ಇಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿ ಅಭ್ಯರ್ಥಿ ಹಾಗೂ ಸಂಸದೀಯ ನಾಯಕ ಎಂದು ಸೋಮವಾರ ಪಿಟಿಐ ಅಧಿಕೃತವಾಗಿ ಘೋಷಿಸಿದೆ.
ಇಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಪಿಟಿಐ ಉಪಾಧ್ಯಕ್ಷ ಶಾಹ್ ಮೆಹಮೂದ್ ಖುರೇಶ್ ಅವರು ಇಮ್ರಾನ್ ಖಾನ್ ಪ್ರಧಾನಿ ಅಭ್ಯರ್ಥಿ ಎಂದು ನಿರ್ಣಯ ಮಂಡಿಸಿದರು. ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲಾಯಿತು ಎಂದು ಜೀಯೋ ನ್ಯೂಸ್ ವರದಿ ಮಾಡಿದೆ.
ಅಧಿಕೃತವಾಗಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಇಮ್ರಾನ್ ಖಾನ್, ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ನಾವು ಅದರಿಂದ ಹೊರಬರುವ ಅಗತ್ಯ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.