

ಢಾಕಾ: ಬಾಂಗ್ಲಾದೇಶದಲ್ಲಿ ಅನ್ಯ ಧರ್ಮದವರ ಮೇಲೆ ದಾಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅಧಿಕೃತ ಇಸ್ಲಾಂ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ಹೊರಬರುವ ಬಗ್ಗೆ ಬಾಂಗ್ಲಾದೇಶ ಚಿಂತನೆ ನಡೆಸಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಇಸ್ಲಾಂ ತೀವ್ರಗಾಮಿಗಳಿಂದ ಹಿಂದೂ, ಕ್ರಿಶ್ಚಿಯನ್ ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಶಿಯಾ ಜನಾಂಗದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ಇಸ್ಲಾಂ ಅನ್ನು ಬಾಂಗ್ಲಾದ ಅಧಿಕೃತ ಧರ್ಮ ಎಂದು ಪರಿಗಣಿಸಬಾರದು ಎಂಬ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.
1988ರಿಂದ ಇಸ್ಲಾಂ ಬಾಂಗ್ಲಾದೇಶದ ಅಧಿಕೃತ ಧರ್ಮವಾಗಿದೆ. ಆದರೆ ಇಸ್ಲಾಂ ಅನ್ನು ಅಧಿಕೃತ ಧರ್ಮ ಎಂದು ಘೋಷಿಸುವುದು ಕಾನೂನು ಬಾಹಿರ ಎಂಬುದು ಅಲ್ಪಸಂಖ್ಯಾತ ಸಮುದಾಯ ನಾಯಕರ ವಾದವಾಗಿದೆ.
ಇತ್ತೀಚೆಗೆ ಬಾಂಗ್ಲಾದೇಶದ ಪಂಚ್ ಗಢ್ ಎಂಬಲ್ಲಿ ಹಿಂದೂ ದೇವಾಲಯದ ಅರ್ಚಕರನ್ನು ಹತ್ಯೆಗೈಯಲಾಗಿತ್ತು. ಘಟನೆಯಲ್ಲಿ ಇಬ್ಬರು ಹಿಂದೂಗಳು ಗಾಯಗೊಂಡಿದ್ದರು. ಅಲ್ಪಸಂಖ್ಯಾತ ಸಮುದಾಯದ ಬ್ಲಾಗರ್ ಗಳ ಕೊಲೆಯಾಗಿದೆ. ದೇಶದಲ್ಲಿ ನಡೆದಿರುವ 7 ದಾಳಿಗಳ ಹಿಂದೆ ಜಮಾತುಲ್ ಬಾಂಗ್ಲಾದೇಶ್ ಮತ್ತು ಅನ್ಸಾರುಲ್ಲಾ ಬಾಂಗ್ಲಾ ತಂಡದ ಕೃತ್ಯ ಎಂದೇ ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಬಾಂಗ್ಲಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಖಡ 90ರಷ್ಟು ಮುಸ್ಲಿಂರು, ಶೇಖಕ 8ರಷ್ಟು ಹಿಂದೂಗಳು ಹಾಗೂ ಶೇಖಡ 2ರಷ್ಟು ಇನ್ನುಳಿದ ಧರ್ಮದವರಿದ್ದಾರೆ.