

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಮುಂದಿನ ವಾರ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನ ಹೇಳಿದೆ.
ಬುಧವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಹೀರ್ ಅಂದ್ರಾಬಿ, ಉಭಯ ರಾಷ್ಟ್ರಗಳು ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಈ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದರು.
ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ತಿಳುವಳಿಕೆ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಕಳೆದ ವಾರ ಸಹಿ ಹಾಕಿದವು.
ಎರಡೂ ಕಡೆಯವರು ಈ ವಾರದ ಆರಂಭದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಮಧ್ಯವರ್ತಿಗಳಾದ ಪಾಕಿಸ್ತಾನ ಮತ್ತು ಕತಾರ್‌ಗಳ ಸಮ್ಮುಖದಲ್ಲಿ ಅಧಿಕೃತ ಮಟ್ಟದ ಮಾತುಕತೆಗಳನ್ನು ನಡೆಸಿದರು ಮತ್ತು ಆ ಚರ್ಚೆಗಳ ನಂತರ 60 ದಿನಗಳಲ್ಲಿ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುವ ಯೋಜನೆಯನ್ನು ಅವರು ಒಪ್ಪಿಕೊಂಡರು.
'ಮಾತುಕತೆ ಮುಂದುವರೆದಿದೆ. ಮುಂದಿನ ವಾರ, ಬಹುಶಃ ಮಂಗಳವಾರ ಮಾತುಕತೆ ಪುನರಾರಂಭವಾಗಲಿದೆ ಎಂದು ನಾನು ನಂಬುತ್ತೇನೆ. ಮೂಲತಃ, ಇದು ತಾತ್ಕಾಲಿಕ ಅಂತರವಾಗಿದ್ದು, ಅಷ್ಟೇನು ಹೆಚ್ಚಿನ ವಿರಾಮವಲ್ಲ. ಜೂನ್ 22ರ ಮಾತುಕತೆಗಾಗಿ ನಮ್ಮ ನಿಯೋಗ ಬರ್ಗೆನ್‌ಸ್ಟಾಕ್‌ನಲ್ಲಿತ್ತು. ಮುಂದಿನ ವಾರ ಮಾತುಕತೆ ಪುನರಾರಂಭವಾದಾಗ ನಮ್ಮ ನಿಯೋಗವೂ ಅಲ್ಲಿ ಇರುತ್ತದೆ' ಎಂದು ಅಂದ್ರಾಬಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಮುಂದಿನ ವಾರ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಪುನರಾರಂಭಗೊಳ್ಳುವ ನಿರೀಕ್ಷೆ 'ಸಕಾರಾತ್ಮಕ ಬೆಳವಣಿಗೆ'ಯಾಗಿದೆ ಎಂದು ಅವರು ಹೇಳಿದರು.
ಆದಾಗ್ಯೂ, ಮಾತುಕತೆ ಪುನರಾರಂಭದ ಸಾಧ್ಯತೆಯ ಬಗ್ಗೆ ಅಮೆರಿಕ ಮತ್ತು ಇರಾನ್ ಇನ್ನೂ ಏನನ್ನೂ ಹೇಳಿಲ್ಲ.