

ದುಬೈ: ಯುಎಇಯ ಶಾರ್ಜಾ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಕಾರೊಂದರಲ್ಲಿ ಮೂವರು ಭಾರತೀಯ ವಿದ್ಯಾರ್ಥಗಳು ಶಾರ್ಜಾ ಸಿಟಿಯ ಅಲ್ ದಹೈದ್-ಅಲ್ ಮ್ಯಾಡಮ್ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಭಾರತೀಯ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮೃತಪಟ್ಟ ಮೂವರು ಭಾರತೀಯ ವಿದ್ಯಾರ್ಥಿಗಳು ಕೇರಳ ಮೂಲದವರು ಎಂದು ಹೇಳಲಾಗುತ್ತಿದ್ದು, ಅಶ್ಮಿದ್ ಅಶ್ರಫ್, ಮೊಹಮ್ಮದ್ ಶಿಫಾಮ್ ಮತ್ತು ಮೊಹಮ್ಮದ್ ಶೌನೌಬ್ ಎಂದು ಗುರ್ತಿಸಲಾಗಿದೆ.
ವಿದ್ಯಾರ್ಥಿಗಳ ಕಾರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಕುರಿತಂತೆ ಮಾತನಾಡಿರುವ ಅಧಿಕಾರಿಗಳು, ವಿದ್ಯಾರ್ಥಿಗಳು ನಿಷೇಧಿತ ರಸ್ತೆಯಲ್ಲಿ ಕಾರು ಓಡಿಸುತ್ತಿದ್ದರು. ಈ ವೇಳೆ ಮತ್ತೊಂದು ಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಶ್ರಫ್, ಶೌನೌಬ್ ಹಾಗೂ ಶಿಫಾಮ್ ಮೂಲತಃ ಕೋಝಿಕೋಡ್ ಹಾಗೂ ಕನ್ನೂರ್ ನವರಾಗಿದ್ದು, ಮಿಡ್ಲ್ ಸೆಕ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.