

ಶಶಿ ದೇಶಪಾಂಡೆಯವರ 'ದಟ್ ಲಾಂಗ್ ಸೈಲೆನ್ಸ್' ಕಾದಂಬರಿಯಲ್ಲಿ ಜಯಾ ಎಂಬ ಲೇಖಕಿ ಮುಖ್ಯ ಪಾತ್ರಧಾರಿ. ಉತ್ತಮ ಸಾಹಿತಿಯಾಗುವ ಎಲ್ಲ ಸಾಮರ್ಥ್ಯವಿದ್ದರೂ ಆಕೆ ತನ್ನ ಸಂಸಾರದ ಜಂಜಾಟದಲ್ಲಿ ಬರವಣಿಗೆ ಮರೆಯುತ್ತಾಳೆ. ಓದುಗರಿಗಿಂತ ಜಾಸ್ತಿ ಅವಳ ಗಂಡನೇ 'ನೀನು ಈ ಥರಾ ಕಥೆ ಬರೆದರೆ ನಿನ್ನ ಮಾತ್ರವಲ್ಲ, ನನ್ನ ಮಾನವೂ ಹರಾಜಾಗುತ್ತದೆ. ಜನ ಈ ಪಾತ್ರಧಾರಿಗಳು ನಾವೇ ಅಂದುಕೊಂಡು ಅಳೆಯಲು ಪ್ರಾರಂಭಿಸುತ್ತಾರೆ. ಮರ್ಯಾದೆ ಹೋಗುತ್ತದೆ' ಎಂಬಿತ್ಯಾದಿ ಮಾತನಾಡಿ ಅವಳ ಬರವಣಿಗೆಯ ಆಸಕ್ತಿಯನ್ನೇ ಪುಡಿಗಟ್ಟುತ್ತಾನೆ.
ಆ ಬಳಿಕ ಅವಳು ಬರೆದರೂ ಆದರ್ಶ ಹೆಂಡತಿಯ ಪಾತ್ರವನ್ನಷ್ಟೇ ಇಟ್ಟುಕೊಂಡು ಬರೆಯುತ್ತಾಳೆ. ಪ್ರಜ್ಞಾವಂತ ಓದುಗರಿಗೆ ಅದು ಇಷ್ಟವಾಗುವುದಿಲ್ಲ. ಸ್ತ್ರೀ ಪಾತ್ರಗಳು ಶೋಷಣೆಯನ್ನು ಪ್ರಶ್ನಿಸಿ ಎದ್ದುನಿಲ್ಲಬೇಕು, ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಅವಳ ಓದುಗರು ಬಯಸುತ್ತಾರೆ. ಆದರೆ ಕುಟುಂಬ ತನ್ನ ಸರ್ವಸ್ವ ಎಂಬ ನಂಬಿಕೆಗೆ ಬದ್ಧಳಾಗಿ ಇರಬೇಕಾದ ಅನಿವಾರ್ಯತೆ ಅವಳಿಗಿರುವುದರಿಂದ ಬರೆಯುವುದನ್ನೇ ನಿಲ್ಲಿಸಿಬಿಡುತ್ತಾಳೆ.
ಇಂದಿನ ಎಷ್ಟೋ ಲೇಖಕಿಯರ ವಿಷಯವನ್ನೇ ವಸ್ತುವಾಗಿಟ್ಟುಕೊಂಡು ಬರೆದಂತಿದೆ ಈ ಕಾದಂಬರಿ. ಬಹುಶಃ ಜನ ತಮ್ಮ ಬರವಣಿಗೆಯ ಹಿಂದೆ ತಮ್ಮ ವೈಯಕ್ತಿಕ ಜೀವನವನ್ನು ಹುಡುಕುವ ಕೆಲಸ ಮಾಡುತ್ತಾರೆ ಎಂಬುದು ಎಷ್ಟೋ ಸಂದರ್ಭಗಳಲ್ಲಿ ಅವರ ಬರವಣಿಗೆಯ ಕೌಶಲಗಳನ್ನೇ ಮರೆಸಿಬಿಡುತ್ತದೆ.
'ಎಷ್ಟೊಂದು ಚೆನ್ನಾಗಿ ಕವನ ಬರೀತಿದ್ಯಲ್ಲೇ, ಯಾಕೆ ಇತ್ತೀಚೆಗೆ ಏನೂ ಬರೀತಾ ಇಲ್ಲ? ಅಥವಾ ಬರೆದೂ ಬರೆದೂ ಹಾಗೇ ಇಟ್ಕೋತಾ ಇದ್ದೀಯಾ ಸಂಕಲನವನ್ನೇ ಮಾಡಿದ್ರಾಯ್ತು ಅನ್ನೋ ಯೋಚನೇಲಿ? ನಿಮ್ಮಂಥೋರೇ ಹೀಗೆ ಬರೆಯೋದು ನಿಲ್ಸಿ ಬಿಟ್ರೆ ಏನ್ಕತೆ?' ಅಂತ ನಮ್ಮ ಬರವಣಿಗೆ ಸರ್ಕಲ್ಲಿನ ಮಂದಿ ಸಿಕ್ಕಾಗೆಲ್ಲಾ ಕೇಳ್ತಾರೆ ಕಣೇ. ಅವರಿಗೆಲ್ಲ ಉತ್ತರಿಸೋದು ತುಂಬಾ ಕಷ್ಟ ಆಗೋಗಿದೆ. ನಂಗೆ ಬರೆಯೋದಕ್ಕೆ ವಿಷಯಗಳು ಸಿಗ್ತಾ ಇಲ್ಲ ಅಂತಾಗ್ಲಿ, ಬರವಣಿಗೆ ಶೈಲಿ ತಪ್ಪಿಹೋಗಿದೆ ಅಂತಾಗ್ಲೀ ನಾನು ಬರೆಯದೇ ಕುಳಿತಿಲ್ಲ. ಜನ ನನ್ನ ಕವನಗಳ ಬಗ್ಗೆ, ಕಥೆ, ಲೇಖನಗಳ ಬಗ್ಗೆ ಮಾತಾಡೋದು ಕೇಳಿಸ್ಕೊಂಡು ಸಾಕಾಗಿಹೋಗಿ ಬರೆಯೋದೇ ಬೇಡ ಅನ್ನಿಸಿಬಿಟ್ಟಿದೆಯಪ್ಪಾ ನಂಗೆ!
'ಒಂದು ಡೈವೋರ್ಸ್ ಬಗ್ಗೆ ಕಥೆ ಬರೆದಿದ್ದೆ, ನನ್ನ ಪರಿಚಯದೋರೆಲ್ಲಾ ಆ ಕಥೆಯ ಪಾತ್ರಧಾರಿಗಳು ನಾನು, ನನ್ನ ಗಂಡ ಅಂತ ತಿಳ್ಕೊಂಡು ಅದೇನೇನೋ ಮಾತಾಡಿಬಿಟ್ರು. ಕೆಲವರಂತೂ ಫೋನ್ ಮಾಡಿ 'ಥೂ ಡೈವೋರ್ಸ್ ಅಂತ ಕೋರ್ಟಿಗೆಲ್ಲ ಅಲೀಬೇಡ ಮಾರಾಯ್ತಿ. ತೀರಾ ಸುದ್ದಿಯಾಗದ ಹಾಗೆ ಮ್ಯೂಚುವಲ್ ಕನ್ಸೆಂಟಿಂದ ತಗೊಳ್ಳಿ ಆಯ್ತಾ? ಸುಮ್ನೆ ಹೆಸ್ರು ಹಾಳು ಮಾಡ್ಕೋಬೇಡ ಅಂತೆಲ್ಲ ಮಾತಾಡಿದ್ರು. ನಾನು ಏನು ಹೇಳ್ಳಿ ಹೇಳು? ಈ ಬರವಣಿಗೆ ಸಹವಾಸವೇ ಬೇಡ ಅನ್ನಿಸಿಬಿಟ್ಟಿದೆ ನಂಗೆ...' ಗೆಳತಿ ಹೇಳುತ್ತಿದ್ದರೆ ನನಗೆ ಹೌದೆಂದು ತಲೆ ಅಲ್ಲಾಡಿಸುವುದಲ್ಲದೆ ಬೇರೆ ದಾರಿಯೇನೂ ಇರಲಿಲ್ಲ.
ಸಾಮಾನ್ಯವಾಗಿ ಎಲ್ಲ ಬರಹಗಾರ್ತಿಯರು, ಅದರಲ್ಲೂ ವಿಶೇಷವಾಗಿ ಕಥೆ, ಕವನಗಳನ್ನು ಬರೆಯುವ ಗೆಳತಿಯರು ಎದುರಿಸುವ ಸವಾಲು ಇದು. ತಾವು ಏನೇ ಬರೆದರೂ ಅದು ಸ್ವಂತದ ಅನುಭವವೇ ಇರಬೇಕು ಅಂದುಕೊಳ್ಳುವ ಮಂದಿಯೇ ನಮ್ಮ ನಡುವೆ ಹೆಚ್ಚು. ಯಾವ ಭಾಷೆಯ, ಯಾವ ಲಿಂಗದ ಸಾಹಿತಿಯ ಕೃತಿಯಲ್ಲಾದರೂ ಆತ್ಮಕಥನದ ಅಂಶಗಳು ಏನಿವೆ, ಎಷ್ಟಿವೆ ಎಂದು ವಿಮರ್ಶೆ ಮಾಡುವ ಬಗೆ ಇಂದು ಹೊಸದಲ್ಲ. ಆದರೆ ಒಬ್ಬ ಕಥೆಗಾರ್ತಿಯ ದೃಷ್ಟಿಯಿಂದ ನೋಡಿದರೆ ಆಕೆ ಬರೆಯಲು ಆಯ್ದುಕೊಳ್ಳುವ ಕಥಾವಸ್ತುವಿನ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಅಲ್ಲಿ ಅವಳ ಬರಹದ ಕೌಶಲಕ್ಕಿಂತ ಜಾಸ್ತಿ ಮನೆಮಂದಿಯ ಮರ್ಯಾದೆ ಮುಖ್ಯವಾಗುತ್ತದೆ. ಅತ್ತೆ-ಸೊಸೆ ದ್ವಂದ್ವಗಳ ಬಗೆಗಾಗಲೀ, ವರದಕ್ಷಿಣೆ ಪಿಡುಗಿನಂಥ ಸಾಮಾಜಿಕ ಕಳಕಳಿಯ ವಿಷಯಗಳಾಗಲೀ, ಕೊನೆಗೆ ಲೈಂಗಿಕ ದೌರ್ಜನ್ಯದಂಥ ವಿಷಯಗಳೇ ಆಗಲಿ... ಎಲ್ಲ ಕಥೆ ಹಿಂದೆ ಸ್ವತಃ ಕಥೆಗಾರ್ತಿಯ ಬದುಕನ್ನು ವಿಶ್ಲೇಷಿಸಿ ನೋಡುವುದು ಬರವಣಿಗೆಯೆಂಬ ಕಲೆಯನ್ನೇ ಆಕೆಯಿಂದ ಕಿತ್ತುಕೊಂಡುಬಿಡಬಹುದು.
ಯಾರೇನೇ ಬರೆದರೂ ಅದರಲ್ಲಿನ ಒಂದು ಪಾತ್ರ, ಒಂದು ಭಾವ ಮಾತ್ರ ವಾಸ್ತವದ್ದಾಗಿರುತ್ತದೆ. ಇನ್ನುಳಿದ ವಿಷಯಗಳೆಲ್ಲ ಅವರ ಪರಕಾಯ ಪ್ರವೇಶದ ಅಥವಾ ಸಹಾನುಭೂತಿಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಸ್ವತಃ ಬರಹಗಾರರಾಗಿರುವ ವಿಮರ್ಶಕರೂ ಕೆಲವೊಮ್ಮೆ ಇವನ್ನೆಲ್ಲ ಮರೆತು ಕಥಾವಸ್ತುವಿರಲಿ, ಕವನದ ಭಾವವಿರಲಿ ಸ್ವತಃ ಲೇಖಕಿಯ ಸ್ವಂತ ಅನುಭವ ಎಂಬ ತೀರ್ಮಾನಕ್ಕೆ ಮುಂದಾಗುತ್ತಾರೆ. ಈ ಬಗೆಯ ವಿಮರ್ಶೆಗಳು ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬ ಬರಹಗಾರ್ತಿಯನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬಲ್ಲವು.
ಮಾಧ್ಯಮದ ಕುರಿತು ಮಾತನಾಡುವಾಗೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿಷಯವೆತ್ತುತ್ತೇವೆ. ನಮ್ಮ ನಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಬರಹವೆಂಬ ಕಲೆಗೆ ಬಂದರೆ ಮಾತ್ರ ಇವೆಲ್ಲ ನಮಗೆ ಮರೆತುಹೋಗುತ್ತವೆ. ತಮ್ಮ ಅನುಭವದ ಮಿತಿಯನ್ನು ಮೀರಿ ಯಾವುದೂ ಇಲ್ಲವೆಂಬುದು ನಿಜವಾದರೂ ಬೀಜವೆಂಬ ನೆಪವೊಂದು ವೃಕ್ಷವಾಗಿ ಬೃಹದಾಗಿ ಬೆಳೆಯಬಲ್ಲುದು ಎಂಬ ಕಣ್ಣೆದುರಿನ ಸತ್ಯವನ್ನು ಮರೆಯುವುದೇಕೆ? ಓದುಗರ ಭಾವ ಬದಲಾದರೆ ಲೇಖನಿಯೂ ನಿರಂತರವಾಗಿ ಚಾಲನೆಯಲ್ಲಿರುತ್ತದೆ. ನಮ್ಮ ಬರಹಗಾರ್ತಿಯರಿಗೆ ಬೇಕಾಗಿರುವುದೂ ಅದುವೇ.
- ಆರತಿ ಪಟ್ರಮೆ