ಪ್ಯಾರಿಸ್: ಲಂಡನ್ ದಾಳಿಯ ಮೂರೂ ದಿನಗಳ ನಂತರ, ಉತ್ತರ ಫ್ರಾನ್ಸ್ ನ ಲಿಲ್ಲಿ ನಗರದ ಮೆಟ್ರೋ ರೈಲು ನಿಲ್ದಾಣದ ಹೊರಗೆ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರಿಗೆ ಗಾಯಗಳಾಗಿವೆ.
ಶುಕ್ರವಾರ ರಾತ್ರಿ ಸುಮಾರು ೯:೪೫ ಕ್ಕೆ (ಪ್ರಾದೇಶಿಕ ಸಮಯ) ಪೋರ್ಟ್ ಡಿಅರಾಸ್ ಮೆಟ್ರೋ ನಿಲ್ದಾಣದ ಬಳಿ ಸ್ಥಳಕ್ಕೆ ಧಾವಿಸಿದ ಶಸ್ತ್ರಾಸ್ತ್ರ ಸಜ್ಜಿತ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರೆದಿದ್ದಾರೆ.
ಮೆಟ್ರೋ ನಿಲ್ದಾಣದಿಂದ ಕೆಲವೇ ಮೀಟರ್ ಗಳಷ್ಟು ದೂರವಿರುವ ಜಾಕ್ವೆಸ್ ಫೆಬ್ವೈರ್ ಚೌಕದ ಬಳಿ ದಾಳಿಕೋರ ಗುಂಡಿನ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.
೧೪ ವರ್ಷದ ಬಾಲಕನೊಬ್ಬ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಬಾಲಕನಿಗೆ ಕಾಲಿಗೆ ಗುಂಡು ತಗಲಿ ಪೆಟ್ಟಾಗಿದೆ ಎಂದು ಪ್ರಾದೇಶಿಕ ಮಾಧ್ಯಮವೊಂದು ವರದಿ ಮಾಡಿದೆ. ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಾರಿಗೂ ಮಾರಣಾಂತಿಕ ಅಪಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಈ ಗುಂಡಿನ ದಾಳಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ದಾಳಿಕೋರ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ೧೨ ತಿಂಗಳುಗಳಿಂದ ಫ್ರಾನ್ಸ್ ನಲ್ಲಿ ಸಾಕಷ್ಟು ದಾಳಿಗಳಾಗಿರುವುದನ್ನು ನಾವಿಲ್ಲಿ ನೆನೆಯಬಹುದು.