

ಮನೆಯ ಆಂತರಿಕ ಸೌಂದರ್ಯ ವೃದ್ಧಿಗೆ ಏನೆಲ್ಲ ಪ್ರಯೋಗಗಳು ಒಳ ನುಗ್ಗಿರುತ್ತವೆ. ಆದರೆ, ಅವುಗಳನ್ನು ಒಳಗೆ ತರಬೇಕಾದರೆ, ಅಷ್ಟೇ ಪ್ರಮಾಣದ ಹಣವೂ ನಮ್ಮ ಜೇಬನ್ನು ಖಾಲಿ ಮಾಡಿರುತ್ತವೆ. ಇಷ್ಟಿದ್ದರೂ ಆಂತರಿಕ ಸೌಂದರ್ಯವನ್ನು ಹೆಚ್ಚಿಸಲು ಹಿಂದೆ ಮುಂದೆ ನೋಡುವುದಿಲ್ಲ.
ಮರ, ಬಣ್ಣಗಳು, ಕಾರ್ಪೆಟ್, ಸೋಫಾ ಸೆಟ್ಗಳು, ಗೋಡೆ ವಿನ್ಯಾಸಗಳು, ಬೆಳಕು ಆಂತರಿಕ ಸೌಂದರ್ಯದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತವೆಯೋ ಸಿಂಕ್ ಕೂಡ ಅಷ್ಟೇ ತನ್ನ ಜಾಣ್ಮೆ ಮೆರೆದಿದೆ. ಹಾಲ್, ಅಡುಗೆ ಮನೆ, ಬೆಡ್ರೂಂ, ಬಚ್ಚಲು ಮನೆ ಸೇರಿದಂತೆ ಮನೆಯ ಎಲ್ಲ ಪ್ರದೇಶಗಳಲ್ಲೂ ವಿಶೇಷವಾಗಿ ಒಗ್ಗುವ ವಸ್ತುವೇ ಸಿಂಕ್. ನಾನಾ ಆಕಾರಗಳಲ್ಲಿ, ನಾನಾ ನಮೂನೆಗಳಲ್ಲಿ ಸಿಂಕ್ ಮನೆಯೊಳಗೆ ಅಡಿ ಇಡಲು ಸಿದ್ಧವಾಗಿ ನಿಂತಿರುತ್ತವೆ.
ಸಾಂಪ್ರದಾಯಿಕದಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದಿಂದ ಒಳಗೊಂಡ ಸಿಂಕ್ಗಳು ಕಾಣಸಿಗುತ್ತವೆ. ಆದರೆ, ಅವುಗಳಲ್ಲಿ ಯಾವುದು ನಮ್ಮ ಮನೆಗೆ ಸೂಕ್ತವೋ ಅದನ್ನು ಬಳಸುವುದು ಒಳ್ಳೆಯದು. ಹಳ್ಳಿಗಳಲ್ಲಿ ತುಂಬಾ ಮಾಡ್ ಆಗಿರುವ ಬಳುಕಿನಂತಿರುವ ಸಿಂಕ್ ಬಳಕೆ ಸೂಕ್ತವಲ್ಲ. ಅಲ್ಲಿ ಸಾಂಪ್ರದಾಯಿಕ ಸಿಂಕೇ ಉತ್ತಮ. ಹೀಗಾಗಿ ಆಧುನಿಕವಾಗಿರುವ ಹಲವು ಬಗೆಯ ಸಿಂಕ್ಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಬಾತ್ರೂಮ್
ಇಲ್ಲಿ ಬಳಕೆಯಾಗುವ ಸಿಂಕ್ ಸದೃಢವಾಗಿರಬೇಕು. ಸ್ವಲ್ಪ ಸ್ಟೈಲಿಷ್ ಆಗಿಯೂ ಇರಬೇಕು. ಇತ್ತೀಚೆಗಷ್ಟೇ ಬಾತ್ರೂಮ್ಗಾಗಿ ಒಂವಿವೊ ಎಂಬ ಕಂಪನಿ ಗ್ಲಾಸ್ನಲ್ಲಿ ಹೊಸದೊಂದು ಸಿಂಕ್ ವಿನ್ಯಾಸ ಮಾಡಿದೆ. ಅದರಲ್ಲಿ ನೀರು ಬಿದ್ದಾಕ್ಷಣ ಬೆಳಕು ಚೆಲ್ಲುತ್ತದೆ. ನೀರು ಹರಿಯುವುದು ಕೂಡ ಆಕರ್ಷವಾಗಿರುತ್ತದೆ. ಆದರೆ, ಇದರ ಬಳಕೆ ತುಂಬಾ ಸೂಕ್ಷ್ಮ.
ಸ್ಪೂನ್ ಸಿಂಕ್ ಬಾತ್ರೂಮ್ಗೆ ಹೇಳಿ ಮಾಡಿಸಿದ್ದು. ಮೇಲೆ ಅಗಲವಾಗಿ, ಕೆಳಗೆ ತೆಳುವಾಗಿ ಚಮಚದಂತೆಯೇ ವಿನ್ಯಾಸ ಹೊಂದಿದೆ. ಫಿಲಿಪ್ ವ್ಯಾಟ್ಸ್ ಇದರ ವಿನ್ಯಾಸಕರು. ಸೆರಾಮಿಕ್ನಿಂದ ತಯಾರಿಸಿರುವ ಬಿಳಿ ಬಣ್ಣದ ಸಾಮಾನ್ಯ ಸಿಂಕ್ಗಳು ಬಾತ್ರೂಮ್ಗೆ ಹೆಚ್ಚಾಗಿ ಬಳಸಲಾಗುತ್ತದೆ. ರಾಜಸ್ಥಾನ ಟೈಲ್ಸ್ ಬಳಸಿ ಮಾಡಿರುವ ಸಿಂಕ್ಗಳನ್ನೂ ಅಳವಡಿಸಬಹುದು. ಆದರೆ, ಇವುಗಳು ಸುತ್ತಲಿನ (ರೌಂಡ್) ಆಕಾರದಲ್ಲಿ ಇರುವುದಿಲ್ಲ. ಬದಲಾಗಿದ ಚೌಕಾಕಾರವಾಗಿರುತ್ತವೆ.
ಕಪ್ಪೆಚಿಪ್ಪು ಆಕಾರದಲ್ಲಿ ಇಯಾಕ್ಸ್ ಇಯಾಕ್ಸ್ ಎಂಬ ಸಿಂಕ್ ಬಂದಿದೆ. ಇದನ್ನು ಜೊಯೆಲ್ ರಾಬರ್ಟ್ಸ್ ವಿನ್ಯಾಸಗೊಳಿಸಿದ್ದು, ಸೆನ್ಸಾರ್ ಕೂಡ ಅಳವಡಿಸಬಹುದು. ಹೀಗಾಗಿ ನಲ್ಲಿಯ ಅಗತ್ಯ ಇರುವುದಿಲ್ಲ.
ಅಡುಗೆ ಮನೆ ಸಿಂಕ್
ಎಲ್ಲಕ್ಕಿಂತ ಮುಖ್ಯವಾದ ಭಾಗ ಅಡುಗೆಮನೆ ಸಿಂಕ್. ಪಾತ್ರೆಗಳನ್ನು ಇಲ್ಲಿಯೇ ಹೆಚ್ಚಾಗಿ ತೊಳೆಯುವುದರಿಂದ ಸದಾ ಕೊಳೆಯಾಗಿಯೇ ಇರುತ್ತದೆ. ಹೀಗಾಗಿ ಹೆಚ್ಚಾಗಿ ಕೊಳೆ ಆಗದಂಥ ಸಿಂಕ್ ಬಳಸುವುದು ಜಾಣ್ಮೆ. ಇತ್ತೀಚೆಗೆ ಫಿಲಿಪ್ಸ್ ಕಂಪನಿಯು ಅತ್ಯಾಧುನಿಕ ಅಡುಗೆಮನೆ ಸಿಂಕ್ ರೂಪಿಸಿದೆ. ಒಂದು ಕಡೆ ತರಕಾರಿ, ಸೊಪ್ಪನ್ನು ಕತ್ತರಿಸುವ ದೊಡ್ಡ ಚಾಪರ್. ಅದೇ ಚಾಪರ್ನ ಇನ್ನೊಂದು ಭಾಗದಲ್ಲಿ ಸಿಂಗ್ ಅಟ್ಯಾಚ್ ಮಾಡಿ ವಿನ್ಯಾಸಗೊಳಿಸಿದೆ. ಮರದಿಂದಲೂ ಮಾಡಿರುವ ಸಿಂಕ್ ಈಗ ಪ್ರಸಿದ್ಧಿ ಪಡೆಯುತ್ತಿದೆ. ಅದರಲ್ಲಿ ಪ್ಲೆವಿಸ್ ಡಿಸೈನ್, ಜುಲಿಯಾ ಕೊನೊವೆಂಕೊಗಳು ಹೆಚ್ಚು ಪ್ರಚಲಿತ. ಆದರೆ, ಮರದ ಸಿಂಕ್ಗಳ ಬಳಕೆ ದೇಶದಲ್ಲಿ ತುಂಬಾ ಕಡಿಮೆ. ಜೊತೆಗೆ ಹೆಚ್ಚು ಬಳಸಲು ಸೂಕ್ತವಲ್ಲ. ಅಷ್ಟೇ ಅಲ್ಲ, ಸ್ಟೈನ್ಲೆಸ್ ಸ್ಟೀಲ್ ಬಳಸಿಯೂ ಸಿಂಕ್ಗಳನ್ನು ರೂಪಿಸಲಾಗಿರುತ್ತವೆ. ಇವು ಅಡುಗೆಮನೆಗೆ ಹೆಚ್ಚು ಸೂಕ್ತ. ಕಾರಣ ಯಾವಾಗಲೂ ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಎಂಬ ಕಾರಣಕ್ಕೆ.
ಹಾಲ್ನಲ್ಲಿ ಸಿಂಕ್
ಸಾಮಾನ್ಯವಾಗಿ ಹಾಲ್ನಲ್ಲಿ ಹೆಚ್ಚಾಗಿ ಸಿಂಕ್ಗಳನ್ನು ಹಾಕುವುದಿಲ್ಲ. ಆದರೆ, ಮನೆಯ ಗಾತ್ರಕ್ಕನುಗುಣವಾಗಿ ಹಾಲ್ನಲ್ಲಿ ಸಿಂಕ್ ಬಳಸಬಹುದು. ಅದು ಡೈನಿಂಗ್ ಟೇಬಲ್ ಹತ್ತಿರ ಮಾತ್ರ. ಇಲ್ಲಿರುವ ಸಿಂಕ್ ಹೆಚ್ಚು ಬಳಕೆ ಆಗದ ಕಾರಣ ಅತ್ಯಾಕರ್ಷಕವಾಗಿರುವ ಸಿಂಕ್ ಸಾಕು. ರಾಜಸ್ಥಾನ ಟೈಲ್ಸ್ಗಳಿಂದ ರೂಪಿಸಿರುವ ಸಿಂಕ್ ಉತ್ತಮ. ಜೊತೆಗೆ ಇತ್ತೀಚೆಗೆ ಬಂದಿರುವ ಗ್ಲಾಸ್ನಿಂದಲೂ ಮಾಡಿರುವ ಸಿಂಕ್ಗಳನ್ನು ವಿಕ್ಟರ್ ವ್ಯಾಸಿಲೆವ್ ಕಂಪನಿ ರೂಪಿಸಿದೆ. ಇದನ್ನು ಬಳಸಬಹುದು.
ಸ್ವಚ್ಛತೆಗೂ ಆದ್ಯತೆ
ಸಿಂಕ್ ಬಳಕೆ ಇತ್ತೀಚೆಗೆ ತೀರಾ ಕಾಮನ್. ಆದರೆ, ಅದರ ಬಳಕೆಗಿಂತ ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಕಾಳಜಿ ತೀರಾ ಕಡಿಮೆಯಾಗಿದೆ. ಹೀಗಾಗಿ ಕೆಲವೊಮ್ಮೆ ಸಿಂಕ್ಗಳು ಗಬ್ಬು ನಾತ ಬೀರುತ್ತವೆ. ಸೊಳ್ಳೆಗಳ ಆಗರವಾಗುತ್ತವೆ. ಹೀಗಾಗಿ ಸಿಂಕ್ ಸ್ವಚ್ಛತೆಗೆ ಮೊದಲ ಆದ್ಯತೆ ಇರಲಿ.
- ಬ್ರಹ್ಮಾನಂದ ಎನ್. ಹಡಗಲಿ
brahmanandhn@gmail.com