ಭೂಗತ ಪಾತಕಿ ದಾವೂದ್ ಗೆ ಸೇರಿದ 15 ಸಾವಿರ ಕೋಟಿ ಆಸ್ತಿ ಜಪ್ತಿ!

ಮೋಸ್ಚ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಸುಮಾರು 15 ಸಾವಿರಕ್ಕೂ ಅಧಿಕ ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಅಬುಧಾಬಿ: ಮೋಸ್ಚ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಸುಮಾರು 15 ಸಾವಿರ ಕೋಟಿಗೂ ಅಧಿಕ  ಮೌಲ್ಯದ ಆಸ್ತಿಯನ್ನು ಯುಎಇ ಸರ್ಕಾರ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಹಿಂದೆ ದಾವೂದ್ ಇಬ್ರಾಹಿಂ ನ ಆಸ್ತಿ ಕುರಿತಂತೆ ತನಿಖೆ ಮಾಡಿದ್ದ ಯುಎಇ ಸರ್ಕಾರ ಇದೀಗ ಆತನ ಸುಮಾರು 15 ಸಾವಿರ ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಜಪ್ತಿಗೊಳಿಸಿದೆ  ಎಂದು ಹೇಳಲಾಗುತ್ತಿದೆ. ದಾವೂದ್ ಸೇರಿದ ಕಂಪನಿಗಳು, ವಿವಿಧ ಸಂಸ್ಥೆಗಳಲ್ಲಿದ್ದ ದಾವೂದ್ ಷೇರುಗಳು ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿದ್ದ ದಾವೂದ್ ನ ಖಾತೆಗಳನ್ನು ಯುಎಇ ಸರ್ಕಾರ ಜಪ್ತಿ ಮಾಡಿದೆ ಎಂದು  ಹೇಳಲಾಗುತ್ತಿದೆ.

ಇದಲ್ಲದೆ ದಾವೂದ್ ತನ್ನ ಸಂಬಂಧಿಕರ ಹೆಸರಿನಲ್ಲೂ ಸಾವಿರಾರು ಕೋಟಿ ಬೇನಾಮಿ ಆಸ್ತಿ ಹೊಂದಿದ್ದು, ಇದರ ಮೇಲೂ ಯುಎಇ ಸರ್ಕಾರ ನಿಗಾವಹಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ದಾವೂದ್ ಬಂಟರು ನಡೆಸುತ್ತಿದ್ದ  ಹಾವಾಲಾ ಜಾಲದ ಮೇಲೆ ಯುಎಇ ಪೊಲೀಸರು ಕಣ್ಣಿಟ್ಟಿದ್ದು, ಹಾವಾಲಾ ಜಾಲವನ್ನು ದಾವೂದ್ ಸಹೋದರ ಅನೀಸ್ ಇಬ್ರಾಹಿಂ ನೋಡಿಕೊಳ್ಳುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಅನೀಸ್ ಮತ್ತು ದಾವೂದ್ ನಿರಂತರ  ಸಂಪರ್ಕದಲ್ಲಿದ್ದು, ದಾವೂದ್ ಸೂಚನೆಯಂತೆ ಯುಎಇನಲ್ಲಿ ಗೋಲ್ಡನ್ ಬಾಕ್ಸ್ ಎಂಬ ಸಮೂಹ ಸಂಸ್ಥೆಯನ್ನು ಅನೀಸ್ ಇಬ್ರಾಹಿಂ ನಿರ್ವಹಿಸುತ್ತಿದ್ದಾನೆ.

ಇದಲ್ಲದೇ ದಾವೂದ್ ಮೊರಾಕ್ಕೋ, ಸ್ಪೇನ್, ಸಿಂಗಾಪುರ, ಥಾಯ್ಲೆಂಡ್, ಸೈಪ್ರಸ್, ಟರ್ಕಿ ಹಾಗೂ ಬ್ರಿಟನ್ ನಲ್ಲೂ ಆಸ್ತಿ ಹೊಂದಿರುವ ಕುರಿತು ಮಾಹಿತಿ ಕಲೆಹಾಕಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ  ಕಲೆಹಾಕಿದ್ದು, ಆಯಾ ದೇಶಗಳ ಸರ್ಕಾರಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡುತ್ತಿವೆ.

ಮೋದಿ ತಂತ್ರಕ್ಕೆ ಮಣಿಯಿದೇ ಯುಎಇ?
ಇನ್ನು ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ ಯುಎಇ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಭಯೋತ್ಪಾದನೆ ನಿರ್ಮೂಲನೆ ಹಾಗೂ ವಿವಿಧ ವಿಚಾರಗಳ ಕುರಿತಂತೆ ಯುಎಇ ಸರ್ಕಾರದೊಂದಿಗೆ ಚರ್ಚೆ ನಡೆಸಿದ್ದರು.  ಮೂಲಗಳಗಳ ಪ್ರಕಾರ ಯುಎಇ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚರ್ಚೆ ವೇಳೆ ದಾವೂದ್ ಇಬ್ರಾಹಿಂನ ಆರ್ಥಿಕ ಜಾಲವನ್ನು ನಾಶಪಡಿಸುವ ಕುರಿತೂ ಚರ್ಚೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಭಾರತದ  ಒತ್ತಡಕ್ಕೆ ಮಣಿದ ಯುಎಇ ಸರ್ಕಾರ ದಾವೂದ್ ನ ಆಸ್ತಿಗಳನ್ನು ಜಪ್ತಿ ಮಾಡಿದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸಕ್ಕೂ ಮುನ್ನ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು, ದಾವೂದ್ ಇಬ್ರಾಹಿಂನನ್ನು ಹೆಡೆಮುರಿ ಕಟ್ಟಿ ಭಾರತಕ್ಕೆ ಕರೆತರುವುದಕ್ಕೆ ಕೇಂದ್ರ  ಸರ್ಕಾರ ಎಲ್ಲ ಪ್ರಯತ್ನ ಮುಂದುವರಿಸಿದೆ ಎಂದು ಹೇಳಿದ್ದರು.

ಚಿತ್ರತಂಡಕ್ಕೆ ಧಮ್ಕಿ ಹಾಕಿದ್ದ ಡಿ-ಗ್ಯಾಂಗ್
ಇನ್ನು ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಅಮೆರಿಕ ಖಚಿತಪಡಿಸಿತ್ತು. ಇತ್ತೀಚೆಗಷ್ಟೇ ನಿರ್ದೇಶಕ ವಿಶಾಲ್ ಮಿಶ್ರಾ ಹಾಗೂ ನಿರ್ಮಾಪಕ ವಿನೋದ್ ರಮಣಿ ಅವರು ಡಿ-ಕಂಪನಿ  ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ಹೊಸ ಸಿನಿಮಾ 'ಕಾಫಿ ವಿಥ್ ಡಿ'ಯಲ್ಲಿ ದಾವೂದ್ ಬಗ್ಗೆ ಇರುವ ತಮಾಷೆ ದೃಶ್ಯವೊಂದನ್ನು ತೆಗೆದುಹಾಕುವಂತೆ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.  ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ಆ ದೃಶ್ಯಗಳನ್ನು ತೆಗೆಯುವಂತೆ ಸಿನಿಮಾ ತಂಡಕ್ಕೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com