

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸತತ 2 ದಿನಗಳಿಂದ ಎಡೆ ಬಿಡದೆ ಮಳೆ ಸುರಿದ ಪರಿಣಾಮ ಭೀಕರ ಪ್ರವಾಹ ಸಂಭವಿಸಿದ್ದು, ಪ್ರವಾಹದಲ್ಲಿ ಸುಮಾರು 31ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಖೈಬರ್ ಪಕ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ಇಡೀ ದಿನ ಸುರಿದ ಭಾರಿ ಮಳೆ ಪ್ರವಾಹಕ್ಕೆ ಕಾರಣವಾಗಿದ್ದು, ನೂರಾರು ಟೆಂಟ್ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವಂತೆ ಪ್ರವಾಹದಲ್ಲಿ ಈ ವರೆಗೂ ಸುಮಾರು 31 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದ್ದು, ಪಾಕಿಸ್ತಾನ ಸೇನೆ, ಪ್ಯಾರಾಮಿಲಿಟರಿ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.
ಇನ್ನು ಚಿತ್ರಾಲ್ ಮತ್ತು ಉರ್ಸೂನ್ ಜಿಲ್ಲೆಗಳಲ್ಲಿ ಕುನಾರ್ ನದಿ ಉಕ್ಕಿ ಹರಿಯುತ್ತಿದ್ದು, ಮಸೀದಿ ಸೇರಿ ಒಟ್ಟು 30 ಗುಡಿಸಲುಗಳು ಪ್ರವಾಹದಿಂದಾಗಿ ಕೊಚ್ಚಿಹೋಗಿವೆ. ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೃಷಿ ಭೂಮಿ ಪ್ರವಾಹಕ್ಕೆ ತುತ್ತಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ರಂಜಾನ್ ಸಂಭ್ರಮಾಚರಣೆ ನಡೆಯುತ್ತಿದ್ದು ಇದೇ ವೇಳೆ ಪ್ರವಾಹ ಸಂಭವಿಸಿದೆ. ಇನ್ನು ಪ್ರವಾಹದ ಸಂದರ್ಭದಲ್ಲಿ ಮೃತರಾದ ಹಲವರು ನಮಾಜ್ ನಲ್ಲಿ ತೊಡಗಿದ್ದರು ಎಂದು ಚಿತ್ರಾಲ್ ಜಿಲ್ಲೆಯ ಮೇಯರ್ ಮಘ್ಫಿರಾತ್ ಶಾ ಮಾಹಿತಿ ನೀಡಿದ್ದಾರೆ.
ಡ್ಯಾಮ್ ಕಾಮಗಾರಿ ವೇಳೆ ಕುಸಿದ ಮೇಲ್ಛಾವಣಿ, ಚೀನಾ ಎಂಜಿನಿಯರ್ ಸೇರಿ ಹಲವರ ಸಾವು
ಇನ್ನು ಇದೇ ಖೈಬರ್ ಫಕ್ತುಂಖ್ವಾ ಪ್ರದೇಶದಲ್ಲಿ ಟರ್ಬೆಲಾ ಡ್ಯಾಮ್ ಕಾಮಗಾರಿ ವೇಳೆ ನೀರಿನ ರಭಸಕ್ಕೆ ಮೇಲ್ಚಾವಣಿ ಕುಸಿದ ಪರಿಣಾಮ ಚೀನಾದ ಇಬ್ಬರು ಇಂಜಿನಿಯರ್ ಗಳು ಮತ್ತು ಹಲವು ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವಾಯವ್ಯ ಖೈಬರ್ ಫಕ್ತುಂಖ್ವಾ ಪ್ರಾಂತ್ಯದ ಪ್ರಾಂತೀಯ ವಿಪತ್ತು ನಿರ್ವಹಣಾ ಮಂಡಳಿ ವಕ್ತಾರ ಲತಫುರ್ ರೆಹಮಾನ್ ತಿಳಿಸಿದ್ದಾರೆ.