

ಬೀಜಿಂಗ್: ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕನಿಷ್ಠ 140 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿನ್ ಮೋ ಗ್ರಾಮದ ಗುಡ್ಡ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 45ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಅಂತೆಯೇ ಅದರೊಳಗಿದ್ದ ಸುಮಾರು 140ಕ್ಕೂ ಅಧಿಕ ಮಂದಿ ಮಣ್ಣಿನ ಅವಶೇಷಗಳಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಟಿಬೇಟಿಯನ್ ಪ್ರಾಂತ್ಯದ ಗುಡ್ಡ ಕುಸಿತ ಪರಿಣಾಮ ಕ್ಸಿನ್ ಮೋ ಗ್ರಾಮದ ಸುಮಾರು 45ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಬರೊಬ್ಬರಿ 2 ಕಿ.ಮೀ ವರೆಗೂ ಅವಶೇಷಗಳು ಬಿದ್ದಿದ್ದು, ಅವಶೇಷಗಳಡಿಯಲ್ಲಿ 150ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಳೆದೊಂದು ವಾರದಿಂದ ಕ್ಸಿನ್ ಮೋ ಗ್ರಾಮದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಇದರಿಂದ ಇಲ್ಲಿನ ಭೂಮಿ ಸಡಿಲವಾಗಿತ್ತು. ಇದೇ ಕಾರಣಕ್ಕೆ ಭೂ ಕುಸಿದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಈ ಪ್ರಾಂತ್ಯದಲ್ಲಿ ಸಾಕಷ್ಟು ಮರಗಿಡಗಳು ಇಲ್ಲದಿರುವುದೂ ಕೂಡ ಭೂಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ವಿಚಾರ ತಿಳಿಯುತ್ತಿದ್ದಂತೆಯೇ ಚೀನಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 2 ಕಿ.ಮೀ ವರಗೂ ಮಣ್ಣಿನ ರಾಶಿ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸುಮಾರು 500ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಯಾಚರಣೆಗೆ ಬುಲ್ಜೋಜರ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.