

ಇಸ್ಲಾಮಾಬಾದ್: 2011ರಲ್ಲಿ ಒಸಮಾ ಬಿನ್ ಲಾಡೆನ್ ಹತ್ಯೆ ಮೂಲಕ ಇಡೀ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಅಬೋಟಾಬಾದ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಬಿನ್ ಲಾಡೆನ್ ಸತ್ತ ಜಾಗವನ್ನು ಸ್ಮಶಾನ ಮಾಡಬೇಕೇ ಅಥವಾ ಆಟದ ಮೈದಾನ ಮಾಡಬೇಕೆ ಎಂಬ ವಿಚಾರದ ಕುರಿತು ವಿವಾದವೆದ್ದಿದೆ.
ಸ್ಥಳೀಯರಲ್ಲಿ ವಜೀರಿಸ್ತಾನ್ ಹವೇಲಿ ಎಂದೇ ಖ್ಯಾತಿ ಗಳಿಸಿರುವ ಸುಮಾರು 3, 800 ಅಡಿ ವಿಸ್ತೀರ್ಣದ ಒಸಾಮಾ ಬಿನ್ ಲಾಡೆನ್ ನಿವಾಸದ ಕಾಂಪೌಂಡ್ ನಲ್ಲಿ ಸ್ಥಳೀಯ ಜಿಲ್ಲಾಡಳಿತ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿದ್ದರೆ, ಸರ್ಕಾರ ಮಾತ್ರ ಅಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಮುಂದಾಗಿದೆ. 2011ರಲ್ಲಿ ಅಮೆರಿಕದ ನೇವಿ ಸೀಲ್ ಪಡೆ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿದ ಬಳಿಕ ಆತನ ಸಂಪೂರ್ಣ ಕುಟುಂಬ ಅಜ್ಞಾತ ಸ್ಥಳಕ್ಕೆ ಸ್ಥಳಾಂತರವಾಗಿತ್ತು. ಬಳಿಕ ಈ ವಿವಾದಿತ ಪ್ರದೇಶವನ್ನು ಸ್ಥಳೀಯ ಸರ್ಕಾರ ವಶಪಡಿಸಿಕೊಂಡಿತ್ತು.
ಇದೀಗ ಈ ಜಾಗ ಸ್ಥಳೀಯ ಜಿಲ್ಲಾಡಳಿತ ಹಾಗೂ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ಸ್ಮಶಾನ ನಿರ್ಮಾಣ ಮಾಡುವುದಾಗಿ ಹೇಳಿದ್ದು, ಸರ್ಕಾರ ಮಾತ್ರ ಇಲ್ಲಿ ಆಟದ ಮೈದಾನಕ್ಕೆ ನಿರ್ಮಾಣ ಮಾಡಲು ಸಿದ್ಧತೆ ನಡೆಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಡಳಿತ ಅಧಿಕಾರಿ ಜಿಲ್ಫಿಕರ್ ಅಲಿ ಬುಟ್ಟೋ ಅವರು, ಸ್ಥಳೀಯ ರಿಯಲ್ ಎಸ್ಟೇಟ್ ಮಾಫಿಯಾದಿಂದ ಈ ಪ್ರದೇಶವನ್ನು ರಕ್ಷಿಸಲಾಗಿದ್ದು, ಈ ಪ್ರದೇಶದಲ್ಲಿ ಸ್ಮಶಾನ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಸ್ಥಳೀಯ ಜಿಲ್ಲಾಡಳಿತದ ಕ್ರಮವನ್ನು ಮುಷ್ತಾಖ್ ಘನಿ ನೇತೃತ್ವದ ಖೈಬರ್ ಪಂಖ್ತುಂಕ್ವಾ ಸರ್ಕಾರ ಖಂಡಿಸಿದ್ದು, ಇದು ಜನವಸತಿ ಪ್ರದೇಶವಾಗಿದೆ. ನೂರಾರು ಮಂದಿ ವಾಸಿಸುವ ಜಾಗದಲ್ಲಿ ಸ್ಮಶಾನ ನಿರ್ಮಾಣ ಸರಿಯಲ್ಲ. ಹೀಗಾಗಿ ವಿವಾದಿತ ಜಾಗದಲ್ಲಿ ಮೈದಾನ ನಿರ್ಮಿಸುವುದಾಗಿ ಸಚಿವರೊಬ್ಬರು ಹೇಳಿದ್ದಾರೆ. ಅಲ್ಲದೆ ಸರ್ಕಾರದಿಂದ ಹಣ ಬಿಡುಗಡೆಯಾದರೆ ಉತ್ತಮ ಗುಣಮಟ್ಟದ ಮೈದಾನ ನಿರ್ಮಾಣಕ್ಕೆ ಟೆಂಡರ್ ಕರೆಯುವುದಾಗಿ ಅವರು ಹೇಳಿದ್ದಾರೆ.
2011 ಮೇ 2ರ ರಾತ್ರಿ ಅಬೋಟಾಬಾದ್ ನಲ್ಲಿರುವ ಒಸಾಮಾ ಬಿನ್ ಲಾಡೆನ್ ಮನೆಗೆ ನುಗ್ಗಿದ್ದ ಅಮೆರಿಕದ ನೇವಿ ಸೀಲ್ ಪಡೆ ಹತ್ತಾರ ಸಹಚರರು ಸೇರಿದಂತೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಕೊಂದು ಹಾಕಿತ್ತು. ಬಳಿಕ ಆತನ ದೇಹವನ್ನು ಸಮುದ್ರಕ್ಕೆ ಎಸೆದಿತ್ತು.