

ಬ್ರಸೆಲ್ಸ್ (ಬೆಲ್ಜಿಯಂ): ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಯುವಕ ರಾತ್ರೋರಾತ್ರಿ ಒಂದು ದೇಶದ ರಾಜಕುಮಾರನಾದರೆ ಹೇಗಿರುತ್ತದೆ. ಇದು ಸಿನಿಮಾ ಕಥೆಯಲ್ಲ, ನಿಜ ಜೀವನದಲ್ಲಿ ನಡೆದಿರುವ ಸತ್ಯ ಘಟನೆ. ಹೌದು, ಬೆಲ್ಜಿಯಂ ದೇಶದಲ್ಲಿ 26 ವರ್ಷದ ಕ್ಲೆಮೆಂಟ್ ವಂಡೆನ್‌ಕೆರ್ಕ್‌ಹೋವ್ ಅವರ ಜೀವನದಲ್ಲಿ ನಡೆದಿರುವ ಈ ರೋಚಕ ತಿರುವು ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಯಾರು ಈ ಕ್ಲೆಮೆಂಟ್?
ಕ್ಲೆಮೆಂಟ್ ವಂಡೆನ್‌ಕೆರ್ಕ್‌ಹೋವ್ ಬೆಲ್ಜಿಯಂನಲ್ಲಿ ಒಬ್ಬ ಸಾಮಾನ್ಯ ಯುವಕನಾಗಿ ಬೆಳೆದರು. ಕಾರುಗಳನ್ನು ಮಾರಾಟ ಮಾಡುವ ಕಾರ್ ಸೇಲ್ಸ್‌ಮ್ಯಾನ್ ಆಗಿ ಮತ್ತು ಹೋಟೆಲ್‌ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು, ಇವರ ತಾಯಿ ವೆಂಡಿ ವ್ಯಾನ್ ವಾಂಟೆನ್ ಎಂಬ ಪ್ರಸಿದ್ಧ ಬೆಲ್ಜಿಯನ್ ಮಾಡೆಲ್ ಮತ್ತು ಗಾಯಕಿ. ಆದರೆ, ಈ ಕ್ಲೆಮೆಂಟ್ ಗೆ ತಂದೆ ಯಾರು ಎಂದೇ ಗೋತಿರಲಿಲ್ಲ! ಹೀಗೆ, ತನ್ನ ಬಾಲ್ಯವನ್ನು ಕಳೆದಿದ್ದರು. ಆದರೆ, ತಮ್ಮ 16ನೇ ವಯಸ್ಸಿನಲ್ಲಿ ತಾಯಿ ಮೂಲಕ ಕ್ಲೆಮೆಂಟ್‌ಗೆ ಒಂದು ರಹಸ್ಯ ಗೊತ್ತಾಯಿತು. ಅದುವೇ, ತಮ್ಮ ನಿಜವಾದ ತಂದೆ ಬೇರೆ ಯಾರೂ ಅಲ್ಲ, ಬೆಲ್ಜಿಯಂನ ಪ್ರಸ್ತುತ ರಾಜ ಫಿಲಿಪ್ ಅವರ ತಮ್ಮ ಪ್ರಿನ್ಸ್ ಲಾರೆಂಟ್ ಎಂದು.
ರಾಜಕುಮಾರನೊಂದಿಗಿನ ರಹಸ್ಯ ಸಂಬಂಧ!
ಹೌದು, ಬೆಲ್ಜಿಯಂ ದೇಶದ ಪ್ರಸ್ತುತ ರಾಜ ಫಿಲಿಪ್ ಅವರ ಕಿರಿಯ ಸಹೋದರನ ಹೆಸರು ಪ್ರಿನ್ಸ್ ಲಾರೆಂಟ್ ಅವರು 2003 ರಲ್ಲಿ ಮದುವೆಯಾಗುವ ಮುನ್ನ, ಕ್ಲೆಮೆಂಟ್ ಅವರ ತಾಯಿ ವೆಂಡಿ ವ್ಯಾನ್ ವಾಂಟೆನ್ ಅವರೊಂದಿಗೆ ಸುಮಾರು 7 ವರ್ಷಗಳ ಕಾಲ ಸುದೀರ್ಘ ಸಂಬಂಧ ಹೊಂದಿದ್ದರು. ಈ ಸಂಬಂಧದ ಫಲವಾಗಿ 2000ನೇ ಇಸವಿಯಲ್ಲಿ ಕ್ಲೆಮೆಂಟ್ ಜನಿಸಿದರು. ಆದರೆ, ರಾಜಮನೆತನದ ಕಾರಣಕ್ಕಾಗಿ ಈ ವಿಷಯವನ್ನು ಗೌಪ್ಯವಾಗಿಡಲಾಗಿತ್ತು. ಅದರಂತೆ, ಈ ರಹಸ್ಯದಿಂದ ಕ್ಲೆಮೆಂಟ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತಂಕವನ್ನು ಎದುರಿಸಿದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ಧೈರ್ಯ ಮಾಡಿ ತಂದೆಗೆ ಕರೆ ಮಾಡಿದರು.
99.5% ಮ್ಯಾಚ್ ಆದ ಡಿಎನ್‌ಎ ಟೆಸ್ಟ್
ಇಬ್ಬರ ನಡುವೆ ಸಮಾಲೋಚನೆ ನಡೆದು, ಸತ್ಯವನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಪ್ರಿನ್ಸ್ ಲಾರೆಂಟ್ ಅವರೇ ಕ್ಲೆಮೆಂಟ್ ಅವರ ನಿಜವಾದ ತಂದೆ ಎಂಬುದು 99.5% ರಷ್ಟು ನಿಖರವಾಗಿ ಸಾಬೀತಾಯಿತು. ಹೀಗೆ, ಡಿಎನ್‌ಎ ವರದಿ ಬಂದ ನಂತರ, ಪ್ರಿನ್ಸ್ ಲಾರೆಂಟ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು, ಕ್ಲೆಮೆಂಟ್ ನನ್ನದೇ ರಕ್ತ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರದೆ ಸಿಕ್ಕ ರಾಜಪದವಿ
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ರಾಜಮನೆತನದವರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹೌದು, ಕ್ಲೆಮೆಂಟ್ ಸೋದರತ್ತೆ ಡೆಲ್ಫಿನ್ 7 ವರ್ಷ ಕೋರ್ಟ್ ಹೋರಾಟ ಮಾಡಬೇಕಾಯಿತು. ಆದರೆ ಕ್ಲೆಮೆಂಟ್ ವಿಷಯದಲ್ಲಿ ತಂದೆ ಪ್ರಿನ್ಸ್ ಲಾರೆಂಟ್ ಅವರೇ ಸ್ವತಃ ಮುಂದೆ ಬಂದು ಮಗನನ್ನು ಒಪ್ಪಿಕೊಂಡರು. ಅದರಂತೆ, ಬೆಲ್ಜಿಯಂನ ಟೌನ್ ಹಾಲ್‌ನಲ್ಲಿ ನಡೆದ ಅಧಿಕೃತ ನಾಗರಿಕ ಸಮಾರಂಭದಲ್ಲಿ ರಾಜಕುಮಾರು ಲಾರೆಂಟ್ ಅವರು ಕ್ಲೆಮೆಂಟ್ ನನ್ನ ಮಗ ಮತ್ತು ವಾರಸುದಾರ ಎಂದು ಸಹಿ ಹಾಕಿದರು. ಇದರೊಂದಿಗೆ ಕ್ಲೆಮೆಂಟ್ ಅಧಿಕೃತವಾಗಿ ಬೆಲ್ಜಿಯಂನ ರಾಜಕುಮಾರನಾದರು.
ರಾಜಕುಮಾರನಾದರೂ ಸಿಗದ ಕೆಲವು ಹಕ್ಕುಗಳು
ಬೆಲ್ಜಿಯಂ ದೇಶದ ಕಾನೂನಿನ ಪ್ರಕಾರ ಮದುವೆಯ ಹೊರತಾಗಿ ಜನಿಸಿದ ಮಕ್ಕಳಿಗೆ ರಾಜಪದವಿ ಸಿಕ್ಕರೂ ಕೆಲವು ಮಿತಿಗಳಿರುತ್ತವೆ. ಅದರಂತೆ, ಇವರಿಗೆ ಸರ್ಕಾರದ ವತಿಯಿಂದ ಅಥವಾ ರಾಜಮನೆತನದಿಂದ ಯಾವುದೇ ಮಾಸಿಕ ರಾಜ ಧನ ಸಿಗುವುದಿಲ್ಲ. ಜೊತೆಗೆ, ಇವರು ಬೆಲ್ಜಿಯಂ ದೇಶದ ರಾಜನಾಗುವ ಸಾಲಿನಲ್ಲಿ ನಿಲ್ಲುವಂತಿಲ್ಲ. ಆದರೆ, ರಾಜಕುಮಾರ ಲಾರೆಂಟ್ ಅವರ ವೈಯಕ್ತಿಕ ಖಾಸಗಿ ಆಸ್ತಿಯಲ್ಲಿ ಕ್ಲೆಮೆಂಟ್‌ಗೆ ಅವರ ಉಳಿದ ಮೂರು ಮಕ್ಕಳಂತೆಯೇ ಸಮಾನವಾದ ಪಾಲು ಸಿಗುತ್ತದೆ.
ಮುಂದುವರೆದು, ರಾಜಕುಮಾರನಾದ ನಂತರ ಕ್ಲೆಮೆಂಟ್ ಅವರಿಗೆ ರಾಜಮನೆತನದ ಹೆಸರಾದ ಸ್ಯಾಕ್ಸ್-ಕೋಬರ್ಗ್ ಬಳಸುವ ಅವಕಾಶ ಸಿಕ್ಕಿದೆ. ಆದರೆ ಕ್ಲೆಮೆಂಟ್, "ನನಗೆ ಕಾಯ್ದೆ ಕಾನೂನುಗಳಿಗಿಂತ ತಂದೆಯ ಪ್ರೀತಿ ಮುಖ್ಯ. ನನ್ನನ್ನು ಕಷ್ಟಪಟ್ಟು ಬೆಳೆಸಿದ ತಾಯಿಯ 'ವಂಡೆನ್‌ಕೆರ್ಕ್‌ಹೋವ್' ಎಂಬ ಹೆಸರಿನ ಬಗ್ಗೆ ನನಗೆ ಹೆಮ್ಮೆಯಿದೆ, ನಾನು ಅದನ್ನೇ ಮುಂದುವರಿಸುತ್ತೇನೆ" ಎಂದು ಹೇಳುವ ಮೂಲಕ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ.