

ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಉತ್ಸಾಹ ತೋರಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ನಲ್ಲಿರುವ ಇರಾನ್ ರಾಯಭಾರಿ ಸಿಪಿಇಸಿ ಯೋಜನೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರೊಂದಿಗಿನ ಇತ್ತೀಚಿನ ಭೇಟಿ ವೇಳೆ ಬೃಹತ್ ಯೋಜನೆಯಾಗಿರುವ ಸಿಪಿಇಸಿಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದ್ದು, ಸಿಪಿಇಸಿ ನಲ್ಲಿ ತನ್ನ ಸಹಭಾಗಿತ್ವದ ಬಗ್ಗೆ ಇರಾನ್ ಪಾಕ್ ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ.
ತಾಂತ್ರಿಕ, ಇಂಜಿನಿಯರಿಂಗ್ ಇಂಧನ ಶಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇರಾನ್ ನ ಖಾಸಗಿ ವಲಯಗಳು ಅದ್ಭುತ ಸಾಮರ್ಥ್ಯ ಹೊಂದಿದ್ದು, ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧವಿದೆ ಎಂದು ಇರಾನ್ ನ ರಾಯಭಾರಿ ಪಾಕ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನೈಸರ್ಗಿಕ ಅನಿಲ, ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕೆ ಅಗತ್ಯವಿರುವ ಇಂಧನ ಶಕ್ತಿಯನ್ನು ಇರಾನ್ ಪೂರೈಕೆ ಮಾಡಲಿದ್ದು ಇದರಿಂದಾಗಿ ಸಿಪಿಇಸಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬಹುದು ಎಂದು ಇರಾನ್ ರಾಯಭಾರಿ ತಿಳಿಸಿದ್ದಾರೆ. ಇರಾನ್ ಬೆಂಬಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಪಿಇಸಿ ಯೋಜನೆ ನಿರ್ದೇಶಕ ಸಿಪಿಇಸಿಯನ್ನು ಇರಾನ್ ವರೆಗೂ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.