

ಜಕಾರ್ತಾ: ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ ಗುರುವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 6ಕ್ಕೇರಿದೆ. ದಾಳಿಕೋರರು ಐಸಿಎಸ್ ಉಗ್ರಗಾಮಿ ಗುಂಪಿಗೆ ಸೇರಿದವರಾಗಿದ್ದಾರೆ ಎಂ0ದು ಪೊಲೀಸರು ಹೇಳುತ್ತಾರೆ. 14ಕ್ಕೂ ಹೆಚ್ಚು ಉಗ್ರರು ಹತ್ತಿರದ ಥಿಯೇಟರ್ ಕಾಂಪ್ಲೆಕ್ಸ್ ನಲ್ಲಿ ಅಡಗಿ ಕುಳಿತಿದ್ದಾರೆ ಎಂದು ಭದ್ರತಾ ಪಡೆ ಯೋಧರು ಶಂಕಿಸಿದ್ದಾರೆ.
ಸ್ಫೋಟದ ಪ್ರಮುಖ ಬೆಳವಣಿಗೆಗಳು-
1. ಇಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆ ಸುಮಾರಿಗೆ 6 ಪ್ರಬಲ ಬಾಂಬ್ ಸ್ಫೋಟವಾಗಿದ್ದು, ಇಂಡೋನೇಷ್ಯಾದ ಅಧ್ಯಕ್ಷರ ಅರಮನೆ ಮತ್ತು ವಿಶ್ವಸಂಸ್ಥೆಯ ಕಚೇರಿ ಸಮೀಪದಲ್ಲಿಯೇ ನಡೆದಿದೆ.
2. ಪಕ್ಕದಲ್ಲಿರುವ ಥಿಯೇಟರ್ ಕಾಂಪ್ಲೆಕ್ಸ್ ಒಳಗೆ ಉಗ್ರಗಾಮಿಗಳು ಅಡಗಿ ಕುಳಿತಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರನ್ನೂ ಒತ್ತೆಯಾಳನ್ನಾಗಿ ಇರಿಸಿಲ್ಲ.
3. ಪಾಕಿಸ್ತಾನ ಮತ್ತು ಟರ್ಕಿಯ ರಾಯಭಾರಿ ಕಚೇರಿಯ ಹೊರಗೆ ಮತ್ತೆ ಮೂರು ಸ್ಫೋಟ ಸಂಭವಿಸಿದೆ ಎಂದು ಇಂಡೋನೇಷ್ಯಾದ ಟಿವಿ ವಾಹಿನಿಗಳು ಸುದ್ದಿ ಮಾಡಿವೆ. ಸರಿನ್ಹಾ ಶಾಪಿಂಗ್ ಕಾಂಪ್ಲೆಕ್ಸ್ ಹೊರಗೆ ಸ್ಫೋಟದ ನಂತರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.
4. ಮಾಧ್ಯಮಗಳ ವರದಿ ಪ್ರಕಾರ, ಮೋಟಾರ್ ಬೈಕ್ ನಲ್ಲಿ 10ರಿಂದ 15 ದಾಳಿಕೋರರು ಬಂದೂಕು,ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದಾರೆ.
5. ಜಕಾರ್ತದ ಹೃದಯ ಭಾಗದಲ್ಲಿರುವ ಸ್ಟಾರ್ ಬಕ್ಸ್ ಕೆಫೆಯ ಹತ್ತಿರ ನಡೆದ ಸ್ಫೋಟದಲ್ಲಿ ಸಾವಿಗೀಡಾದವರ ಶವಗಳು ರಸ್ತೆ ಮೇಲೆ ಬಿದ್ದಿದ್ದವು. ಹೊಟೇಲ್ ನಿಂದ ಹೊಗೆ ಬರುತ್ತಿತ್ತು. ಜನರು ದಿಕ್ಕುಪಾಲಾಗಿ ಓಡುತ್ತಿರುವುದು ಕಂಡುಬಂತು.
6. ಇಂಡೋನೇಷ್ಯಾದ ಸರ್ಕಾರಿ ಕಚೇರಿಗಳು, ವಿದೇಶಾಂಗ ಇಲಾಖೆ ಮೊದಲಾದವುಗಳ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸುತ್ತಿದ್ದು, ಅಧಿಕಾರಿಗಳು ಅದನ್ನು ನಾಶಪಡಿಸಿದ್ದರು.
7. ಇಂದು ನಡೆದ ಸ್ಫೋಟವು ಇಂಡೋನೇಷ್ಯಾ ನಾಗರಿಕರನ್ನು 2002ರಲ್ಲಿ ನಡೆದ ಭೀಕರ ಸ್ಫೋಟವನ್ನು ನೆನಪಿಸಿದೆ. ಆ ದಾಳಿಯಲ್ಲಿ 202 ಮಂದಿ ಸಾವನ್ನಪ್ಪಿದ್ದರು.