ಪೋಗದಿರಲೇ ಅಮ್ಮಾ... ಬಾಗಿಲಿಂದಾಚೆಗೆ...

ಲವಲವಿಕೆಗೆ ಹೆಸರಾಗಿದ್ದ ಸಹೋದ್ಯೋಗಿ ಅಂದು ಮಂಕಾಗಿದ್ದರು. ತೀರಾ ಒತ್ತಾಯಿಸಿ ಕೇಳಿದಾಗ ತುಂಬಾ ಬೇಸರವೆನಿಸಿತು. ಮಗ ಇತ್ತೀಚೆಗೆ ನಿದ್ದೆಯ ಸಮಯ ಬದಲಾಯಿಸಿಕೊಂಡು ಬಿಟ್ಟಿದ್ದಾನೆ. ಮೊದಲೆಲ್ಲ ಮಧ್ಯಾಹ್ನ ಊಟಕ್ಕೆ ಮೊದಲು ನಿದ್ದೆ ಆಗಿಬಿಡುತ್ತಿತ್ತು. ಈಗ ಮಲಗೋದೇ ಸಂಜೆ. ಆಮೇಲೆ ಏಳು ಗಂಟೆಗೆ ಎದ್ದರೆ, ರಾತ್ರಿ ಒಂದು ಗಂಟೆಯಾದರೂ ಮಲಗೋದಿಲ್ಲ. ನನಗೆ ನಿದ್ದೆಯಿಲ್ಲ ಎಂಬುದಕ್ಕಿಂತ ನಾನು ಕಾಲೇಜಿಗೆ ಹೊರಟಾಗಲೂ ಅವನು ಎದ್ದಿರುವುದಿಲ್ಲ. ಯಾವಾಗಲೂ ಅವನಿಗೆ ಬೆಳಗ್ಗೆ ತಿಂಡಿ ತಿನ್ನಿಸಿ, ಸ್ನಾನ ಮಾಡಿಸಿ ಕಾಲೇಜಿಗೆ ಬರುತ್ತಿದ್ದೆ. ಆದರೀಗ ಬೆಳಗ್ಗೆ ಅವನು ನನ್ನ ಮುಖವನ್ನೇ ನೋಡುವುದಿಲ್ಲ. ಪಾಪ, ಎದ್ದಾಗ ಪಕ್ಕದಲ್ಲಿ ಅಮ್ಮನಿರುವುದಿಲ್ಲ ಎಂಬ ಭಾವವೇ ನನ್ನನ್ನು ಹಿಂಡುತ್ತಿದೆ ಎಂಬುದು ಅವರ ಅಳಲು.
ನಮ್ಮಂಥ ತಾಯಂದಿರ ಹಣೆಬರಹವೇ ಇಷ್ಟು. ದುಡಿಯದೇ ಇರುವಂತಿಲ್ಲ. ಮಕ್ಕಳು ನೋಡಿದರೆ ಸಮಯಕ್ಕೆ ಸರಿಯಾಗಿ ಊಟ ನಿದ್ದೆಯಿಲ್ಲದೇ ಸೊರಗುತ್ತಾರೆ. ಮಗು ತೂಕ ಸರಿಯಾಗಿ ಏರದೇ ಇದ್ದರೆ ವೈದ್ಯರ ಬೈಗುಳವೂ ನಮಗೇ. ಎಷ್ಟೋ ಸಲ ಕೆಲಸ ಬಿಟ್ಟು ಮನೆಯಲ್ಲಿ ಸನ್ನಿಧಿ ಜತೆ ಇರಬೇಕು ಅನ್ನಿಸುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಮಕ್ಕಳು ದೊಡ್ಡವರಾದರೆ ಸಾಕನ್ನಿಸಿಬಿಟ್ಟಿದೆ ಅನ್ನುತ್ತಿದ್ದಳು ಶ್ವೇತಾ.
ಗೆಳತಿಯೊಬ್ಬರು ದಿನೇದಿನೆ ತೂಕ ಕಳೆದುಕೊಂಡು ಕಡ್ಡಿಪೈಲ್ವಾನ್ ಆಗುವ ಎಲ್ಲ ಲಕ್ಷಣ ತೋರಿಸುತ್ತಿದ್ದಾರೆ. ಅವರ ಚಿಂತೆಗೂ ಕಾರಣ ಅದುವೇ. ಮಗು ಇತ್ತೀಚೆಗೆ ಯಾಕೋ ಪದೇ ಪದೆ ಹುಷಾರು ತಪ್ಪುತ್ತಿದೆ. ಬೇಕಾದಷ್ಟು ರಜೆಗಳಿಲ್ಲ ಅಥವಾ ಇನ್ನೂ ಪ್ರೊಬೇಷನರಿಯಲ್ಲಿರುವುದರಿಂದ ತುಂಬಾ ರಜೆ ತೆಗೆದುಕೊಂಡರೆ ಕೆರಿಯರ್ ಹಾಳಾದೀತೇನೋ ಎಂಬ ಆತಂಕ. ಆದರೆ ಬೆಳೆದು ದೊಡ್ಡವರಾದವರಿಗೇ ಜ್ವರ ಬಂದಾಗ ತೀರಾ ಬೇಕಾದವರೊಬ್ಬರು ಸಮೀಪವಿರಲಿ ಅನ್ನಿಸುವಂತೆ ಮಗುವಿಗೂ ಅನ್ನಿಸದಾ? ಮನೆಯಲ್ಲಿ ನೋಡಿದರೆ ಇವಳಿಗೆ ಕೆಲಸಕ್ಕೆ ಹೋಗುವ ಭ್ರಾಂತು. ಓದಿದ್ದು ಹಾಳಾಗಬಾರದಲ್ಲಾಂತ. ಆದರೆ ಮಗುವಿಗೆ ಏನಾದರೂ ಇವಳಿಗೆ ತೊಂದರೆಯಿಲ್ಲ ಅನ್ನುವಂತೆ ಆಡುವ ಮಾತುಗಳು ನೇರವಾಗಿ ಎದೆಗೇ ಭರ್ಚಿ ಹಾಕುತ್ತವೆ. ಯಾವುದೇ ತಾಯಿ ತನ್ನ ಕಂದನ ಜ್ವರದ ಬಿಸಿಯಲ್ಲಿ ತಮ್ಮ ಚಳಿ ನಿವಾರಿಸಿಕೊಳ್ಳುವ ಮನಸ್ಸು ಹೊಂದಿರುವುದಿಲ್ಲ. ಕಂದ ಜ್ವರದಿಂದ ನರಳಿದರೆ ತಾಯಿಯ ಮನಸ್ಸು ನೋವಿನಿಂದ ಬೇಯುತ್ತದೆ. ಆದರೆ ಅದೇಕೋ ಗೊತ್ತಿಲ್ಲ, ಕೆಲಸಕ್ಕೆ ಹೋಗುವ ಅಮ್ಮನ ಅಂತರಾಳ ಮಾತ್ರ ಯಾರ ಅರಿವಿಗೂ ನಿಲುಕುವುದಿಲ್ಲ, ಅಂಥ ತಾಯಂದಿರನ್ನು ಬಿಟ್ಟು.
ದುಡ್ಡಿದ್ದಷ್ಟೂ ದುಡ್ಡು ಸಾಲದು ಎಂಬುದು ಈಗಿನ ಎಲ್ಲರ ಬದುಕಿನ ಸಹಜ ಸಮಸ್ಯೆ. ಗಂಡ ಹೆಂಡತಿ ಇಬ್ಬರೂ ದುಡಿಯುವ ಮನೆಗಳೇ ಹೆಚ್ಚು. ಕೆಲವು ಕಡೆ ಅವಶ್ಯವಿದ್ದರೆ ಇನ್ನೂ ಕೆಲವೆಡೆ ಉತ್ತಮ ವಿದ್ಯಾಭ್ಯಾಸ, ಕೌಶಲ್ಯಗಳನ್ನು ಹೊಂದಿರುವ ಹೆಣ್ಣು ಕೇವಲ ಮನೆ ಉಸ್ತುವಾರಿಯಲ್ಲಿ ತನ್ನ ಜೀವನ ಸವೆಸಬಾರದು ಎಂಬ ನಿಲುವು ತಾಳಿರುವವರು ಅನೇಕರು. ಆದರೆ ಎಲ್ಲ ವರ್ಕಿಂಗ್ ಅಮ್ಮಂದಿರ ಹೃದಯಗಳು ಸದಾ ಮನೆಗಾಗಿ, ತಮ್ಮ ಮಕ್ಕಳಿಗಾಗಿ ಮಿಡಿಯುತ್ತಿರುತ್ತವೆ ಎಂಬುದು ಮಾತ್ರ ನಿಜ.
ಸಂಜೆ ಹಿಂದಿರುಗಿದ ನಂತರ ರಾತ್ರಿ ಹನ್ನೊಂದರವರೆಗೂ ಮಕ್ಕಳೊಂದಿಗೆ ಸಮಯ ಕಳೆಯುವ ಪ್ರಯತ್ನಿಸಿದರೂ ತೃಪ್ತಿಕರವೆನ್ನಿಸುವುದಿಲ್ಲ. ದಿನಬೆಳಗಾದರೆ ದಡಬಡಿಸಿ ಮನೆಗೆಲಸ ಮುಗಿಸಿ ಕಾಲೇಜಿಗೆ ಹೊರಟು ಗೇಟು ದಾಟುವಾಗ ಅದಾಗಷ್ಟೇ ಎದ್ದ ಪುಟ್ಟಮಗನ ಕೂಗು ಒಳಗಿಂದ ಕೇಳಿಸುತ್ತಿರುತ್ತದೆ- ಅಮ್ಮಾ, ಕಾಲೇಜು ಬೇಡಮ್ಮಾ... ಅಂಗಡಿಗೆ ಹೋಗಿ ಬೇಗ ಬಾ. ಚಾಕ್ಲೇಟು ತಾ...
-ಆರತಿ ಪಟ್ರಮೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


