

ಹೂವಿನಹಡಗಲಿ ತಾಲೂಕಿನ ಮುದ್ರಪುರ ಹೊಸ ತಾಂಡಾದ ಒಂದು ಕುಟುಂಬ ಇದಕ್ಕೆ ನಿದರ್ಶನ. ತಾಂಡಾದ ನಿವಾಸಿಗಳಾದ ದೊಡ್ಡಮನಿ ಫಕ್ಕೀರ ನಾಯ್ಕ ಹಾಗೂ ಲಲಿತಾಬಾಯಿ ದಂಪತಿ ಬಡವರು. ಅಷ್ಟೇ ಅಲ್ಲ, ಅನಕ್ಷರಸ್ಥರೂ ಹೌದು. ಆದರೆ, ಮಕ್ಕಳ ಭವಿಷ್ಯವನ್ನು ಅವರು ಬರೆದ ರೀತಿ ಮಾತ್ರ ಅದ್ಭುತ...
ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳಿಗೆ ಭವಿಷ್ಯ, ಅನಕ್ಷರಸ್ಥ ಕುಟುಂಬದ ಅಭಿವೃದ್ಧಿ ಕಷ್ಟ, ಒಬ್ಬಿಬ್ಬರು ಮಕ್ಕಳಿಗೆ ಓದಿಸುವುದೇ ಅಸಾಧ್ಯ ಎಂಬ ಭಾವನೆ ಇರುವಾಗ ಅನಕ್ಷರಸ್ಥ ದಂಪತಿಯ ಎಂಟು ಮಕ್ಕಳು ಸರ್ಕಾರಿ ಕೆಲಸದಲ್ಲಿದ್ದಾರೆ ಎಂದರೆ ನಂಬುತ್ತೀರಾ!?
ಹೆತ್ತವರ ಇಚ್ಛಾಶಕ್ತಿ, ಮಕ್ಕಳ ಶ್ರದ್ಧೆ, ಅವಕಾಶಗಳ ಸದ್ಬಳಕೆ ಹಾಗೂ ಸಾಧನೆಯ ಹಂಬಲವೇ ಇದಕ್ಕೆ ಕಾರಣ. ಹೂವಿನಹಡಗಲಿ ತಾಲೂಕಿನ ಮುದ್ರಪುರ ಹೊಸ ತಾಂಡಾದ ಒಂದು ಕುಟುಂಬ ಇದಕ್ಕೆ ನಿದರ್ಶನ. ತಾಂಡಾದ ನಿವಾಸಿಗಳಾದ ದೊಡ್ಡಮನಿ ಫಕ್ಕೀರ ನಾಯ್ಕ(75) ಹಾಗೂ ಲಲಿತಾಬಾಯಿ ದಂಪತಿ ಬಡವರು. ಅಷ್ಟೇ ಅಲ್ಲ, ಅನಕ್ಷರಸ್ಥರೂ ಹೌದು. ಆದರೆ, ಮಕ್ಕಳ ಭವಿಷ್ಯವನ್ನು ಅವರು ಬರೆದ ರೀತಿ ಮಾತ್ರ ಅದ್ಭುತ!
ಒಂದು ತಲೆಮಾರಿನಲ್ಲಿ ಅನಕ್ಷರಸ್ಥವಾಗಿದ್ದ ಕುಟುಂಬ ಮತ್ತೊಂದು ತಲೆಮಾರಿನ ಕಾಲಕ್ಕೆ ಪೂರ್ಣ ಸಾಕ್ಷರ ಕುಟುಂಬವಾಗಿ ಮಾರ್ಪಟ್ಟಿದೆ. ಫಕ್ಕೀರ ನಾಯ್ಕ ಕೇವಲ 2ನೇ ತರಗತಿ ಓದಿದ್ದರೆ, ಲಲಿತಾಬಾಯಿ ಅನಕ್ಷರಸ್ಥೆ. ಓದುವುದಕ್ಕೆ ಬಾರದ ಇವರು ತಮ್ಮ 10 ಮಕ್ಕಳಿಗೂ ಶಿಕ್ಷಣ ಕೊಡಿಸಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿದ ಮೊದಲ ಮಗ ಏಕಾಂಬರಿ ನಾಯಕ ವ್ಯವಸಾಯದಲ್ಲಿ ತೊಡಗಿದ್ದಾರೆ. ಮಗಳು ಸುಶೀಲಾಬಾಯಿ 7ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಉಳಿದವರೆಲ್ಲರೂ ಪದವೀಧರರು, ಸರ್ಕಾರಿ ಉದ್ಯೋಗಿಗಳು! ಈ ಪೈಕಿ ನಾಲ್ವರು ಅಧಿಕಾರಿಗಳ ಮಟ್ಟದ ಹುದ್ದೆಗಳಲ್ಲಿದ್ದಾರೆ. ಎಂಟು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದರೂ, ಈ ಕುಟುಂಬ ತಮ್ಮ ವ್ಯವಸಾಯ ಕೈಬಿಟ್ಟಿಲ್ಲ.
ಓದಿದ್ದು ಹಳ್ಳಿ ಶಾಲೆಯಲ್ಲಿ...
ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ಮಾತ್ರ ಬುದ್ಧಿವಂತರಾಗುತ್ತಾರೆ ಎಂಬುದನ್ನೂ ಈ ಕುಟುಂಬ ಸುಳ್ಳಾಗಿಸಿದೆ. ಫಕ್ಕೀರ ನಾಯ್ಕ ತನ್ನೆಲ್ಲ ಮಕ್ಕಳನ್ನೂ ಓದಿಸಿದ್ದು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ. 4ನೇ ತರಗತಿವರೆಗೆ ಮುದ್ಲಾಪುರ ತಾಂಡಾದಲ್ಲಿ. ಆಮೇಲೆ 3 ಕಿ.ಮೀ. ದೂರದ ಸೋವೇನಹಳ್ಳಿಗೆ ನಡೆದೇ ಹೋಗಿ ಎಲ್ಲ ಮಕ್ಕಳೂ 10ನೇ ತರಗತಿವರೆಗಿನ ಶಿಕ್ಷಣ ಪೂರ್ಣಗೊಳಿಸಿದರು. ಅದರ ಜತೆಗೆ ಈ ಮಕ್ಕಳು ಹೊಲದ ಕೆಲಸಗಳನ್ನೂ ಮಾಡಿದರು. ಭೂಮಿ ಇದ್ದರೂ ಮಳೆಯಾಶ್ರಿತ. ಸರಿಯಾಗಿ ಬೆಳೆ ಬರುತ್ತಿರಲಿಲ್ಲ. ಆದರೂ, ಈ ದಂಪತಿ ಕೂಲಿ ಮಾಡಿ ಮಕ್ಕಳನ್ನು ಓದಿಸಿದರು. ಮುಂದೆ 8 ಜನರು ಧಾರವಾಡದ ಕರ್ನಾಟಕ ವಿವಿಯಲ್ಲಿ ಪದವಿ ಪಡೆದರು.
ಯಾರು ಯಾವ ಕೆಲಸದಲ್ಲಿ?
ಮೊದಲ ಮಗ ಏಕಾಂಬರಿ ನಾಯ್ಕ ವ್ಯವಸಾಯ ಮಾಡುತ್ತಿದ್ದಾರೆ. ಹನುಮಂತ ನಾಯ್ಕ ಪಿಎಚ್‌ಡಿ ಪೂರ್ಣಗೊಳಿಸಿ, ಕೊಪ್ಪಳ ಪದವಿ ಕಾಲೇಜಿನಲ್ಲಿ ಬಯೋಕೆವುಸ್ಟ್ರಿ ಪ್ರಾಧ್ಯಾಪಕರಾಗಿದ್ದಾರೆ. ಮಲ್ಲೇಶ್ ದೊಡ್ಡಮನಿ ಹಗರಿಬೊಮ್ಮನಹಳ್ಳಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್. ಸುರೇಶ್ ನಾಯ್ಕ ದಾವಣಗೆರೆ ಜಿಲ್ಲೆಯ ಮಾಯಕೊಂಡ ಠಾಣೆಯಲ್ಲಿ ಪಿಎಸ್‌ಐ, ಚಿತ್ತರಂಜನ್ ರಾಯಚೂರು ಜಿಲ್ಲೆಯ ಯಾಪಲದಿನ್ನಿ ಠಾಣೆಯಲ್ಲಿ ಪಿಎಸ್‌ಐ, ದುಷ್ಯಂತ್ ನಾಯ್ಕ ಹೂವಿನ ಹಡಗಲಿ ತಾಲೂಕಿನ ಬಾವಿಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ, ವೀರಣ್ಣ ನಾಯ್ಕ ಹಡಗಲಿ ತಾಲೂಕಿನ ಹಗರನೂರಿನಲ್ಲಿ ಪಿಡಿಒ, ವಿಜಯ ನಾಯ್ಕ, ಧಾರಾಸಿಂಗ್ ಪೊಲೀಸ್ ಪೇದೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟಿದ್ದರೂ ಈ ಕುಟುಂಬ ಅವಿಭಕ್ತವಾಗಿದೆ. ಮುದ್ಲಾಪುರ ತಾಂಡಾಕ್ಕೆ ಹೋದಾಗ ಎಲ್ಲರೂ ಒಂದೇ ಮನೆಯಲ್ಲಿ ಇರುತ್ತಾರೆ. ಉಳಿದೆಲ್ಲರೂ ಕೆಲಸದಲ್ಲಿರುವ ಕಾರಣ, ತುಂಡು ಭೂಮಿಯನ್ನು ಹಂಚುವ ಗೋಜಿಗೆ ಹೋಗದೆ, ಹಿರಿಮಗನಿಗೆ ಬಿಟ್ಟುಕೊಟ್ಟಿದ್ದಾರೆ.
= ಶಶಿಧರ ಮೇಟಿ