ನವದೆಹಲಿ: ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಭೇಟಿ ನೀಡಿದ್ದನ್ನು ಪ್ರಶ್ನಿಸಿ ಮುನೀರ್ ಅಹಮದ್ ಎಂಬುವವರು ಲಾಹೋರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು. ಅಷ್ಟೇ ಅಲ್ಲದೇ, ಷರೀಫ್ ಅವರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಮುನೀರ್ ಅಹಮದ್ ಎಂಬುವವರು ನ್ಯಾಯವಾದಿ ಅಝರ್ ಸಿದ್ದೀಕ್ ಎಂಬುವವರ ಮೂಲಕ ದಾವೆ ದಾಖಲಿಸಿದ್ದು, ಅಧಿಕೃತ ಅನುಮತಿಯಿಲ್ಲದೆ ಮೋದಿ ಮತ್ತು ಅವರ ತಂಡ, 120 ಮಂದಿಯ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
ಭಾರತದ ಪ್ರಧಾನಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ಯಾವುದೇ ಮಾಹಿತಿ ನೀಡದೆಯೇ, ದಿಢೀರ್ ಭೇಟಿ ನೀಡಲಾಗಿದೆ. ಸಾಮಾಜಿಕ ಜಾಲ ತಾಣದ ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಕಾನೂನನ್ನು ಮತ್ತು ಆಂತರಿಕ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.