

ಲಂಡನ್: ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿ ಇತರೆ ದೇಶಗಳ ಮಾಹಿತಿಗಳ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಇಸಿಸ್, ಇದೀಗ ತಮ್ಮ ಸಂಘಟನೆಗೇ ಸೇರಿದ ಮಹತ್ತರ ದಾಖಲೆಗಳನ್ನು ಕಳೆದುಕೊಂಡಿದ್ದು, ಇಸಿಸ್ ಗೆ ಸೇರಿo 22 ಸಾವಿರ ಸದಸ್ಯರ ಮಾಹಿತಿ ಸೋರಿಕೆಯಾಗಿರುವುದಾಗಿ ತಿಳಿದುಬಂದಿದೆ.
ಇಸಿಸ್ ಉಗ್ರ ಸಂಘಟನೆಗೆ ಸೇರಿದ 22000 ಸದಸ್ಯರ ಮಾಹಿತಿ ಸೋರಿಕೆಯಾಗಿರುವುದಾಗಿ ತಿಳಿದುಬಂದಿದ್ದು, ಇದೀಗ ಸೋರಿಕೆಯಾಗಿರುವ ಮಾಹಿತಿಯು ಅಧಿಕೃತವಾದ ಮಾಹಿತಿಗಳು ಎಂದು ಹೇಳಲಾಗುತ್ತಿದೆ.
ಸೋರಿಕೆಯಾಗಿರುವ ಮಾಹಿತಿಯಲ್ಲಿ ಇಸಿಸ್ ಗೆ ಸೇರಿದ 22000 ಸದಸ್ಯರ ಮಾಹಿತಿ ಇದ್ದು, ಇದರಲ್ಲಿ ಉಗ್ರರ ಹೆಸರು, ರಾಷ್ಟ್ರೀಯತೆ, ವಿಳಾಸ, ಪೋನ್ ನಂಬರ್ ಮತ್ತು ಕುಟುಂಬದ ವಿವರಗಳೂ ಬಹಿರಂಗಗೊಂಡಿರುವ ದಾಖಲೆಗಳು ಲಭ್ಯವಾಗಿವೆ. ಇದರಂತೆ ಇಸಿಸ್ ಸಂಘಟನೆಗೂ ಸೇರುವ ಮುನ್ನ ಸದಸ್ಯರಿಗೆ ಕೇಳಲಾಗುವ 23 ಪ್ರಶ್ನೆಗಳಿಗೆ ಸದಸ್ಯರು ಉತ್ತರಿಸಿರುವ ಮಾಹಿತಿಗಳು ಕೂಡ ಲಭ್ಯವಾಗಿವೆ.
ಇಸಿಸ್ ಸಂಘಟನೆಯ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥನ ಕಂಪ್ಯೂಟರ್ ನಿಂದ ವ್ಯಕ್ತಿಯೊಬ್ಬ ಮಾಹಿತಿಯನ್ನು ಕದ್ದು ಇಂಗ್ಲೆಂಡ್ ನ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ್ದಾನೆ. ವ್ಯಕ್ತಿ ಪೆನ್ ಡ್ರೈವ್ ಮೂಲಕ ಮಾಹಿತಿಯನ್ನು ಸುದ್ದಿ ಸಂಸ್ಥೆಗೆ ನೀಡಿದ್ದು, 50 ದೇಶಗಳ ಸದಸ್ಯರ ಮಾಹಿತಿ ಇದರಲ್ಲಿ ಇದೆ ಎನ್ನಲಾಗಿದೆ. ಇಸಿಸ್ ವಿರುದ್ಧ ಹೋರಾಟದಲ್ಲಿ ಈ ಮಾಹಿತಿ ಮಹತ್ವ ಪಡೆದುಕೊಳ್ಳಲಿದೆ.