

ಜಕಾರ್ತ: ಇಂಡೋನೇಷ್ಯಾದ ಅಕೇಹ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 54ಕ್ಕೇರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಅಕೇಹ್ ಪ್ರಾಂತ್ಯದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಹಲವಾರು ಮನೆಗಳು ನೆಲಸಮಗೊಂಡಿವೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು ದಾಖಲಾಗಿದ್ದು, ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಸುಮಾತ್ರಾ ದ್ವೀಪದ ಪುಟ್ಟ ಪಟ್ಟಣವಾಗಿರುವ ಮ್ಯೂರೆಡ್ಯು ಪಟ್ಟಣವೊಂದರಲ್ಲೇ 35ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಮುಸ್ಲಿಂ ಸಮುದಾಯವದವರು ಹೆಚ್ಚಾಗಿ ನೆಲೆಸಿರುವ ಇಲ್ಲಿ ಬೆಳಗಿನ ಪ್ರಾರ್ಥನೆ ಸಿದ್ಧವಾಗುತ್ತಿರುವಾಗಲೇ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ಭೂಕಂಪನದಿಂದಾಗಿ ಇಲ್ಲಿನ ಪ್ರಮುಖ ಮಸೀದಿಯ ಗೋಪುರ ಕುಸಿದಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಸ್ತುತ ಅಗ್ನಿಶಾಮಕ ದಳಗಳು ಹಾಗೂ ರಾಷ್ಟೀಯ ವಿಪತ್ತು ನಿಗ್ರಹದಳ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಸುಮಾರು 100ಕ್ಕೂ ಅಧಿಕ ಗಾಯಾಳುಗಳು ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮ್ಯೂರೆಡ್ಯು ಪಟ್ಟಣದ ಸಮೀಪದಲ್ಲೇ ಇರುವ ಪಿಡೀಜಯಾ ಜಿಲ್ಲೆಯಲ್ಲೂ ಅಪಾರ ಹಾನಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ. ಬುಧವಾರ ಬೆಳಗ್ಗೆ ಸುಮಾರು 5 ಗಂಟೆ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ಕಂಪನದಿಂದಾಗಿ ಯಾವುದ ರೀತಿಯ ಸುನಾಮಿ ಭೀತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.