

ವಿದ್ಯುದ್ದೀಪಗಳು ಮನೆಯ ಅಂದವನ್ನು ಮತ್ತಷ್ಟು ಆಕರ್ಷಿಸುತ್ತವೆ. ಸೊಬಗಷ್ಟೇ ಅಲ್ಲ, ಮನಸ್ಸಿಗೂ ಹಿತ ನೀಡುತ್ತವೆ. ಆದರೆ, ಅದೇ ವಿದ್ಯುದ್ದೀಪ ನಮ್ಮ ಮನೆಗೆ ಎಷ್ಟು ಸುರಕ್ಷಿತ?
ಇಂದಿನ ದಿನಪತ್ರಿಕೆಗಳಲ್ಲಿ ವಿದ್ಯುತ್ ಅವಘಡಗಳ ವರದಿಗೆ ಬರವೇ ಇಲ್ಲ. ಅಂದಹಾಗೆ, ವಿದ್ಯುತ್ ನಮ್ಮ ಮನೆಗೆ ನಿಜಕ್ಕೂ ಬೆಳಕಾಗಿದೆಯಾ ಅಥವಾ ಮಾರಕವಾಗಿದೆಯಾ ಎಂಬ ಆತಂಕ ಮೂಡದಿರದು. ಹಾಗಾದರೆ ನಮ್ಮ ಮನೆ ವಿದ್ಯುತ್‌ನಿಂದ ಎಷ್ಟು ಸುರಕ್ಷಿತವಾಗಿದೆ? ಅದರ ನಿರ್ವಹಣೆ ಹೇಗಿದೆ ಎಂಬುದಕ್ಕೆ ಅಂತಾರಾಷ್ಟ್ರೀಯ ತಾಮ್ರ ಉತ್ತೇಜನಾ ಸಮಿತಿ (ಭಾರತ) ಬಿಲ್ಡಿಂಗ್ ವೈರ್‌ನ ಪ್ರಧಾನ ವ್ಯವಸ್ಥಾಪಕ ಅಮೋಲ್ ಕಲ್ಸೇಕರ್ ಅನೇಕ ಸಲಹೆಗಳನ್ನು ನೀಡಿದ್ದಾರೆ.
ಬಹುತೇಕ ಅಗ್ನಿ ಅನಾಹುತಗಳಲ್ಲಿ ವಿದ್ಯುತ್ ಪಾತ್ರವೇ ಹೆಚ್ಚಿರುತ್ತದೆ. ಎಲೆಕ್ಟ್ರಿಕಲ್ ಹಾಗೂ ಅಗ್ನಿ ಆಕಸ್ಮಿಕಗಳಿಂದ ಸಂಭವಿಸುವ ಅವಘಡಗಳಿಗೆ ಮುಖ್ಯ ಕಾರಣ ಅಸಮರ್ಪಕ ಹಾಗೂ ಗುಣಮಟ್ಟವಲ್ಲದ ವೈರ್‌ಗಳ ಬಳಕೆ. ಜತೆಗೆ ವಿದ್ಯುತ್ ವ್ಯವಸ್ಥೆಯ ಅನುಷ್ಠಾನ ಮತ್ತು ಅದರ ನಿರ್ವಹಣೆಯಲ್ಲಿನ ವಿಫಲತೆ ಕಾರಣ. ಹಾಗಾದರೆ ಅವಘಡಗಳು ಸಂಭವಿಸುವ ಮುನ್ನವೇ ಜಾಗೃತಿ ಇದ್ದರೆ ಒಳ್ಳೆಯದು. ಜತೆಗೆ ಒಂದಿಷ್ಟು ಮುನ್ನೆಚ್ಚರಿಕೆ ಕೂಡ ಅಗತ್ಯ.