

ರಿಯೋ ಡಿ ಜನೈರೊ: ಬ್ರೆಜಿಲ್ ಪ್ರವಾಸೋಧ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, Bungee ಜಂಪಿಂಗ್ ದುರಂತ ನಡೆದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಹೌದು.. Bungee ಜಂಪಿಂಗ್ ವೇಳೆ ಸುರಕ್ಷತಾ ಹಗ್ಗ ಕಟ್ಟದ ಕಾರಣ 21 ವರ್ಷದ ಯುವತಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಬ್ರೆಜಿಲ್‌ನಲ್ಲಿ ಮತ್ತೊಬ್ಬ ಮಹಿಳೆ ದಾರುಣ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈಕಿಂಗ್ ವೇಳೆ 100 ಅಡಿ ಆಳಕ್ಕೆ ಬಿದ್ದು ಬ್ರೆಜಿಲ್ ಮಹಿಳೆ ಸಾವನ್ನಪ್ಪಿರುವುದು ಬ್ರೆಜಿಲ್ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಹೈಕಿಂಗ್ ವೇಳೆ 59 ವರ್ಷದ ರೋಸ್‌ಮೇರಿ ಸುಜಾರ್ಟ್ ಗಾರ್ಸಿಯಾ ಎಂಬ ಮಹಿಳೆ ಕಾಲು ಜಾರಿ ಗುಡ್ಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವರದಿಯಲ್ಲಿರುವಂತೆ ರೋಸ್‌ಮೇರಿ ಸುಜಾರ್ಟ್ ಗಾರ್ಸಿಯಾ ತಮ್ಮ ಕಾಲಿಗೆ ಕೀಟ ನಿವಾರಕ ಸ್ಪ್ರೇ ಹಚ್ಚುವ ವೇಳೆ ಕಾಲು ಜಾರಿ ಸುಮಾರು 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ಭಾನುವಾರ ರಿಯೋ ಡಿ ಜನೈರೊ ಸಮೀಪದ ಮರಿಕಾ ನಗರದ ಗ್ರುಟಾಸ್ ಡೊ ಸ್ಪಾರ್ ಪ್ರದೇಶದಲ್ಲಿ ನಡೆದಿದೆ ಎಂದು ಬ್ರೆಜಿಲಿಯನ್ ಮಾಧ್ಯಮ ಗ್ಲೋಬೋ ತಿಳಿಸಿದೆ.
ಹೈಕಿಂಗ್ ವೇಳೆ ದುರಂತ
ಗಾರ್ಸಿಯಾ ಅವರು ಸ್ನೇಹಿತರ ಗುಂಪಿನೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ವೇಳೆ ವೀಕ್ಷಣಾ ಸ್ಥಳದ ಸಮೀಪದ ಕಿರಿದಾದ ದಾರಿಯಲ್ಲಿ ನಿಂತು ಕೀಟ ನಿವಾರಕ ಸ್ಪ್ರೇ ಹಚ್ಚಲು ಮುಂದಾದರು. ಕಾಲಿಗೆ ಸ್ಪ್ರೇ ಹಚ್ಚುವ ಸಲುವಾಗಿ ಕಾಲನ್ನು ಮೇಲಕ್ಕೆ ಎತ್ತಿದಾಗ ಸಮತೋಲನ ಕಳೆದುಕೊಂಡು ಪ್ರಪಾತಕ್ಕೆ ಬಿದ್ದಿದ್ದಾರೆ.
ಪ್ರತ್ಯಕ್ಷದರ್ಶಿ ಜಿಯೋವಾನಿ ಮ್ಯಾಕ್ಸಿಮಿನೊ ಅವರ ಪ್ರಕಾರ, ಪ್ರವಾಸ ಮಾರ್ಗದರ್ಶಕ ಮಹಿಳೆಯನ್ನು ರಕ್ಷಿಸಲು ಅವರ ಕೈ ಹಿಡಿಯಲು ಪ್ರಯತ್ನಿಸಿದರೂ, ತಾನೂ ಸಹ ಕೆಳಗೆ ಬೀಳುವ ಸ್ಥಿತಿಗೆ ತಲುಪಿದ್ದರು. "ಮಾರ್ಗದರ್ಶಕ ಅವರು ಅವರನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದರು. ಅವರು ಸಹ ಬೀಳುವ ಹಂತಕ್ಕೆ ಬಂದಿದ್ದರು. ಮಹಿಳೆಯನ್ನು ರಕ್ಷಿಸಲು ಮುಂದಾಗಿ ಅವರೂ ಬಿದ್ದರು. ಆದರೆ ಕೊನೆಗೆ ಅಲ್ಲಿದ್ದ ಮರದ ಬೇರು ಒಂದನ್ನು ಹಿಡಿದುಕೊಂಡು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು" ಎಂದು ಅವರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಾರ್ಸಿಯಾ ಅವರು ಹೆಲ್ಮೆಟ್ ಹಾಗೂ ಕೈಗವಸು ಸೇರಿದಂತೆ ಸುರಕ್ಷತಾ ಸಾಧನಗಳನ್ನು ಧರಿಸಿದ್ದರು. ಆದರೂ ಸುಮಾರು 100 ಅಡಿ ಎತ್ತರದಿಂದ ಕ್ಷಣಾರ್ಧದಲ್ಲಿ ಕೆಳಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಂತೆಯೇ ಅಗ್ನಿಶಾಮಕ ಸಿಬ್ಬಂದಿ ಅದೇ ದಿನ ಸಂಜೆ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. "ಮೃತ ಮಹಿಳೆಯ ಮಕ್ಕಳು ರೆಕ್ರೆಯೊ ಡೊಸ್ ಬಂಡೈರಾಂಟೆಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಈ ದುಃಖದ ಸುದ್ದಿ ತಿಳಿಸಲು ಬೆಳಗಿನ ಸುಮಾರು ಎರಡು ಗಂಟೆಯವರೆಗೆ ಸಮಯ ಹಿಡಿಯಿತು. ಅಲ್ಲಿಯವರೆಗೆ ಕುಟುಂಬದ ಯಾರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗಿರಲಿಲ್ಲ," ಎಂದು ಮ್ಯಾಕ್ಸಿಮಿನೊ ಹೇಳಿದ್ದಾರೆ.
ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Bungee ಜಂಪಿಂಗ್ ದುರಂತ, 6 ಮಂದಿ ಬಂಧನ
ಅಂದಹಾಗೆ ಸಾವೊ ಪೌಲೊ ರಾಜ್ಯದ ಲಿಮೆರಾ ನಗರದ ಸ್ಕೆಲೆಟನ್ ಸೇತುವೆಯಲ್ಲಿ ನಡೆದ ಮತ್ತೊಂದು ದುರಂತದ ಕೇವಲ 24 ಗಂಟೆಗಳೊಳಗೆ ಈ ದುರಂತ ಸಂಭವಿಸಿದ್ದು, ಕಳೆದ ಶನಿವಾರ ನಡೆದ ರೋಪ್ ಜಂಪಿಂಗ್ ಕಾರ್ಯಕ್ರಮದಲ್ಲಿ 21 ವರ್ಷದ ಮರಿಯಾ ಎಡುವಾರ್ಡಾ ರೊಡ್ರಿಗ್ಸ್ ಡಿ ಫ್ರೈಟಾಸ್ ಅವರನ್ನು Bungee ಜಂಪಿಂಗ್ ವೇಳೆ ಸುಮಾರು 130 ಅಡಿ ಎತ್ತರದ ಸೇತುವೆಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ಕಾರ್ಯಕ್ರಮದ ಮೂವರು ಆಯೋಜಕರ ವಿರುದ್ಧ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ದೈಹಿಕ ಶಿಕ್ಷಣ ವಿಭಾಗದಲ್ಲಿ ಇತ್ತೀಚೆಗೆ ಪದವಿ ಪಡೆದಿದ್ದ ಫ್ರೈಟಾಸ್, ಜಿಗಿತಕ್ಕೆ ಕೆಲವೇ ನಿಮಿಷಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು, "ಸೇತುವೆಯಿಂದ ಜಿಗಿಯಲು ನನ್ನನ್ನು ಇಲ್ಲಿ ಬರಲು ಅನುಮತಿಸಿದ ಹುಚ್ಚು ಯಾರು?" ಎಂದು ಹಾಸ್ಯವಾಗಿ ಬರೆದುಕೊಂಡಿದ್ದರು.
Advertisement