

ಬೀಜಿಂಗ್: ಜಗತ್ತಿನಲ್ಲಿ ಈಗ ಬಹು ಚರ್ಚಿತವಾಗುವ ವಿಷಯ ಕೊರೊನಾ ವೈರಸ್ ಸೋಂಕು. ಇದು ಮೊದಲು ಕಾಣಿಸಿಕೊಂಡಿರುವುದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಚೀನಾ ದೇಶದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 425ಕ್ಕೇರಿದೆ. ಅಲ್ಲಿ ಇದುವರೆಗೆ ಒಟ್ಟು 20 ಸಾವಿರದ 438 ಮಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳು ಸಾಕಾಗದೆ ಕಳೆದ 10 ದಿನಗಳಲ್ಲಿ ಚೀನಾ ಸರ್ಕಾರ ಹೊಸ ಸಾವಿರ ಬೆಡ್ ಗಳಿರುವ ಮತ್ತು ಒಂದೂವರೆ ಸಾವಿರ ಬೆಡ್ ಗಳಿರುವ ವಿಶೇಷ ಆಸ್ಪತ್ರೆಗಳನ್ನು ತೆರೆದಿದ್ದು ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ವೈರಸ್ ನಿಂದ ಚೀನಾದ ಹಣಕಾಸು ವಲಯ ತೀವ್ರ ಕುಸಿದಿದೆ. ವೈರಸ್ ಇನ್ನಷ್ಟು ಹರಡದಂತೆ ತಡೆಗಟ್ಟಲು ಜನರ ಓಡಾಟ ಮತ್ತು ಚೀನಾ ದೇಶಕ್ಕೆ ಪ್ರಯಾಣವನ್ನು ನಿರ್ಬಂಧಿಸಿರುವುದರಿಂದ ಚೀನಾಕ್ಕೆ ಇದರಿಂದ ಹಲವು ಕ್ಷೇತ್ರಗಳಲ್ಲಿ ಹೊಡೆತ ಬಿದ್ದಿದೆ. ಚೀನಾದಲ್ಲಿ ಇನ್ನೂ ಸಾವಿರಾರು ಜನರ ವೈದ್ಯಕೀಯ ತಪಾಸಣೆ ಮಾಡಿ ವರದಿ ಹೊರಬರಲು ಬಾಕಿ ಇರುವುದರಿಂದ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವ ವ್ಯಾಪಾರ ಸಂಘಟನೆ ತಿಳಿಸಿದೆ.
ಈ ಸೋಂಕಿನ ವಿರುದ್ಧ ಜನರ ಹೋರಾಟವನ್ನು ನಾವು ಆರಂಭಿಸಿದ್ದೇವೆ. ವೈರಸ್ ನ್ನು ತಡೆಗಟ್ಟಲು ದೇಶದ ಪಾಲಿಟ್ ಬ್ಯೂರೋ ಸ್ಥಾಯಿ ಸಮಿತಿ ತಡೆಗಟ್ಟಲು ಪ್ರಯತ್ನಿಸಬೇಕಾಗಿದ್ದು ಯಾರು ತಮ್ಮ ಕರ್ತವ್ಯವನ್ನು ನಿಭಾಯಿಸಲು ವಿಫಲರಾದರೆ ಅವರನ್ನು ಶಿಕ್ಷಿಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.