

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ (DNI) ಕಾರ್ಯನಿರ್ವಹಿಸುತ್ತಿದ್ದ ತುಳಸಿ ಗಬ್ಬಾರ್ಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಪತಿ ಅಬ್ರಹಾಂ ಅವರಿಗೆ ಅಪರೂಪದ ಎಲುಬಿನ ಕ್ಯಾನ್ಸರ್ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರ ವೈಟ್ ಹೌಸ್‌ನ ಓವಲ್ ಕಚೇರಿಯಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿದ ತುಳಸಿ ಗಬ್ಬಾರ್ಡ್ ಅವರು, ತಮ್ಮ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು. ಜೂನ್ 30ರಂದು ಅವರ ಕೊನೆಯ ಕಾರ್ಯದಿನವಾಗಿರಲಿದೆ ಎಂದು ತಿಳಿದುಬಂದಿದೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಗಬ್ಬಾರ್ಡ್ ಅವರು, “ನನ್ನ ಪತಿ ಅಬ್ರಹಾಂ ಅವರಿಗೆ ಅತ್ಯಂತ ಅಪರೂಪದ ಎಲುಬಿನ ಕ್ಯಾನ್ಸರ್ ದೃಢಪಟ್ಟಿದೆ. ಈ ಸಂಕಷ್ಟದ ಸಮಯದಲ್ಲಿ ಅವರ ಜೊತೆಯಲ್ಲಿರಲು ಮತ್ತು ಸಂಪೂರ್ಣ ಬೆಂಬಲ ನೀಡಲು ನಾನು ಸಾರ್ವಜನಿಕ ಸೇವೆಯಿಂದ ಹಿಂದೆ ಸರಿಯಬೇಕಾಗಿದೆ” ಎಂದು ಬರೆದಿದ್ದಾರೆ.
ಆದರೆ, ಮೂಲಗಳ ಪ್ರಕಾರ ವೈಟ್ ಹೌಸ್ ಗಬ್ಬಾರ್ಡ್ ಅವರನ್ನು ರಾಜೀನಾಮೆ ನೀಡಲು ಒತ್ತಾಯಿಸಿತು ಎಂಬ ಮಾಹಿತಿ ರಾಯಿಟರ್ಸ್ ವರದಿಯಲ್ಲಿ ಉಲ್ಲೇಖವಾಗಿದೆ.
ಗಬ್ಬಾರ್ಡ್ ರಾಜೀನಾಮೆಯನ್ನು ಟ್ರಂಪ್ ಕೂಡ ದೃಢಪಡಿಸಿದ್ದು, “ದುರಾದೃಷ್ಟವಶಾತ್ ತುಳಸಿ ಗಬ್ಬಾರ್ಡ್ ಜೂನ್ 30ರಂದು ಆಡಳಿತದಿಂದ ಹೊರಹೋಗಲಿದ್ದಾರೆ” ಎಂದು ಹೇಳಿದ್ದಾರೆ.
ಜೊತೆಗೆ ಪ್ರಿನ್ಸಿಪಲ್ ಡೆಪ್ಯೂಟಿ ಡೈರೆಕ್ಟರ್ ಆಫ್ ನ್ಯಾಷನಲ್ ಇಂಟೆಲಿಜೆನ್ಸ್ ಆಗಿರುವ ಆರನ್ ಲುಕಾಸ್ ಅವರು ಹಂಗಾಮಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
11 ವರ್ಷಗಳ ವೈವಾಹಿಕ ಜೀವನದಲ್ಲಿ ತಮ್ಮ ಪತಿ ‘ನನ್ನ ಬಲವಾದ ಆಧಾರ’ ಎಂದು ಗಬ್ಬಾರ್ಡ್ ಹೇಳಿಕೊಂಡಿದ್ದು, ಸೇನಾ ಸೇವೆ, ರಾಜಕೀಯ ಪ್ರಚಾರ ಮತ್ತು ಗುಪ್ತಚರ ಮುಖ್ಯಸ್ಥೆಯಾಗಿ ಕೆಲಸ ಮಾಡುವ ಅವಧಿಯಲ್ಲೂ ಅವರ ಬೆಂಬಲವೇ ತನ್ನ ಶಕ್ತಿಯಾಗಿತ್ತು ಎಂದು ಹೇಳಿದ್ದಾರೆ.
ಇದೇ ವೇಲೆ ಕಳೆದ ಒಂದೂವರೆ ವರ್ಷಗಳಿಂದ ಗುಪ್ತಚರ ಇಲಾಖೆಯನ್ನು ಮುನ್ನಡೆಸುವ ಅವಕಾಶ ನೀಡಿದಕ್ಕಾಗಿ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸಿರುವ ತುಳಸಿ ಅವರು, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
43 ವರ್ಷದ ತುಳಸಿ ಗಬ್ಬಾರ್ಡ್ ಅವರು, ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಹಿಂದೂ ನಾಯಕಿಯಾಗಿ ಇತಿಹಾಸ ನಿರ್ಮಿಸಿದ್ದರು.
ಹಿಂದೂ ಧರ್ಮದ ಮೇಲಿನ ಆಸಕ್ತಿಯಿಂದಾಗಿ ಅವರನ್ನು ಭಾರತೀಯ ಮೂಲದವರಂತೆ ಹಲವರು ಭಾವಿಸಿದ್ದರು. ತುಳಸಿ ಅವರು ಅಮೆರಿಕದ ಸಮೋವಾ ಪ್ರದೇಶದಲ್ಲಿ ಜನಿಸಿ ಹವಾಯಿ ಹಾಗೂ ಫಿಲಿಪ್ಪೀನ್ಸ್‌ನಲ್ಲಿ ಬೆಳೆದಿದ್ದರು.
ತಮ್ಮ ಅವಧಿಯಲ್ಲಿ ಗಬ್ಬಾರ್ಡ್ ಅಮೆರಿಕಾದ ಗುಪ್ತಚರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಇಲಾಖೆಯ ವೆಚ್ಚವನ್ನು ವರ್ಷಕ್ಕೆ 700 ಮಿಲಿಯನ್ ಡಾಲರ್‌ಗೂ ಹೆಚ್ಚು ಕಡಿಮೆ ಮಾಡುವುದು, ಡೈವರ್ಸಿಟಿ ಹಾಗೂ ಇಕ್ವಿಟಿ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದು ಮತ್ತು ಲಕ್ಷಾಂತರ ಸರ್ಕಾರಿ ದಾಖಲೆಗಳನ್ನು ಬಹಿರಂಗಪಡಿಸುವ ಕ್ರಮಗಳನ್ನು ಕೈಗೊಂಡಿದ್ದರು.
ಬಹಿರಂಗಗೊಂಡ ದಾಖಲೆಗಳಲ್ಲಿ ಟ್ರಂಪ್-ರಷ್ಯಾ ತನಿಖೆ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಹಾಗೂ ರಾಬರ್ಟ್ ಎಫ್. ಕೆನಡಿ ಹತ್ಯೆ ಪ್ರಕರಣಗಳ ದಾಖಲೆಗಳು ಮತ್ತು 2016ರ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಕುರಿತ ‘ಕ್ರಾಸ್‌ಫೈರ್ ಹರಿಕೇನ್’ ತನಿಖೆಯ ದಾಖಲೆಗಳೂ ಸೇರಿದ್ದವು.
ಗಬ್ಬಾರ್ಡ್ ರಾಜೀನಾಮೆ ಟ್ರಂಪ್ ಆಡಳಿತದಲ್ಲಿ ನಡೆದ ಮತ್ತೊಂದು ಮಹತ್ವದ ನಿರ್ಗಮನವಾಗಿದೆ. ಇದಕ್ಕೂ ಮೊದಲು ಗೃಹ ಭದ್ರತಾ ಸಚಿವೆ ಕ್ರಿಸ್ಟಿ ನೋಯೆಮ್ ಹಾಗೂ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಕೂಡ ಹುದ್ದೆ ತೊರೆದಿದ್ದರು. ಬಳಿಕ ಕಾರ್ಮಿಕ ಸಚಿವೆ ಲೋರಿ ಚಾವೆಜ್-ಡಿರೆಮರ್ ಕೂಡ ವಿವಿಧ ಆರೋಪಗಳ ನಡುವೆಯೇ ರಾಜೀನಾಮೆ ನೀಡಿದ್ದರು.
Advertisement