

ದುಬೈ: ಫ್ಲೈ ದುಬೈ ವಿಮಾನ ದುರಂತದಲ್ಲಿ ಮಡಿದವರಿಗಾಗಿ ಫ್ಲೈ ದುಬೈ ವಿಮಾನ ಸಂಸ್ಥೆ 20 ಸಾವಿರ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ.
ಇಬ್ಬರು ಭಾರತೀಯರು ಸೇರಿ 62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನ ರಷ್ಯಾದ ದಕ್ಷಿಣ ಭಾಗದಲ್ಲಿರುವ ರಾಸ್ಟೋವ್-ಆನ್-ಡಾನ್ ಪ್ರದೇಶದಲ್ಲಿ ಲ್ಯಾಂಡಿಗ್ ವೇಳೆ ಪತನವಾಗಿತ್ತು. ವಿಮಾನ ಪತನದಲ್ಲಿ ಮಡಿದ ಕುಟುಂಬಗಳನ್ನು ಸಂಪರ್ಕಿಸಿ ಅವರ ಕುಟುಂಬಕ್ಕೆ ಹಣದ ಸಹಾಯ ಮಾಡುವುದಾಗಿ ಸಂಸ್ಥೆ ಹೇಳಿದೆ.
ಫ್ಲೈ ದುಬೈ ವಿಮಾನ ಸಂಸ್ಥೆ ಪರಿಹಾರ ನೀಡುವ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಿ ಮೃತ ಕುಟುಂಬಕ್ಕೆ 20 ಸಾವಿರ ಡಾಲರ್ ಚೆಕ್ ನೀಡುವುದಾಗಿ ಹೇಳಿದೆ.
ಮಾಸ್ಕೋ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ 3.30ರ ಸುಮಾರಿಗೆ ಎರಡನೇ ಸಹ ಲ್ಯಾಂಡಿಂಗ್ ಮಾಡುವ ವೇಳೆ ರನ್ ವೇ ಸಿಗದೆ ನೆಲಕ್ಕೆ ಅಪ್ಪಳಿಸಿತ್ತು. ನೆಲಕ್ಕಪ್ಪಳಿಸಿದ ರಭಸಕ್ಕೆ ವಿಮಾನ ತುಂಡು ತುಂಡಾಗಿದ್ದವು. ಇನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿ ವಿಮಾನ ಸಿಬ್ಬಂದಿ ಸೇರಿ 55 ಪ್ರಯಾಣಿಕರು ಮೃತಪಟ್ಟಿದ್ದರು.
ಮೃತರ ಪೈಕಿ 44 ಮಂದಿ ರಷ್ಯಾದವರಾಗಿದ್ದು, 8 ಮಂದಿ ಉಕ್ರೇನ್, ಇಬ್ಬರು ಭಾರತೀಯರು ಹಾಗೂ ಓರ್ವ ಉಜ್ಬೇಕಿಸ್ತಾನದವರು ಮೃತಪಟ್ಟಿದ್ದಾರೆ.