

ಲಾಸ್ ಏಂಜೆಲಿಸ್: ಹಾಲಿವುಡ್ ನ ಖ್ಯಾತ ಛಾಯಾಗ್ರಾಹಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಹಸ್ಕೆಲ್ ವೆಕ್ಸ್ ಲರ್ ಭಾನುವಾರ ರಾತ್ರಿ ವಿಧಿವಶರಾಗಿದ್ದು, ಅವರಿಗೆ 93 ವರ್ಷ ವಯಸ್ಸಾಗಿತ್ತು.
ವಯಸ್ಸು ಮತ್ತು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಹಸ್ಕೆಲ್ ವೆಕ್ಸ್ ಲರ್ ಅವರು ಭಾನುವಾರ ಕ್ಯಾಲಿ ಫೋರ್ನಿಯಾದ ಸ್ಯಾಂಟಾಮೊನಿಕಾದಲ್ಲಿರುವ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾತ್ರಿ ಮಲಗಿದ್ದ ಹಸ್ಕೆಲ್ ನಿದ್ರೆಯಲ್ಲೇ ಚಿರ ನಿದ್ರೆಗೆ ಜಾರಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 1970-80 ರ ದಶಕದಲ್ಲಿ ತಮ್ಮ ವಿಭಿನ್ನ ಶೈಲಿಯ ಛಾಯಾಗ್ರಹಣದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಹಸ್ಕೆಲ್, ಎರಡೆರಬಾರಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.
"ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್" ಚಿತ್ರವು 1966 ರಲ್ಲಿ ಹಕ್ಸಲ್ ಅವರಿಗೆ ಮೊದಲ ಆಸ್ಕರ್ ಪ್ರಶಸ್ತಿ ತಂದುಕೊಟ್ಟರೆ, ಬೌಂಡ್ ಆಫ್ ಗ್ಲೋರಿ ಚಿತ್ರದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ 1976ರಲ್ಲಿ ಎರಡನೇ ಬಾರಿಗೆ ಹಸ್ಕೆಲ್ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು. ಆರು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಯುದ್ದ, ರಾಜಕೀಯ ಹಾಗೂ ಸಮಾಜದ ಅವ್ಯವಸ್ಥೆ ಬಗ್ಗೆ ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ಹಸ್ಕೆಲ್, ಚಿತ್ರ ನಿರ್ಮಾಣದ ಜೊತೆಗೆ ಸಾಮಾಜಿಕ ಕಳಕಳಿ, ನ್ಯಾಯ ಮತ್ತು ಶಾಂತಿ ಸಂದೇಶ ನೀಡುವಂತಹ ಚಿತ್ರಗಳಿಗೂ ಹೆಚ್ಚಿನ ಮಹತ್ವ ನೀಡಿದ್ದರು.
‘ಹೂ ಈಸ್ ಅಫ್ರೇಡ್ ಆಫ್ ವರ್ಜಿನಿಯ ವೂಲ್ಪ್’, ‘ಬೌಂಡ್ ಆಫ್ ಗ್ಲೋರಿ’, ‘ಮೀಡಿಯಮ್ ಕೂಲ್’ ಅವರ ಕೆಲವು ಮಹತ್ವದ ಚಿತ್ರಗಳಾಗಿದ್ದವು. ಅಲ್ಲದೆ 1985 ರಲ್ಲಿ ಯುದ್ಧದ ತಿರುಳು ಹೊಂದಿದ್ದ ‘ಲ್ಯಾಟಿನೊ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದರು. ಹಸ್ಕೆಲ್ ಅವರ ನಿಧನಕ್ಕೆ ಹಾಲಿವುಡ್ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.