ಮಂದಿರ ಸಂಖ್ಯೆ ಎಷ್ಟಿಲ್ಲ ಹೇಳಿ? ಅವರ ಮಾತಿನರ್ಥ, 'ಅಂಥ ಹೆಣ್ಮಕ್ಕಳ ಕೆಲಸ(?)ಕ್ಕೆಲ್ಲ ನನ್ಮಗ ತಲೆಕೆಡಿಸಿಕೊಳ್ಳಲ್ಲ'. ಬಸ್ಸಿನಲ್ಲಿ ವಾಂತಿ ಬಂದಾಗ ಕಿಟಕಿ ಬಳಿ ರಟ್ಟೆ ಹಿಡಿದು ನೆರವಾದ ಅಕ್ಕ, ನಮ್ಮ ಹುಡುಗನಿಗೆ ಯಾಕ್ರೋ ನೀವೆಲ್ಲ ಚುಡಾಯಿಸ್ತೀರಂತೆ ಅಂತ ದೊಡ್ಡ ಕ್ಲಾಸಿನ ಹುಡುಗರಿಗೆ ಕೆಂಗಣ್ಣು ಬಿಟ್ಟು ಗರಂ ಮಾಡಿದ ಚಿಕ್ಕಮ್ಮ ಇವರನ್ನೆಲ್ಲ ಕೇವಲ ಮಮತಾಮಯಿ ಮೂರ್ತಿಗಳನ್ನಾಗಿಸುವುದಲ್ಲ. ಅವರು ಹಲವು ವಿಷಯಗಳಲ್ಲಿ ಗಂಡಿಗಿಂತ ಬಲ ಉಳ್ಳವರು ಎಂಬುದನ್ನೂ ಬೆಳೆಯುವ ಹುಡುಗರ ಮನಸ್ಸಿನಲ್ಲಿ ಬಿತ್ತುವ ಕೆಲಸ ಆಗಬೇಕು. ಆಗ ಮಾತ್ರ ಪುರುಷ ಮಹಿಳೆಯರ ನಡುವಿನ 'ಬಲಿಷ್ಠ-ಕನಿಷ್ಠ' ಭಾವಗಳಿಗೆ ಜಾಗವಿಲ್ಲದಂತಾಗಿ ಒಟ್ಟಾರೆ ಸಮಾಜದ ಮನೋಭೂಮಿಕೆ ಸಮಾನತೆಯ ಅಚ್ಚಿನಲ್ಲಿ ಅರಳಿಕೊಳ್ಳುತ್ತದೆ. ಆಗ ಹಾದಿ ತಪ್ಪಿದ ಕೆಲವರಿಗೆ ಎದೆ ನಡುಗುವಂತೆ ಹೂಂಕರಿಸುವ ನೈತಿಕ ಶಕ್ತಿಯೂ ನಮ್ಮ ಸಮಾಜಕ್ಕೆ ಒದಗುತ್ತದೆ. 'ಪವರ್ ಸ್ಟೇಟ್‌ಮಂಟ್'ಗಳನ್ನು ಹಾಗೆಯೇ ಇರಿಸಿಕೊಂಡು ಅತ್ಯಾಚಾರ-ಲೈಂಗಿಕ ದೌರ್ಜನ್ಯಗಳ ವಿರುದ್ಧ ನಾವೆಷ್ಟೇ ಬೊಬ್ಬಿರಿದು ಮೊಂಬತ್ತಿ ಹಚ್ಚಿದರೂ ಮೂಲದಲ್ಲಿರುವ ಪೊಳ್ಳುತನ ನಮಗೆ ಪುಷ್ಟಿ ಕೊಡುವುದೇ ಇಲ್ಲ.
- ಚೈತನ್ಯ