

ಲಂಡನ್: ಒಂದು ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಕೊರೋನಾ ಸೋಂಕಿನ ಅಪಾಯದಿಂದ ಶೇ.50ರಷ್ಟು ದೂರವಿರಬಹುದು ಎಂದು ವರದಿ ಹೇಳಿದೆ.
ಈ ಕುರಿತಂತೆ ಬ್ರಿಟನ್ ಮೂಲದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ) ಸಂಶೋಧನೆ ನಡೆಸಿ ಈ ವರದಿಯನ್ನು ಪ್ರಕಟಿಸಿದ್ದು, ಬ್ರಿಟನ್ ನಲ್ಲಿ ನೀಡಲಾಗುತ್ತಿರುವ ಫಿಜರ್ ಅಥವಾ ಅಸ್ಟ್ರಾಜೆನೆಕಾ ಲಸಿಕೆಗಳ ಒಂದು ಡೋಸ್ ಕೊರೋನವೈರಸ್ ಲಸಿಕೆಯಿಂದಾಗಿ ಶೇ.50ರಷ್ಟು ಸೋಂಕಿನಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿದೆ. ಒಂದು ಕುಟುಂಬದಲ್ಲಿ ಓರ್ವರಿಗೆ ಸೋಂಕು ತಗುಲಿದರೆ ಅವರಿಂದ ಇಡೀ ಕುಟುಂಬದವರಿಗೆ ಸೋಂಕು ತಗುಲುವ ಅಪಾಯವಿರುತ್ತದೆ. ಆದರೆ ಆ ಕುಟುಂಬದಲ್ಲಿನ ವ್ಯಕ್ತಿಯೊಬ್ಬರು ಒಂದು ಡೋಸ್ ಕೋವಿಡ್ ಲಸಿಕೆ ಪಡೆದರೆ ಸೋಂಕಿನಿಂದ ಶೇ.38ರಿಂದ ಶೇ.49ರಷ್ಟು ರಕ್ಷಣೆ ಪಡೆದಂತೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿರುವಂತೆ ಲಸಿಕೆ ಪಡೆದ ವ್ಯಕ್ತಿ ಶೇ.38ರಿಂದ ಶೇ.49ರಷ್ಟು ಸೋಂಕಿನಿಂದ ರಕ್ಷಣೆ ಪಡೆಯುತ್ತಾರೆ. ಹೀಗಾಗಿ ಕೋವಿಡ್ ಸಾಂಕ್ರಾಮಿಕದಿಂದ ಲಸಿಕೆ ರಕ್ಷಣೆ ನೀಡುತ್ತದೆ ಎಂಬುದು ಮತ್ತೆ ಸಾಬೀತಾಗಿದೆ ಎಂದು ಹೇಳಲಾಗಿದೆ.
'ಕೋವಿಡ್ ಸೋಂಕಿನಿಂದ ಲಸಿಕೆಗಳು ರಕ್ಷಣೆ ನೀಡುತ್ತವೆ ಎಂಬುದು ನಮಗೆ ಈಗಾಗಲೇ ತಿಳಿದಿದೆ. ಈ ಅಧ್ಯಯನವು ಈ ಮಾರಣಾಂತಿಕ ವೈರಸ್ ಹರಡುವುದನ್ನು ಲಸಿಕೆಗಳು ಹೇಗೆ ಕಡಿತಗೊಳಿಸುತ್ತದೆ ಎಂದು ತೋರಿಸುವ ಅತ್ಯಂತ ವಿಸ್ತಾರವಾದ ನೈಜ-ಪ್ರಪಂಚದ ದತ್ತಾಂಶವಾಗಿದೆ" ಎಂದು ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದ್ದಾರೆ. "ಲಸಿಕೆಗಳು ಈ ಸಾಂಕ್ರಾಮಿಕದಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಇದಕ್ಕೆ ಈ ಅಧ್ಯಯನ ಮತ್ತಷ್ಟು ಬಲಪಡಿಸುತ್ತದೆ. ಅಂತೆಯೇ ನಿಮ್ಮ ಮನೆಯ ಮತ್ತೊಬ್ಬರಿಗೆ ನೀವು ಸೋಂಕು ತಗುಲುವುದನ್ನು ಲಸಿಕೆಯ ಮೂಲಕ ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಈ ಅಧ್ಯಯನಕ್ಕಾಗಿ ಬ್ರಿಟನ್ ಸುಮಾರು 24,000 ಮನೆಗಳಲ್ಲಿನ 57,000 ಕ್ಕೂ ಹೆಚ್ಚು ಮಂದಿಯಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಇದರಲ್ಲಿ ವ್ಯಾಕ್ಸಿನೇಷನ್ ಪಡೆದ ಲ್ಯಾಬ್-ದೃಢಪಡಿಸಿದ ಪ್ರಕರಣಗಳಿವೆ. ಅಂತೆಯೇ ಸುಮಾರು ಒಂದು ಮಿಲಿಯನ್ ಲಸಿಕೆ ಪಡೆಯದ ವ್ಯಕ್ತಿಗಳಿಂದಲೂ ದತ್ತಾಂಶ ಸಂಗ್ರಹ ಮಾಡಲಾಗಿದ್ದು, ಲಸಿಕೆ ಪಡೆದವಿರಿಗಿಂತ ಲಸಿಕೆ ಪಡೆಯದ ಕುಟುಂಬಗಳಲ್ಲಿ ಸೋಂಕು ಪ್ರಸರಣ ಪ್ರಮಾಣ ಶೇ. 65ರಷ್ಟು ಹೆಚ್ಚಿದೆ.
ವ್ಯಾಕ್ಸಿನ್ ಕೇವಲ ಸೋಂಕು ಪ್ರಸರಣವನ್ನು ಮಾತ್ರವಲ್ಲದೇ ಸಾಕಷ್ಟು ಅನಾರೋಗ್ಯಗಳನ್ನು ತಪ್ಪಿಸಿ ಸಂಭಾವ್ಯ ಸಾವುಗಳನ್ನು ತಪ್ಪಿಸುತ್ತದೆ ಎಂದು PHE ಯ ರೋಗನಿರೋಧಕ ವಿಭಾಗದ ಮುಖ್ಯಸ್ಥ ಮೇರಿ ರಾಮ್ಸೆ ಹೇಳಿದ್ದಾರೆ. ಈ ಹಿಂದೆ ಇದೇ PHE ಸಂಸ್ಥೆ ನಡೆಸಿದ್ದ ಸಂಶೋಧನೆಯಲ್ಲಿ ಲಸಿಕೆ ವಿತರಣೆಯಿಂದ ಬ್ರಿಟನ್ ನಲ್ಲಿ ಆಗಬಹುದಾಗಿದ್ದ 10,400 ಕೋವಿಡ್ ಸಂಬಂಧಿ ಸಾವುಗಳು ತಪ್ಪಿದೆ ಎಂದು ಹೇಳಿತ್ತು.
ಕೋವಿಡ್ ಸೋಂಕಿತ ವ್ಯಕ್ತಿ ಮನೆಯಲ್ಲಿದ್ದರೆ ಇಂತಹ ಪ್ರಕರಣಗಳಲ್ಲಿ ಕುಟುಂಬದ ಇತರೆ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕಿಸಿ ನಿರ್ದಿಷ್ಟ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡುವುದು ಒಳಿತು. ಇದರಿಂದ ಶೇ.30ರಷ್ಟು ಸೋಂಕು ಪ್ರಸರಣವನ್ನು ತಡೆದಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.