ಸೂರು ಪಲ್ಲಟ

ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದ ಮೇಲೆ ಉಳಿದುಕೊಳ್ಳಲು ಒಂದು ಸೂರು ಬೇಡವೆ? ಬಹಳಷ್ಟು ಮಂದಿಗೆ ಬಾಡಿಗೆ ಮನೆಯೇ...
ಸೂರು ಪಲ್ಲಟ
Updated on: 

ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದ ಮೇಲೆ ಉಳಿದುಕೊಳ್ಳಲು ಒಂದು ಸೂರು ಬೇಡವೆ? ಬಹಳಷ್ಟು ಮಂದಿಗೆ ಬಾಡಿಗೆ ಮನೆಯೇ ಆಸರೆ. ಕಚೇರಿಯಿಂದ ಮನೆ ದೂರವಾಗುತ್ತದೆ ಎಂಬ ಕಾರಣಕ್ಕೋ, ಇನ್ನೇನೋ ಕಾರಣಗಳಿಂದಲೋ ಮನೆ ಬದಲಾವಣೆಗೆ ಮುಂದಾಗುತ್ತಾರೆ.
ಬಾಡಿಗೆ ಮನೆ ಸಿಗುವುದು ಸುಲಭ. ಆದರೆ, ಮನೆ ಬದಲಾವಣೆ ಮಾಡುವುದು ತುಂಬಾ ದುಸ್ತರ. ಈ ರೀತಿ ಮನೆ ಬದಲಾವಣೆ ಮಾಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುವವರೇ ಹೆಚ್ಚು. ಇಷ್ಟಿದ್ದರೂ ಮನೆ ಬದಲಾವಣೆ ಮಾಡದೆ ಇರಲು ಸಾಧ್ಯವಿಲ್ಲ. ಹಾಗಾದರೆ ಬಾಡಿಗೆ ಮನೆಗೆ ಸ್ಥಳಾಂತರ ಆಗುವಾಗ ತೊಂದರೆಗಳೇನು? ಅವುಗಳನ್ನು ಯಾವ ರೀತಿ ಎದುರಿಸಬೇಕು? ಜೊತೆಗೆ ಸುಲಭವಾಗಿಯೂ ಹೇಗೆ ಮನೆ ಸ್ಥಳಾಂತರ ಮಾಡಬಹುದು?
ಕವರ್ ಎಸೆಯಬೇಡಿ
ಟಿ.ವಿ, ಫ್ರಿಡ್ಜ್, ವಾಷಿಂಗ್ ಮಷಿನ್‌ನಂತಹ ಹತ್ತಾರು ಸಲಕರಣೆಗಳನ್ನು ತೆಗೆದುಕೊಂಡಾಗ ಅವುಗಳೊಂದಿಗೆ ಬಂದ ಬಾಕ್ಸ್ ಕವರ್‌ಗಳನ್ನು ಕಾಳಜಿಯಿಂದ ಕಾಯ್ದಿಡಿ. ಯಾಕೆಂದರೆ, ಮನೆ ಸ್ಥಳಾಂತರ ಮಾಡುವಂತಹ ಸಂದರ್ಭದಲ್ಲಿ ಅಂತಹ ಕವರ್‌ಗಳಲ್ಲಿಯೇ ಅವುಗಳನ್ನು ಅಚ್ಚುಕಟ್ಟಾಗಿ ಇಟ್ಟು, ಸುರಕ್ಷಿತವಾಗಿ ಸ್ಥಳಾಂತರಿಸಬಹುದು.
ಬಿಚ್ಚಿಡುವ ಫರ್ನಿಚರ್
ಮೇಜು, ಮಂಚ, ಟಿಪಾಯಿ, ಕುರ್ಚಿ, ಕಂಪ್ಯೂಟರ್ ಟೇಬಲ್ ಮುಂತಾದ ಪಿಠೋಪಕರಣಗಳು ಸಾಧ್ಯವಾದಷ್ಟು ಮಟ್ಟಿಗೆ ಬಿಚ್ಚಿಡುವಂತೆ ಇರಲಿ. ಈಗಂತೂ ಬ್ರಾಂಡೆಂಡ್ ಕಂಪನಿಗಳು ಇಂತಹ ಪೀಠೋಪಕರಣಗಳನ್ನೇ ಜಾಸ್ತಿ ತಯಾರಿಸುತ್ತಿವೆ. ಜೊತೆಗೆ ಮಡಚಿಡುವ ಪೀಠೋಪಕರಣಗಳು ಇದ್ದರೆ ಇನ್ನೂ ಉತ್ತಮ. ಇವು ಹಾಳಾಗದಂತೆ ಸುರಕ್ಷಿತವಾಗಿ ಸ್ಥಳಾಂತರ ಮಾಡಬಹುದು. ಜೊತೆಗೆ ಅವುಗಳಿಗೆ ಯಾವುದೇ ತೆರನಾದ ಧಕ್ಕೆಯೂ ಆಗುವುದಿಲ್ಲ.
ಪಾತ್ರೆ ಸರಿ ಇರಲಿ
ಅಡುಗೆಮನೆಯ ಸಾಮಗ್ರಿಗಳನ್ನು ದೊಡ್ಡ ಗಾತ್ರದೊಳಗೆ ಅನುಕ್ರಮವಾಗಿ ಒಂದರೊಳಗೆ ಒಂದರಂತೆ ಚಿಕ್ಕ ಗಾತ್ರದವರೆಗೆ ಹೊಂದಿಸಿಟ್ಟುಕೊಳ್ಳಿ. ದೊಡ್ಡ ಚೀಲದಲ್ಲಿ ಅವುಗಳನ್ನು ಹಾಕಿ. ಈ ಚೀಲದ ಮೇಲೆ ಯಾವ ಸಾಮಗ್ರಿಗಳಿವೆ ಎಂದು ಬರೆದುಬಿಡಿ. ಮನೆಗೆ ಸ್ಥಳಾಂತರವಾದ ನಂತರ ಅವುಗಳನ್ನು ಪತ್ತೆಹಚ್ಚಿ ಹೊಂದಿಸಿಡಲು ಸುಲಭವಾಗುತ್ತದೆ. ಅಲ್ಲದೆ, ಪಾತ್ರೆಗಳು ಬೆಂಡಾಗುವುದರಿಂದ ಸಾಗಿಸುವಾಗ ಎಚ್ಚರ ಇರಲಿ.
ಗಾಜು ಹುಶಾರು
ನಿತ್ಯ ಬಳಕೆ ಹಾಗೂ ಹವ್ಯಾಸಿ ಸಂಗ್ರಹಕ್ಕೆಂದು ಕಲೆ ಹಾಕಿದ ಗಾಜಿನ ವಸ್ತುಗಳನ್ನು ಇತರೆ ವಸ್ತುಗಳಿಂದ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಅಗತ್ಯ. ಅವುಗಳನ್ನು ಸಾಧ್ಯವಾದಷ್ಟು ತಾವೇ ತೆಗೆದುಕೊಂಡು ಹೋಗುವುದು ಸೂಕ್ತ.
ಪುಸ್ತಕ ಬಂಡಲ್
ಮಕ್ಕಳ ಪುಸ್ತಕಗಳು ಹಾಗೂ ನಿಮ್ಮ ಅಭಿರುಚಿಯ ಪುಸ್ತಕಗಳನ್ನು ಪ್ರತ್ಯೇಕವಾಗಿ ಇಟ್ಟುಕೊಂಡಿರಿ. ಅವುಗಳನ್ನು ಬಂಡಲ್ ರೂಪದಲ್ಲಿ ಕಟ್ಟಿ ಅವುಗಳ ಮೇಲೆ ಹೆಸರನ್ನು ನಮೂದಿಸಿ.
ಗಂಟು ಕಟ್ಟಿಕೊಳ್ಳಿ
ದಿನಬಳಕೆಯ ಬಟ್ಟೆ, ವಸ್ತ್ರಗಳನ್ನು ನೀಟಾಗಿ ಹೊಂದಿಸಿಡಿ. ಅದಕ್ಕೆಂದು ಬ್ಯಾಗ್ ಇದ್ದರೆ ಒಳ್ಳೆಯದು. ಮಕ್ಕಳ, ಮಹಿಳೆಯರು ಮತ್ತು ಪುರುಷರ ಬಟ್ಟೆ ಬ್ಯಾಗ್ ಪ್ರತ್ಯೇಕವಾಗಿದ್ದರೆ ಒಳ್ಳೆಯದು.
ನಿಮ್ಮ ಬಳಿಯೇ ಇರಲಿ
ಬಟ್ಟೆ, ಸೌಂದರ್ಯೋಪಾಸನಗಳು, ಬಳೆ, ಬಂಗಾರದಂತಹ ವಸ್ತುಗಳನ್ನು ಮೊದಲೇ ಅಲ್ಮೆರಾದಿಂದ ತೆಗೆದುಬಿಡಿ. ಜೊತೆಗೆ ಸುರಕ್ಷತೆಗಾಗಿ ಅಲ್ಲಿಟ್ಟಿರುವ ದಾಖಲೆ ಪತ್ರಗಳ ಬಗ್ಗೆ ತುಂಬಾ ನಿಗಾ ಇಟ್ಟಿರಿ. ಅಲ್ಮೆರಾದ ಬಾಗಿಲಿಗೆ ಕನ್ನಡಿ ಇದ್ದರೆ ಬಿಚ್ಚಿ ಕಾಳಜಿಯಿಂದ ಸ್ಥಳಾಂತರಿಸುವುದು ಉತ್ತಮ.


ಗುತ್ತಿಗೆ ಕೊಡುವುದೇ ಉತ್ತಮ
ಮನೆ ಸ್ಥಳಾಂತರಕ್ಕೆ ನಿಮ್ಮ ಸ್ವಂತ ವಾಹನ ಇದ್ದರೆ ಒಳ್ಳೆಯದು. ಆದರೆ, ಅದಕ್ಕೆ ಜನರು ಬೇಕಾಗುತ್ತಾರೆ. ಇದಕ್ಕೆಂದು ಸ್ಥಳಾಂತರ ಗುತ್ತಿಗೆದಾರರು ಅಥವಾ ಪ್ಯಾಕರ್ಸ್ ಆ್ಯಂಡ್ ಮೂವರ್ಸ್‌ಗಳು ಎಲ್ಲೆಡೆ ಸಿಗುತ್ತಾರೆ. ಆದರೆ, ಆಯ್ಕೆ ಮಾಡಿಕೊಳ್ಳುವ ಮುನ್ನ ಬಾಡಿಗೆ ಬಗ್ಗೆ ಮೊದಲೇ  ನಿರ್ಧರಿಸಿಕೊಳ್ಳಿ. ಕೆಲವು ಗುತ್ತಿಗೆದಾರರು ವಸ್ತುಗಳನ್ನೆಲ್ಲ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ, ಅಷ್ಟೇ ಶಿಸ್ತಿನಿಂದ ಅವನ್ನು ಜೋಡಿಸಿಯೂ ಕೊಡುತ್ತಾರೆ.


-ಮಂಜುನಾಥ ಪ್ಯಾಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com