ನಾನೇಕೆ ದುಷ್ಟನಾದೆ?

ನಾನೇಕೆ ದುಷ್ಟನಾದೆ?
Updated on: 

ಈ ಭೂಮಿಯ ಮೇಲೆ ಹುಟ್ಟು ಸಾವುಗಳು ವಿಧಿ ಆಧಾರಿತ- ನಮ್ಮ ವೈಯಕ್ತಿಕ ಅಭಿಪ್ರಾಯ- ಆಯ್ಕೆಗೆ ಅಲ್ಲಿ ಬೆಲೆಯಿಲ್ಲ. ಹುಟ್ಟಿನಿಂದಲೇ 'ದುರ್ಯೋಧನಾ.... ಕುರು ಸಿಂಹಾಸನಕ್ಕೆ ಉತ್ತರಾಧಿಕಾರಿ ನೀನೇ' ಎಂದೇ ನನ್ನನ್ನು ಬೆಳೆಸಲಾಯಿತು. ಕುರು ಸಿಂಹಾಸನ ನನ್ನ ಹಕ್ಕು ಎಂಬುದಾಗಿ ನನಗೆ ಬುದ್ಧಿ ತಿಳಿದ ಹೊತ್ತಿನಲ್ಲೆ ನನಗನ್ನಿಸಿಹೋಯಿತು.

ಇದ್ದಕ್ಕಿದ್ದಂತೆ ಋಷಿಗಳು ಎಲ್ಲಿಂದಲೋ ಐದು ಮಕ್ಕಳನ್ನು ಕರೆತಂದರು. ಇವರು ನಿನ್ನ ಚಿಕ್ಕಪ್ಪನ ಮಕ್ಕಳು ಎಂದು ನಮಗೆ ಪರಿಚಯಿಸಲಾಯಿತು. ಆ ಕ್ಷಣದಲ್ಲಿ ನೂರೊಂದು ಮಂದಿಗೆ ಇನ್ನೈದು ಮಂದಿ ಹೆಚ್ಚೇ? ಎನ್ನಿಸಿದ್ದು ಸತ್ಯ. ಸೇರಿ-ಕೂಡಿ- ಆಡುವ ಎಂದು ಸಂಭ್ರಮ ಪಟ್ಟದ್ದೇ ಬಂತು. ಮುಂದೆ ಏನಾಯಿತು ಗೊತ್ತೇ? ದಿನದಿನಕ್ಕೆ ನಮ್ಮ ಪ್ರಾಶಸ್ತ್ಯ ಕಡಿಮೆಯಾಗುತ್ತಾ ಹೋಯಿತು. ನಾವು ಏನು ಮಾಡಿದರೂ- ನಾವೇನೋ ದೊಡ್ಡ ತಪ್ಪುಮಾಡಿಬಿಟ್ಟೆವು ಎಂಬಂತೆ ಪ್ರತಿಬಿಂಬಿಸಲಾಗುತ್ತಿತ್ತು. ಹೊಗಳಿಕೆ ಎಲ್ಲಾ ಪಾಂಡವರಿಗೆ- ತೆಗಳಿಕೆ ಎಲ್ಲಾ ಕೌರವರಿಗೆ ಎಂಬ ಅಲಿಖಿತ ನಿಯಮ ಜಾರಿಯಾಗಿ ಹೋಯಿತು. ಅಪ್ಪನಿಲ್ಲದ ಮಕ್ಕಳು ಎಂಬ ವಿಶೇಷ ರಿಯಾಯಿತಿ ಬೇರೆ ಆ ಪಾಂಡವರಿಗೆ! ಅಷ್ಟು ದಿನ ನಮ್ಮನ್ನು ಎತ್ತಿ ಮುದ್ದಾಡುತ್ತಿದ್ದ ಹಿರಿಯರು. ಕೆಲದಿನಗಳಲ್ಲಿ ಸಂಪೂರ್ಣ ಬದಲಾದರು. ಕುರು ವಂಶಜರೆಂದ ಮೇಲೆ ನಮ್ಮೊಡನೆ ಬೆರೆತು ಹೋಗುವುದರ ಬದಲು, ನಮ್ಮನ್ನೇ ದುಷ್ಟರೆಂಬಂತೆ ಪ್ರತ್ಯೇಕಿಸಿ- ಪ್ರತಿಬಿಂಬಿಸಿ, ಗುರುಹಿರಿಯರ- ಪುರುಜನರ ಮನಸ್ಸನ್ನು ಆಕ್ರಮಿಸಿಬಿಟ್ಟರು. ಇಷ್ಟೆಲ್ಲ ನಡೆಯುತ್ತಿರುವಾಗ ಪಾಂಡವರ ಮೇಲೆ ದ್ವೇಷ ಹುಟ್ಟದ್ದೇ ಇದ್ದೀತೇ?

ಅಷ್ಟೇ ಅಲ್ಲ ಪಾಂಡವರು ನಮಗೆ ಕೊಟ್ಟ ಹಿಂಸೆ ಯಾರ ಗಮನಕ್ಕೂ ಬರುತ್ತಿರಲಿಲ್ಲ. ನಾವಾಗಿಯೇ ಹಿರಿಯರ ಗಮನಕ್ಕೆ ತಂದರೆ, ಅವರದನ್ನು ಪರಿಗಣಿಸುತ್ತಲೇ ಇರಲಿಲ್ಲ. ಆ ಭೀಮನೋ ಮಹಾಬಲವಂತ. ನನ್ನ ಹತ್ತತ್ತು ಮಂದಿ ತಮ್ಮಂದಿರನ್ನು ಒಟ್ಟಿಗೆ ಹಿಡಿದುಕೊಂಡು, ಪರಸ್ಪರ ತಲೆಯನ್ನು ಡಿಕ್ಕಿ ಹೊಡೆಸುತ್ತಿದ್ದ. ನನ್ನ ತಮ್ಮಂದಿರ ಕಾಲು ಹಿಡಿದು ದರದರನೆ ಮಾರ್ಗದಲ್ಲಿ ಎಳೆದು, ಅವರ ಮೈಕೈಯಲ್ಲಿ ರಕ್ತ ಬರುವಂತೆ ಮಾಡುತ್ತಿದ್ದ. ನಮ್ಮನ್ನೆಲ್ಲ ನೀರಿನಲ್ಲಿ ಮುಳುಗಿಸಿ ನಾವು "ಸತ್ತೆವೂ... ಸತ್ತೆವೂ" ಎಂದು ಬೊಬ್ಬೆ ಹೊಡೆಯುವಾಗ, ಎತ್ತಿ ಎಸೆದು ಬಿಡುತ್ತಿದ್ದ. ನಾವು ಮರಕೋತಿ ಆಟವನ್ನು ಆಡುತ್ತಿರುವಾಗ, ಮರವನ್ನು ಅಲುಗಿಸಿ- ನಾವು ತುಪುತುಪನೆ ಉದುರುವಂತೆ ಮಾಡಿ ಚಪ್ಪಾಳೆ ತಟ್ಟಿ ನಗುತ್ತಿದ್ದ. ಆ ಭೀಮನು ಕೊಟ್ಟ ಚಿತ್ರಹಿಂಸೆಗಳು ಒಂದಾ ಎರಡಾ? ನಾವು ಅನುಭವಿಸಿದ ನೋವು- ಅಪಮಾನ- ಸಂಕಟ ಯಾರ ಕಣ್ಣಿಗೂ ಕಾಣಿಸಲಿಲ್ಲ. ನಾನು ವಿಷದ ಲಡ್ಡುಗಳನ್ನು ಭೀಮನಿಗೆ ತಿನ್ನಿಸಿದ್ದು ಮಾತ್ರ ದೊಡ್ಡ ಪ್ರಮಾದವೆಂಬಂತೆ ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಾರೆ. ಇದು ತರಹವೇ?

ತಪ್ಪೆಲ್ಲ ನನ್ನದೇ ಎಂದೇ ಇಟ್ಟುಕೊಳ್ಳೋಣ. ಇವರ್ಯಾರದೂ ಏನೂ ತಪ್ಪೇ ಇಲ್ಲವೇ? ಅಪ್ಪ ಹುಟ್ಟು ಕುರುಡ ನಿಜ. ಆದರೂ ಹುಟ್ಟಿಸಿದ ಮೇಲೆ, ಕಾಯುವ ಹೊಣೆ ಅವನದೇ ತಾನೇ? ಅಪ್ಪನಿದ್ದೂ ನಾವು ಅನಾಥರಂತೆ ಬೆಳೆಯಬೇಕಾಯಿತು. ಅಪ್ಪ ಅರಮನೆಯಿಂದ ಹೊರ ಬಂದದ್ದೇ ನೆನಪಿಲ್ಲ. ಇನ್ನು ನಮ್ಮನ್ನು ರಕ್ಷಿಸುವ ಮಾತೆಲ್ಲಿ ಬಂತು? ಕಣ್ಣಿದ್ದೂ ಕುರುಡಾಗಿ ತನ್ನ ತಾಯ್ತನದ ಜವಾಬ್ದಾರಿಯಿಂದ ಪಲಾಯನಗೈದ ನನ್ನಮ್ಮ ಗಾಂಧಾರಿಯೂ ತಪ್ಪಿತಸ್ಥಳಲ್ಲವೇ? ಅವಳನ್ನು ಮಹಾಪತಿವ್ರತೆಯೆಂದು ಕೊಂಡಾಡುವವರು. ತನ್ನ ಗರ್ಭಾವಸ್ಥೆಯಲ್ಲಿಯೇ ನನ್ನಲ್ಲಿ ಹೊಟ್ಟೆ ಕಿಚ್ಚನ್ನು ತುಂಬಿದ್ದನ್ನು ಮರೆತುಬಿಟ್ಟರೋ ಹೇಗೆ? ಪ್ರತಿ ವಿಷಯಕ್ಕೂ ನಮ್ಮನ್ನು ಪಾಂಡವರ ಜೊತೆಯಲ್ಲಿ ಹೋಲಿಸುತ್ತ, ನಮ್ಮಲ್ಲಿ ಕೀಳರಿಮೆ ಬೆಳೆಸಿದ್ದು- ಗುರುಗಳಾದ ದ್ರೋಣರು ಅವರು ತಪ್ಪಿತಸ್ಥರೆಲ್ಲವೇ? ಅಪ್ಪನಿಲ್ಲದ ಮಕ್ಕಳು ಎನ್ನುತ್ತಾ ಪಾಂಡವರ ಪರವಾಗಿ ತಾರತಮ್ಯ ತೋರಿಸಿದ್ದು- ನಮ್ಮಜ್ಜನಾದ ಭೀಷ್ಮರು ಮಾಡಿದ ತಪ್ಪಲ್ಲವೇ?

ನಾನು ದುಷ್ಟನಾಗುವುದಕ್ಕೆ ನನ್ನ ಹೆತ್ತವರು ಕಾರಣ. ಬೆಳೆದ ಪರಿಸರ ಕಾರಣ. ಪಾಂಡವರ ಪಕ್ಷ ವಹಿಸಿ, ನನ್ನಲ್ಲಿ ದುಷ್ಟತನವನ್ನು ಅರೋಹಿಸಿದ ಗುರು-ಹಿರಿಯರೂ ಅಷ್ಟೇ ಕಾರಣ. ಯಾವುದೇ ಮಗುವನ್ನು ಪದೇ ಪದೇ "ನೀನು ಹುಚ್ಚ", "ನೀನು ದಡ್ಡ", "ನೀನು ದುಷ್ಟ" ಎಂದು ಹೇಳುತ್ತಿದ್ದರೆ, ಆ ಮಗು ಹಾಗೆಯೇ ಆಗಿಬಿಡುತ್ತದೆ. ಸರಿಯಾಗಿ ಬೆಳೆಸದೆ ಈಗ ನನ್ನೊಬ್ಬನನ್ನೇ ದೂರಿದರೆ ಪ್ರಯೋಜನವೇನು?

ಯಾವ ಕ್ಷಣದಲ್ಲಿ ಅಖಂಡ ಕುರು ಸಾಮ್ರಾಜ್ಯ ಹರಿದು ಹಂಚಿ ಹೋಗುತ್ತದೆಯೆಂದು ಗೊತ್ತಾಯಿತೋ ನಾನು ಇನ್ನು ಸುಮ್ಮನಿರುವುದಕ್ಕೆ ಹೇಗೆ ಸಾಧ್ಯ? ನನ್ನಪ್ಪ ಧೃತರಾಷ್ಟ್ರ ಕುರುಡನೆಂಬ ಏಕೈಕ ಕಾರಣದಿಂದ ಸಿಂಹಾಸನ ಚಿಕ್ಕಪ್ಪ ಪಾಂಡುವಿನ ಪಾಲಾಯಿತು. ಶಾಪಗ್ರಸ್ಥನಾದ ಪಾಂಡುರಾಜ ಯಾವ ಕ್ಷಣದಲ್ಲಿ ಸಿಂಹಾಸನವನ್ನು ತೊರೆದು ಹೊರಟು ಹೋದನೋ ಅಲ್ಲಿಗೆ ಅವನಿಗೂ- ಕುರುಸಿಂಹಾಸನಕ್ಕೂ ಇದ್ದಿರಬಹುದಾದ ಸಂಬಂಧ ಕಳಚಿಹೋಯಿತು. ಅಷ್ಟಕ್ಕೂ ಈ ಪಾಂಡವರೇನು ಪಾಂಡುವಿನಿಂದ ಹುಟ್ಟಿದ ಮಕ್ಕಳಲ್ಲ. ಪ್ರಪಂಚ ಅವರನ್ನು ಕುರುವಂಶಜರೆಂದು ಒಪ್ಪಿದ ಮಾತ್ರಕ್ಕೆ ಈ ಕೌರವನೂ ಒಪ್ಪಲೇಬೇಕೆಂಬ ನಿಯಮವೇನಿದೆ? ಪಾಂಡವರನ್ನು ನಮ್ಮ ವಂಶಜರೆಂದೇ ಒಪ್ಪದಿದ್ದ ಮೇಲೆ ಇನ್ನು ರಾಜ್ಯವನ್ನು ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ!

ತ್ರೇತಾಯುಗದಲ್ಲಿ ಏನಾಯಿತು? ವಾಲಿ ಸತ್ತ ನಂತರ ಸುಗ್ರೀವನಿಗೆ ಪಟ್ಟ ಕಟ್ಟಲಾಯಿತು. ವಾಲಿಯ ಮಗ ಅಂಗದ ಯುವರಾಜನಾದ. ಈ ವ್ಯವಸ್ಥೆಯನ್ನು ರಾಮನೇ ಮುಂದೆ ನಿಂತು ಮಾಡಿದ. ಅದೇ ಕ್ರಮ ಇಲ್ಲಿಯೂ ಏಕೆ ನಡೆಯಬಾರದು? ಕುರುಕುಲದ ಜೇಷ್ಠನಾದ ದೃತರಾಷ್ಟ್ರನ ಸಿಂಹಾಸನ- ಅವನ ಮಕ್ಕಳಾದ ನಮಗೆ ಬರುತ್ತದೆಯೇ ಹೊರತು- ತಮ್ಮನಾದ ಪಾಂಡುರಾಜನಿಗೆ ಅನಿವಾರ್ಯ ಕಾರಣಗಳಿಂದ ದೊರೆತರೂ- ಆತನ ಮಕ್ಕಳಿಗೆ ದಕ್ಕುವುದಿಲ್ಲ.

ಪಾಂಡವರ ಮೇಲಿನ ದ್ವೇಷವೊಂದನ್ನು ಬಿಟ್ಟು ಬೇರಾವ ವಿಷಯದಲ್ಲಿ ಈ ಕೌರವ ದುಷ್ಟ ಎಂಬುದನ್ನು ಈ ಪ್ರಪಂಚ ಹೇಳಿಬಿಡಲಿ. ಹಸ್ತಿನಾವತಿಯ ಪ್ರಜೆಗಳು ಸುಖದಲ್ಲಿದ್ದಾರೆ. ಶತ್ರು ರಾಜರ ದಾಳಿಯ ಭಯವಿಲ್ಲ. ಸುಭದ್ರ ಆಡಳಿತಕ್ಕೆ ನನ್ನ ಹಸ್ತಿನಾವತಿಯೇ ಪರ್ಯಾಯ ಹೆಸರು. ಅಪ್ಪ ಕುರುಡನಾದರೇನು? ಅವನಿಗೆ ಕಣ್ಣಾಗಿ ಈ ಹಸ್ತಿನಾವತಿಯ ರಾಜ್ಯಭಾರವನ್ನು ನೋಡಿಕೊಳ್ಳುವುದಕ್ಕೆ ಈ ದುರ್ಯೋಧನ ಇದ್ದಾನಲ್ಲ...

ಯಾವ ಕ್ಷಣದಲ್ಲಿ ಅಪ್ಪ-ಅಮ್ಮನಿಗೆ ಸಲ್ಲಬೇಕಾದ ಗೌರವಗಳು ಅವರಿಗೆ ಸಲ್ಲುತ್ತಿಲ್ಲವೆಂಬ ಸತ್ಯ ತಿಳಿಯಿತೋ ಅಂದೇ ನಾನು ಎಚ್ಚೆತ್ತುಕೊಂಡೆ. ಹೆಸರಿಗೆ ಮಾತ್ರ ಮಹಾರಾಜ- ಮಹಾರಾಣಿಯರು. ಅಧಿಕಾರ- ನಿರ್ಣಯಗಳನ್ನು ತೆರೆದುಕೊಳ್ಳುವುದು ಬೇರೆಯವರು. ಪೀಠದಲ್ಲಿ ಒಬ್ಬರನ್ನು ಕೂರಿಸಿ, ಇನ್ನೊಬ್ಬರು ಅಧಿಕಾರ ನಡೆಸುವ ಈ ವ್ಯವಸ್ಥೆಗೆ ನನ್ನ ಧಿಕ್ಕಾರವಿತ್ತು. ಅಪ್ಪ-ಅಮ್ಮನಂತೆ ಸಾಧು ಸ್ವಭಾವವನ್ನು ರೂಢಿಸಿಕೊಂಡರೆ ನನ್ನನ್ನೂ ಇದೇ ರೀತಿ ಪಕ್ಕಕ್ಕೆ ಸರಿಸಿಬಿಡುತ್ತಾರೆಂದು ತಿಳಿದುಹೋಯಿತು.

ಪಾಂಡವರನ್ನು ಮೆರೆಸಿದಷ್ಟು ನನ್ನಲ್ಲಿ ಅವರ ಬಗೆಗಿನ ಅಸಮಾಧಾನ ಬೆಳೆಯುತ್ತಾ ಹೋಗುತ್ತಿದೆ. ನನ್ನ ದ್ವೇಷವನ್ನು ಸಾಧಿಸುವ ಹಠ ಬಲಿಯುತ್ತಿದೆ. 'ಹೌದು ನಾನು ದುಷ್ಟ. ನಾನಿರುವುದೇ ಹೀಗೆ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ' ಎಂದು ವಾದಿಸತೊಡಗಿದ್ದೇನೆ. ಏನು ಮಾಡಿಯಾದರೂ ಸರಿ. ಪಾಂಡವರನ್ನು ನನ್ನ ದಾರಿಯಿಂದ ತೊಲಗಿಸಿಬಿಡಬೇಕು. ಆಗಲೇ ನನಗೆ ಶಾಂತಿ!!! ನೆಮ್ಮದಿ!!!

- ಸುರೇಖಾ ಭಟ್ ಭೀಮಗುಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com