'ಆ ದಿನ'ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಿ

ಆದರೆ ಪೀರಿಯಡ್ಸ್ ಸಮಯದಲ್ಲಿ ದೇಹದ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಂಡಿಲ್ಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಋತುಸ್ರಾವ, ರಜಸ್ವಲೆ, ಬಹಿಷ್ಠೆಯಾಗುವುದು..ಹೀಗೆಲ್ಲಾ ಹೇಳುವುದಕ್ಕಿಂತ ಪೀರಿಯಡ್ಸ್ ಎಂದು ಹೇಳಿದರೆ ಹೆಚ್ಚಿನವರಿಗೆ ಅರ್ಥವಾಗುತ್ತದೆ. ತನ್ನ ತ್ವಚೆಯ ಬಗ್ಗೆ, ಕೂದಲಿನ ಬಗ್ಗೆ, ಮೇಕಪ್ ಬಗ್ಗೆ, ಅಂದ ಚೆಂದ ಬಗ್ಗೆ ಕಾಳಜಿ ವಹಿಸದೇ ಇರುವ ಹೆಣ್ಣು ಮಕ್ಕಳು ಇರಲಿಕ್ಕಿಲ್ಲ. ಚಳಿಗಾಲ ಬಂದರೆ ತ್ವಚೆಗೆ ಏನು ಹಚ್ಚಬೇಕು? ಬೇಸಿಗೆ ಕಾಲದಲ್ಲಿ ಯಾವ ರೀತಿಯ ಬಟ್ಟೆ ಹಾಕಬೇಕು? ಮಳೆಗಾಲದಲ್ಲಿ ಸೋಂಕು ತಗಲದಂತೆ ಹೇಗಿರುವುದು? ಎಂಬುದರ ಬಗ್ಗೆ ಹೆಣ್ಣು ಮಕ್ಕಳು ಯೋಚಿಸುತ್ತಾರೆ. ಆದರೆ ಪೀರಿಯಡ್ಸ್ ಸಮಯದಲ್ಲಿ ದೇಹದ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಂಡಿಲ್ಲ. 
ಪ್ರತಿಯೊಬ್ಬ ಮಹಿಳೆ ಕೂಡಾ 'ಆ ದಿನಗಳು' ಅಂದರೆ ಋತುಸ್ರಾವದ ದಿನಗಳಲ್ಲಿ ಅಂಗಾಂಗದ ಶುಚಿತ್ವದ ಬಗ್ಗೆ ಹೆಚ್ಚು ಕಾಳಜಿ ವಹಿಸಲೇ ಬೇಕು ಅಂತಾರೆ ವೈದ್ಯರು. ಯಾಕೆಂದರೆ ಆ ದಿನಗಳಲ್ಲಿ ಅತೀ ಹೆಚ್ಚು ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಹೆಣ್ಣು ಮಕ್ಕಳು ತಮ್ಮ ಗುಪ್ತಾಂಗಗಳ ಶುಚಿತ್ವದ ಬಗ್ಗೆ ಪರಸ್ಪರ ಮಾತಾಡುವುದೂ ಇಲ್ಲ ಅಂತಾರೆ ತಜ್ಞರು. 
ಆ ದಿನಗಳಲ್ಲಿ ಗುಪ್ತಾಂಗಗಳನ್ನು ಆದಷ್ಟು ಶುಚಿಯಾಗಿರಿಸಬೇಕು. ಒಳ್ಳೆಯ ಆಹಾರ, ಕಣ್ತುಂಬ ನಿದ್ದೆ ಹಾಗೂ ದೇಹಕ್ಕೆ ವಿಶ್ರಾಂತಿ ಅತ್ಯಗತ್ಯ.
ಋತುಸ್ರಾವದ ದಿನಗಳಲ್ಲಿ ಪ್ಯಾಡ್ ಚೇಂಜ್ ಮಾಡಿ, ಬರೀ ನೀರಲ್ಲಿ ತೊಳೆದರಷ್ಟೇ ಸಾಲದು, ಬ್ಯಾಕ್ಟೀರಿಯಾ, ಈಸ್ಟ್ ಸೋಂಕು ತಗಲದಂತೆ ಎಚ್ಚರ ವಹಿಸುವುದು ಕೂಡಾ ಅತ್ಯಗತ್ಯ.
ಸೋಂಕು ತಗಲುವುದಕ್ಕೆ ಕಾರಣಗಳೇನು?
ಋತುಸ್ರಾವದ ದಿನಗಳಲ್ಲಿ ಗುಪ್ತಾಂಗದ ಸೋಂಕು ತಗಲುವುದಕ್ಕೆ ಪ್ರಮುಖ ಕಾರಣವೆಂದರೆ ಯೋನಿ (ವಜೀನಾ)ಯಲ್ಲಿ ಪಿಹೆಚ್ನ ಮಟ್ಟ ಏರುಪೇರಾಗುವುದು. ದೇಹದಿಂದ ಅಶುದ್ಧ ರಕ್ತ ಹೊರಹೋಗುವ ವೇಳೆ ಇಲ್ಲಿ ಪಿಹೆಚ್ ಮಟ್ಟದಲ್ಲಿ ಏರುಪೇರು ಸಂಭವಿಸುತ್ತದೆ. ಈ ವೇಳೆ ಬ್ಯಾಕ್ಟೀರಿಯಾಗಳು ಗರ್ಭಕೋಶ ಮತ್ತು ಪೆಲ್ವಿಕ್ ಕ್ಯಾವಿಟಿ ಮೂಲಕ ದೇಹದೊಳಗೆ ಹೋಗುವ ಸಾಧ್ಯತೆಗಳಿರುತ್ತವೆ. ಈ ಹೊತ್ತಲ್ಲಿ ಈಸ್ಟ್ ಸೋಂಕು ಹೆಚ್ಚಾಗಿ ಕಾಣಲ್ಪಡುತ್ತದೆ.
ಯೋನಿಯಲ್ಲಿನ ಪಿಹೆಚ್ ಮಟ್ಟ  3.5 ರಿಂದ 4.5 ಇರಬೇಕು. ಆ ದಿನಗಳಲ್ಲಿ ಮಹಿಳೆಯರು ಈ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ಹೆಚ್ಚು ಶುಚಿತ್ವ ಕಾಪಾಡಬೇಕು.
ಬಾಹ್ಯ ವಸ್ತುಗಳ ಸೋಂಕು ತಗಲದಂತೆ ತನ್ನದೇ ಆದ ಪ್ರತಿರೋಧಕ ಸ್ರಾವವನ್ನು ಸ್ರವಿಸುವ ಸಾಮರ್ಥ್ಯ ಯೋನಿಗೆ ಇದೆ. ಹೀಗಿದ್ದರೂ ಸೋಪ್ ಅಥವಾ ನೀರು ಬಳಸಿ ಶುಚಿಗೊಳಿಸಿದರಷ್ಟೇ ಸಾಲದು. ಹೊರಹೋಗುವ ರಕ್ತ ಮತ್ತು ಸೋಪ್ ಕ್ಷಾರೀಯ (ಆಲ್ಕಲೈನ್) ಸ್ವಭಾವ ಹೊಂದಿದ್ದು, ಇವುಗಳ ಪಿಹೆಚ್ ಮಟ್ಟ 8 ರಿಂದ 10ರ ವರೆಗೆ ಇರುತ್ತದೆ. ಸೋಪ್ ಬಳಸಿ ಶುಚಿಗೊಳಿಸುವುದರಿಂದ ಯೋನಿಯ ಪಿಹೆಚ್ ಮಟ್ಟದ ಮೇಲೆ ಇದು ಪರಿಣಾಮ ಬೀರಿ, ಏರು ಪೇರು ಉಂಟಾಗುವಂತೆ ಮಾಡುತ್ತದೆ. ಆದ್ದರಿಂದ  ಲ್ಯಾಕ್ಟಿಕ್ ಆ್ಯಸಿಡ್ ಹೊಂದಿರುವ ವಜೀನಲ್ ವಾಶ್ ಗಳನ್ನು ಬಳಸುವುದೊಳಿತು. ಈ ಲೋಷನ್ಗಳಿಂದ ತೊಳೆಯುವುದಾದರೆ ಇವು ಪಿಹೆಚ್ ಮಟ್ಟವನ್ನು ಕಾಪಾಡುವುದಕ್ಕೆ ಸಹಕರಿಸುತ್ತವೆ.
ಒದ್ದೆಯಾಗುತ್ತಿದ್ದಂತೆಯೇ ಪ್ಯಾಡ್ ಗಳನ್ನು ಅಥವಾ ಟ್ಯಾಂಪೋನ್ಸ್ ಗಳನ್ನು ಬದಲಿಸುತ್ತಲೇ ಇರಬೇಕು. ಬಟ್ಟೆಯಿಂದ ಹೆಚ್ಚಿನ ಸೋಂಕು ಬರುವ ಸಾಧ್ಯತೆ ಇದೆ.ಆದ್ದರಿಂದ ಬಟ್ಟೆಯನ್ನು ಪ್ಯಾಡ್ ಆಗಿ ಬಳಸುವುದು ಬೇಡ. ಅದ್ಯಾವುದೇ ಪ್ಯಾಡ್ ಆಗಿರಲಿ 3 ರಿಂದ 4 ಗಂಟೆ ಕಾಲವಷ್ಟೇ ಅದನ್ನು ಬಳಸಬೇಕು. ಅದಕ್ಕಿಂತ ಹೆಚ್ಚು ಹೊತ್ತು ಅದೇ ಪ್ಯಾಡ್ ನಲ್ಲಿದ್ದು, ಪ್ಯಾಡ್ ಬದಲಿಸದೇ ಇದ್ದರೆ ಸೋಂಕು ಆಗುವ ಸಾಧ್ಯತೆಗಳು ಹೆಚ್ಚು.
ಋತುಸ್ರಾವದ ದಿನಗಳಲ್ಲಿ ಗುಪ್ತಾಂಗಗಳಲ್ಲಿ ತುರಿಕೆ ಅಥವಾ ಇನ್ಯಾವುದೇ ರೀತಿಯ ಅಸ್ವಸ್ಥತೆ ಕಂಡುಬಂದಲ್ಲಿ ಹೆಚ್ಚು ಜಾಗ್ರತೆ ವಹಿಸಿ, ಅಗತ್ಯ ಬಂದರೆ ವೈದ್ಯರ ಸಲಹೆ ಪಡೆಯಿರಿ.
-ಅನ್ವಿತಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com