

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಗೆ ಮಾಜಿ ಸೇನಾಧ್ಯಕ್ಷ ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರೇ ಕಾರಣ ಎಂದು ಅಮೆರಿಕದ ಪತ್ರಕರ್ತನೊಬ್ಬ ನೀಡಿದ್ದ ಹೇಳಿಕೆ ಬಹಿರಂಗಗೊಂಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯಾ ಪ್ರಕರಣ ಸಂಬಂಧ ಸಂಗ್ರಹಿಸಲಾಗಿದ್ದ ಮಾಹಿತಿಗಳಲ್ಲಿ ಅಮೆರಿಕ ಪತ್ರಕರ್ತ ಮಾರ್ಕ್ ಸೀಗಲ್ ನ ಹೇಳಿಕೆಗಳು ಕೂಡ ದಾಖಲಾಗಿದ್ದು, ಈ ದಾಖಲೆಗಳು ಇದೀಗ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ. ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿರುವಂತೆ ಅಕ್ಟೋಬರ್ 1ರಂದು ದಾಖಲಿಸಿಕೊಳ್ಳಲಾಗಿದ್ದ 4 ಪುಟಗಳ ಹೇಳಿಕೆಯಲ್ಲಿ ಮಾರ್ಕ್ ಸೀಗಲ್, ಭುಟ್ಟೋ ಹತ್ಯೆಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಅವರೇ ನೇರ ಹೊಣೆ. ಏಕೆಂದರೆ ತಮ್ಮ ದಾಳಿಯಾಗುವ ಕುರಿತು ಭುಟ್ಟೋ ಅವರು ಅಂದಿನ ಅಧ್ಯಕ್ಷ ಮುಷರಫ್ ಅವರಿಗೆ ತಿಳಿಸಿದ್ದರು. ಇದಾಗ್ಯೂ ಸೂಕ್ತ ಭದ್ರತೆ ಕೈಗೊಳ್ಳಲಾಗಿಲ್ಲ. ಹೀಗಾಗಿ ಅವರ ಹತ್ಯೆಗೆ ಮುಷರಫ್ ಅವರೇ ನೇರ ಹೊಣೆ ಎಂದು ಹೇಳಿದ್ದರು.
"ಭುಟ್ಟೋ ಅವರ ಮೇಲೆ ದಾಳಿಯಾಗುವ ಕುರಿತು ಗಲ್ಫ್ ಏಜೆನ್ಸಿಗಳು ಮೊದಲೇ ಮಾಹಿತಿ ನೀಡಿದ್ದವು. ಈ ಸಂಬಂಧ ಕೆಲ ದೂರವಾಣಿ ಕರೆಗಳನ್ನು ಕೂಡ ಟ್ರೇಸ್ ಮಾಡಿ ಭುಟ್ಟೋ ಮೇಲೆ ದಾಳಿ ನಡೆಸುವ ಕುರಿತು ಮಾಹಿತಿ ಕಲೆಹಾಕಿದ್ದವು. ಹೀಗೆ ಬಂದ ಕರೆಗಳ ಪೈಕಿ ಮೂರು ಕರೆಗಳು ಭುಟ್ಟೋ ಅವರ ಹತ್ಯೆಗೆ ರೂಪಿಸಲಾಗಿದ್ದ ಸಂಚಿನಲ್ಲಿ ಮುಷರಫ್ ಕೂಡ ಭಾಗಿಯಾಗಿರುವ ಕುರಿತು ಮಾಹಿತಿ ನೀಡಿದ್ದವು. ಇನ್ನು ಸ್ವತಃ ಬೆನಜೀರ್ ಭುಟ್ಟೋ ಅವರೇ ಮುಷರಫ್ ಅವರಲ್ಲಿ ಮನವಿ ಮಾಡಿಕೊಂಡು ತಮ್ಮ ಭದ್ರತೆಗೆ ವಿದೇಶಿ ಭದ್ರತಾಪಡೆಗಳ ನೇಮಿಸುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಮುಷರಫ್ ತಿರಸ್ಕರಿಸಿದ್ದರು.
ಕಾರಿನ ಟಿಂಟೆಡ್ ಗ್ಲಾಸ್ ತೆಗೆಸಿದ ಮುಷರಫ್
ಇನ್ನೂ ಕುತೂಹಲಕಾರಿ ಅಂಶವೆಂದರೆ ಭುಟ್ಟೋ ಪ್ರಯಾಣಿಸುವ ಕಾರಿನ ಟಿಂಟೆಡ್ ಕವರ್ ಅನ್ನು ಪಾಕ್ ಸರ್ಕಾರವೇ ತೆಗೆಸಿತ್ತು ಎಂದು ಮಾರ್ಕ್ ಸೀಗೆಲ್ ಹೇಳಿದ್ದಾರೆ. ಭದ್ರತಾ ದೃಷ್ಟಿಯಿಂದ ಕಾರಿನಲ್ಲಿ ಯಾರಿದ್ದಾರೆ ಎಂಬುದು ಯಾರಿಗೂ ತಿಳಿಯದಿರಲಿ ಎಂದು ಕಾರಿನ ಗ್ಲಾಸ್ ಗಳಿಗೆ ಟಿಂಟೆಡ್ ಕವರ್ ಅನ್ನು ಹಾಕಲಾಗಿರುತ್ತದೆ. ಆದರೆ ಭುಟ್ಟೋ ಪ್ರಯಾಣಿಸುವ ಕಾರಿನ ಟಿಂಟೆಡ್ ಕವರ್ ಅನ್ನು ಸರ್ಕಾರ ತೆಗೆಸುವ ಔಚಿತ್ಯವೇನಿತ್ತು..? ಇದು ಶಂಕೆ ಮೂಡುವ ಅಂಶವಾಗಿದೆ ಎಂದು ಸೀಗಲ್ ಹೇಳಿದ್ದಾರೆ.
ಒಟ್ಟಾರೆ ಪತ್ರಕರ್ತ ಮಾರ್ಕ್ ಸೀಗಲ್ ಅವರ ಈ ಹೇಳಿಕಗಳನ್ನು ಗಮನಿಸಿದರೆ, ಪಾಕಿಸ್ತಾನದ ಅಂದಿನ ಅಧ್ಯಕ್ಷ ಫರ್ವೇಜ್ ಮುಷರಫ್ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಭುಟ್ಟೋ ಹತ್ಯೆಗೆ ಮುಂದಾಗಿದ್ದಾರೆ ಎಂಬ ಅನುಮಾನಗಳು ಮೂಡುತ್ತವೆ.