

ಕಾಬೂಲ್: ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬೂಲ್ ನಗರವನ್ನು ಪ್ರವೇಶಿಸಿರುವುದಾಗಿ ಅಫ್ಘಾನಿಸ್ತಾನ ಗೃಹಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಾಬೂಲಿನಿಂದ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದೆ.
ಅಫ್ಘಾನಿಸ್ತಾನ ಅಧ್ಯಕ್ಷರ ಆಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಪ್ರಕಟಗೊಂಡಿದ್ದು, ಅದರಲ್ಲಿ ನಗರದ ಹೊರವಲಯಗಳಲ್ಲಿ ಗುಂಡಿನ ಕಾಳಗದ ಸದ್ದು ಕೇಳಿಬರುತ್ತಿರುವುದಾಗಿ ಬರೆಯಲಾಗಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ಅಂತಾರಾಷ್ಟ್ರೀಯ ಮಿತ್ರಪಡೆಯ ಸೈನಿಕರು ತಾಲಿಬಾನಿಗಳ ವಿರುದ್ಧ ಹೋರಾಡಿ ರಾಜಧಾನಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಯಾರೂ ಎಣಿಸಿರದಂತೆ ತುಂಬಾ ವೇಗವಾಗಿ ತಾಲಿಬಾನ್ ದೇಶವನ್ನು ಆಕ್ರಮಿಸಿಕೊಳ್ಳಬಹುದು ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ತಾಲಿಬಾನ್ ಆಕ್ರಮಣಕಾರಿ ನಡೆಗೆ ಆತಂಕಗೊಂಡಿರುವ ಅಮೆರಿಕ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿ, ಅಧಿಕಾರಿ ವರ್ಗವನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನೆರವಾಗಲು ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೇನಾಪಡೆಗಳನ್ನು ಕಳುಹಿಸಿತ್ತು.
ಇನ್ನು 90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಕಳೆದ ವಾರವಷ್ಟೇ ಭವಿಷ್ಯ ನುಡಿದಿತ್ತು. ಇದೀಗ ತಾಲಿಬಾನ್ ಕಾಬೂಲಿನ ಬಾಗಿಲಲ್ಲಿ ಬಂದು ನಿಂತುಕೊಂಡಿದೆ. ಈ ಬಗ್ಗೆ ಅಧ್ಯಕ್ಷ ಘನಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.