ಕೇವಲ 100 ಡಾಲರ್ ಗೆ ಉಗ್ರರಿಗೆ ಗುರುತಿನ ಚೀಟಿ..!

ಕೇವಲ 100 ಡಾಲರ್ ನೀಡಿದರೆ ಅಲ್ ಖೈದಾ ಉಗ್ರರಿಗೂ ಗುರುತಿನ ಚೀಟಿ ವಿತರಿಸುವ ದಂಧೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ.
ಉಗ್ರರಿಗೆ ಪಾಕ್ ಗುರುತಿನ ಚೀಟಿ (ಸಾಂದರ್ಭಿಕ ಚಿತ್ರ)
ಉಗ್ರರಿಗೆ ಪಾಕ್ ಗುರುತಿನ ಚೀಟಿ (ಸಾಂದರ್ಭಿಕ ಚಿತ್ರ)
Updated on: 

ಇಸ್ಲಾಮಾಬಾದ್: ಕೇವಲ 100 ಡಾಲರ್ ನೀಡಿದರೆ ಅಲ್ ಖೈದಾ ಉಗ್ರರಿಗೂ ಗುರುತಿನ ಚೀಟಿ ವಿತರಿಸುವ ದಂಧೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ (Inter-Services Intelligence Agency) ನ ಅಧಿಕಾರಿಗಳು ಈ ಹಗರಣವನ್ನು ಬೆಳಕಿಗೆ ತಂದಿದ್ದು, ಪಾಕಿಸ್ತಾನದಲ್ಲಿ ಈ ವಿಚಾರ ಇದೀಗ  ಭಾರಿ ಸುದ್ದಿಗೆ ಗ್ರಾಸವಾಗಿದೆ. ಸ್ವತಃ ಪಾಕಿಸ್ತಾನದ ಗುರುತಿನ ಚೀಟಿ ಪ್ರಾಧಿಕಾರ-ನಾಡ್ರಾ (National Database and Registration Authority-NADRA)ದ ಅಧಿಕಾರಿಗಳು ಈ  ಹಗರಣದಲ್ಲಿ ಕೈ ಜೋಡಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಪಾಕಿಸ್ತಾನ ಸರ್ಕಾರದ ಅಧಿಕೃತ ದಾಖಲೆಗಳ ಅನ್ವಯ ಸರ್ಕಾರ ಕೈಗೊಂಡಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಉಗ್ರರಿಗೂ ಗುರುತಿನ ಚೀಟಿ ವಿತರಿಸಿರುವ  ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹಗರಣದಲ್ಲಿ ನಾಡ್ರಾದ ಪ್ರಮುಖ ಅಧಿಕಾರಿಗಳೇ ಭಾಗಿಯಾಗಿದ್ದು, ಲಂಚ ಪಡೆದು ಉಗ್ರರಿಗೆ ಪಾಕಿಸ್ತಾನ ದೇಶದ ನಕಲಿ ಗುರುತಿನ ಚೀಟಿಗಳನ್ನು  ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು 2009ರಲ್ಲಿ ಅಮೆರಿಕದ ನ್ಯೂಯಾರ್ಕ್ ನ ಸಬ್ ವೇ (ಸುರಂಗ ಮಾರ್ಗ) ಮಾರ್ಗದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಅಲ್ ಖೈದಾ ಉಗ್ರ ಅದ್ನಾನ್ ಎಲ್ ಷುಕ್ರಿಜುಮಾಹ್ ನ  ಬಳಿಯಲ್ಲಿಯೂ ಕೂಡ ಪಾಕಿಸ್ತಾನದ ಗುರುತಿನ ಚೀಟಿ ಪತ್ತೆಯಾಗಿತ್ತು ಎಂದು ಸರ್ಕಾರದ ದಾಖಲೆಗಳು ಬಹಿರಂಗ ಪಡಿಸಿವೆ. ಉಗ್ರ ಷುಕ್ರಿಜುಮಾಹ್ ಹುಟ್ಟಿದ್ದು ಸೌದಿ ಅರೇಬಿಯಾದಲ್ಲಿ. ಕೆಲ ಕಾಲ  ಅಮೆರಿಕದಲ್ಲಿ ಈತ ಕಾಲ ಕಳೆದಿದ್ದ. 2014ರಲ್ಲಿ ಪಾಕಿಸ್ತಾನ ಸರ್ಕಾರ ದಕ್ಷಿಣ ವಜೀರಿಸ್ತಾನದಲ್ಲಿ ಕೈಗೊಂಡಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಈತ ಅಸುನೀಗಿದ್ದ.

ಇನ್ನು ಐಎಸ್ ಐ ಮೂಲಗಳ ಪ್ರಕಾರ ಪಾಕಿಸ್ತಾನದಾದ್ಯಂತ ಸುಮಾರು 50 ಸಾವಿರಕ್ಕೂ ಅಧಿಕ ನಕಲಿ ಗುರುತಿನ ಚೀಟಿ ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮವಾಗಿ ದೇಶ  ಪ್ರವೇಶಿಸಿರುವವರಿಗೆ (ನುಸುಳುಕೋರರು) ಮತ್ತು ಪಾಕ್-ಆಫ್ಘನ್ ಗಡಿಯಲ್ಲಿ ನಡೆದ ಕಾರ್ಯಾಚಾರಣೆ ವೇಳೆ ಸೈನಿಕರಿಂದ ತಪ್ಪಿಸಿಕೊಂಡ ಉಗ್ರರಿಗೆ ಈ ಗುರುತಿನ ಚೀಟಿಗಳು  ಹಂಚಿಕೆಯಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬೃಹತ್ ಹಗರಣದ ತನಿಖೆ ಕೈಗೊಂಡಿರುವ ಐಎಸ್ ಐನ ಅಧಿಕಾರಿಗಳು, ಸೇನೆಯ ನಿವೃತ್ತ ಬ್ರಿಗೇಡಿಯರ್  ಗಳು ಸೇರಿದಂತೆ ನಾಡ್ರಾದ ಸುಮಾರು 40 ಪ್ರಮುಖ ಅಧಿಕಾರಿಗಳ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದು, ಕರಾಚಿಯಲ್ಲಿ ಈ ಬಗ್ಗೆ ವರದಿ ತಯಾರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಯೋತ್ಪಾದನೆಯ ತವರು ಎಂದೇ ಕುಖ್ಯಾತಿ ಗಳಿಸಿರುವ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಪಾಕಿಸ್ತಾನಿ ಅಧಿಕಾರಿಗಳ ಹಣದಾಹಕ್ಕೆ ಈ ಪ್ರಕರಣ ಸ್ಪಷ್ಟ  ಕೈಗನ್ನಡಿಯಾಗಿದೆ. ನಿವೃತ್ತ ಸೇನಾಧಿಕಾರಿಗಳು, ಗುರುತು ಪತ್ರ ಪ್ರಾಧಿಕಾರಿದ ಪ್ರಮುಖ ಅಧಿಕಾರಿಗಳೇ ಹಗರಣದಲ್ಲಿ ಪಾಲ್ಗೊಂಡಿರುವುದು ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ  ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com