ವಾಣಿಜ್ಯ

ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿ

Harshavardhan M

ಚೆನ್ನೈ: ಭಾರತದಿಂದ ಕಾಲ್ತೆಗೆಯುತ್ತಿರುವುದಾಗಿ ಅಂತಾರಾಷ್ಟ್ರೀಯ ಅಟೊಮೊಬೈಲ್ ಸಂಸ್ಥೆ ಫೋರ್ಡ್ ಘೋಷಿಸಿದ ಬೆನ್ನಲ್ಲೇ ಚೆನ್ನೈ ಯಲ್ಲಿನ ಸಂಸ್ಥೆಯ ಘಟಕದ ಸಿಬ್ಬಂದಿ ವರ್ಗ, ಘಟಕವನ್ನು ಬೇರೊಂದು ಆಟೊಮೊಬೈಲ್ ಸಂಸ್ಥೆ ಖರೀದಿಸುವ ನಿರೀಕ್ಷೆಯಲ್ಲಿದೆ. ಅದೇ ವಿಚಾರವಾಗಿ ಫೋರ್ಡ್ ಸಂಸ್ಥೆ ಹಲವು ಖರೀದಿದಾರ ಸಂಸ್ಥೆಗಳೊಡನೆ ಮಾತುಕತೆಯಲ್ಲಿ ನಿರತವಾಗಿದೆ ಎನ್ನಲಾಗಿದೆ.

ಫೋರ್ಡ್ ಸಂಸ್ಥೆ ಚೆನ್ನೈ ಮತ್ತು ಗುಜರಾತಿನ ಸನಂದ್ ಎಂಬಲ್ಲಿ ಘಟಕಗಳನ್ನು ಹೊಂದಿದೆ. ಇದೀಗ ಎರಡೂ ಘಟಕಗಳನ್ನು ಮಾರುತ್ತಿದೆ. ಚೆನ್ನೈನ ಘಟಕದಲ್ಲಿ 3,300 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ ಚೆನ್ನೈಯಲ್ಲಿನ ಸಂಸ್ಥೆಯ ಘಟಕಕ್ಕೆ ಉತ್ತಮ ಹೆಸರಿದೆ. ಹೀಗಾಗಿಲ್ಲಿನ ಸಿಬ್ಬಂದಿ ವರ್ಗ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. 2022 ಜೂನ್ ತನಕವೂ ಸಮಯವಿದೆ. ಅಷ್ಟರೊಳಗೆ ಬೇರೊಂದು ಸಂಸ್ಥೆ ಈ ಘಟಕವನ್ನು ಸ್ವಾಧೀನ ಪಡಿಸಿಕೊಳ್ಳಲಿದೆ ಎಂದಿದೆ.  

ಫೋರ್ಡ್ ಸಂಸ್ಥೆ ಚೆನ್ನೈನಲ್ಲಿನ ಎಂಜಿನ್ ಮತ್ತು ವಾಹನ ಜೋಡಣಾ ಘಟಕಗಳನ್ನು ಮಾತ್ರವೇ ಮುಚ್ಚುತ್ತಿದೆ. ಆದರೆ ಫೋರ್ಡ್ ನ ಬಿಸಿನೆಸ್ ಕೇಂದ್ರ ಮತ್ತು ಉತ್ಪನ್ನ ಅಭಿವೃದ್ಧಿ ಕೇಂದ್ರಗಳು ಎಂದಿನಂತೆ ಚೆನ್ನೈನಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ವಿಭಾಗದಲ್ಲಿ 10,000 ಮಂದಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT