

ಕಾಬೂಲ್: ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಐಸಿಸ್ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ ಹಫೀಜ್ ಸಯೀದ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ.
ಆಫ್ಘಾನ್ ಗುಪ್ತಚರ ಸಂಸ್ಥೆಗಳು ಹಾಗೂ ಉಗ್ರ ಕಮಾಂಡರ್‍ಗಳು ಈ ವಿಚಾರವನ್ನು ದೃಢಪಡಿಸಿದ್ದಾರೆ. ನಂಗಾರ್‍ಹರ್ ಪ್ರಾಂತ್ಯದಲ್ಲಿ ಶುಕ್ರವಾರ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ 30 ಮಂದಿ ಐಸಿಸ್ ಉಗ್ರರು ಬಲಿಯಾಗಿದ್ದಾರೆ.
ಆ ಪೈಕಿ ಸಯೀದ್ ಕೂಡ ಸೇರಿದ್ದಾನೆ ಎಂದು ಸಿಎನ್ ಎನ್ ಐಬಿಎನ್ ವರದಿ ಮಾಡಿದೆ. ಉಗ್ರ ಕಮಾಂಡರ್‍ಗಳ ಸಭೆ ನಡೆಯುತ್ತಿದ್ದ ಸಮಯದಲ್ಲೇ ಈ ದಾಳಿ ನಡೆದಿದೆ. ಕಳೆದ ಸೋಮವಾರ ಅಮೆರಿಕ ನಡೆಸಿದ ವೈಮಾನಿಕ ದಾಳಿಯಿಂದ 49 ಮಂದಿ ಮೃತಪಟ್ಟಿದ್ದರು ಎಂದೂ ವರದಿ ತಿಳಿಸಿದೆ.