ಪ್ಯಾರಿಸ್: ಪ್ಯಾರಿಸ್ ದಾಳಿಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಗ್ರಹಕ್ಕೆ ಫ್ರಾನ್ಸ್ ದೇಶ ಪಣತೊಟ್ಟಿದೆ. ಉಗ್ರ ಕೃತ್ಯಗಳನ್ನೆಸಗುತ್ತಿರುವ ಇಸಿಸ್ ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ತಮಗೆ ಸಹಾಯ ನೀಡುವಂತೆ ಅಮೆರಿಕ ಮತ್ತು ರಷ್ಯಾ ದೇಶಗಳಿಗೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಕರೆ ನೀಡಿದ್ದಾರೆ.
ಪ್ಯಾಲೇಸ್ ಆಫ್ ವರ್‌ಸೈಲೆಸ್‌ನಲ್ಲಿ ನಡೆದ ಪಾರ್ಲಿಮೆಂಟ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಹೊಲ್ಲಾಂಡ್ , ಫ್ರಾನ್ಸ್ ಯುದ್ಧ ತಂತ್ರ ಹೂಡಿದೆ ಎಂದಿದ್ದಾರೆ. ಅದೇ ವೇಳೆ ದೇಶದ ಭದ್ರತೆ ಮತ್ತು ಉಗ್ರ ನಿಗ್ರಹ ಕಾನೂನನ್ನು ಸದೃಢಗೊಳಿಸಲು ಹೆಚ್ಚಿನ ನಿಧಿಯನ್ನು ವಿನಿಯೋಗಿಸಲಾಗುವುದು ಎಂದು ಹೇಳಿದ್ದಾರೆ.
ನಾವು ನಾಗರಿಕತೆಯ ಮೇಲೆ ಯುದ್ಧ ಹೂಡುವುದಿಲ್ಲ,ಯಾಕೆಂದರೆ ಈ ಹಂತಕರು ಯಾರನ್ನೂ ಪ್ರತಿನಿಧೀಕರಿಸುವುದಿಲ್ಲ. ಜಗತ್ತಿಗೇ ಭೀತಿಯೊಡ್ಡಿರುವ ಜಿಹಾದಿ ಉಗ್ರರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೊಲ್ಲಾಂಡ್ ಹೇಳಿಕೆ ನೀಡಿದ್ದಾರೆ.
ಉಗ್ರ ನಿಗ್ರಹ ಹೋರಾಟದಲ್ಲಿ ಕೈ ಜೋಡಿಸುವಂತೆ ಅಮೆರಿಕ ಮತ್ತು ರಷ್ಯಾ ದೇಶಕ್ಕೆ ಕರೆ ನೀಡಿದ ಹೊಲ್ಲಾಂಜ್, ಶೀಘ್ರದಲ್ಲೇ ತಾವು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.