ಮುಂಬೈ: ಕಳೆದ ವಾರ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ವಾರದ ಮೊದಲ ದಿನವೇ ಭಾರಿ ಏರಿಕೆ ಕಂಡಿದೆ.
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ ಶೇ.1.66ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ1.68ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 1,233.25ಅಂಕಗಳ ಏರಿಕೆಯೊಂದಿಗೆ 75,692.78 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 387.70 ಅಂಕಗಳ ಏರಿಕೆಯೊಂದಿಗೆ 23,440.80 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಭಾರೀ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರು ಮತ್ತೆ ಭಾರತೀಯ ಮಾರುಕಟ್ಟೆಯತ್ತ ಆಸಕ್ತಿ ತೋರಿಸಿರುವುದು ಷೇರುಪೇಟೆಗೆ ಚೈತನ್ಯ ನೀಡಿದೆ ಎನ್ನಲಾಗಿದೆ.
ರಿಲಯನ್ಸ್ ಷೇರುಗಳ ಭರ್ಜರಿ ಏರಿಕೆ
ಸೋಮವಾರದ ಮಾರುಕಟ್ಟೆ ಏರಿಕೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ಪಾತ್ರ ವಹಿಸಿತು. ಕಂಪನಿಯ ಷೇರುಗಳು ಶೇ.11.6ರಷ್ಟು ಏರಿಕೆ ಕಂಡು ₹1,300ಕ್ಕೆ ತಲುಪಿದವು. 2026-27ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್‌ನ ಏಕೀಕೃತ ನಿವ್ವಳ ಲಾಭ ಶೇ.41ರಷ್ಟು ಹೆಚ್ಚಾಗಿ ₹25,548 ಕೋಟಿಗೆ ತಲುಪಿರುವುದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿತು.
ಉಳಿದಂತೆ ಟಾಟಾ ಸ್ಟೀಲ್ ಷೇರುಗಳು ಶೇ.5.83, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ.5.13, ಶ್ರಿರಾಮ್ ಫೈನಾನ್ಸ್ ಶೇ.4.88 ಹಾಗೂ ಕೋಲ್ ಇಂಡಿಯಾ ಶೇ.4.88ರಷ್ಟು ಏರಿಕೆ ಕಂಡವು. ಮತ್ತೊಂದೆಡೆ ಇನ್ಫೋಸಿಸ್ ಷೇರುಗಳು ಶೇ.2.03ರಷ್ಟು ಕುಸಿದವು. ಐಸಿಐಸಿಐ ಬ್ಯಾಂಕ್, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳೂ ಇಳಿಕೆ ಕಂಡವು.
ಒಂದೇ ದಿನ ₹7 ಲಕ್ಷ ಕೋಟಿ ಲಾಭ!
ಹೂಡಿಕೆದಾರರ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ಸುಮಾರು ₹7 ಲಕ್ಷ ಕೋಟಿ ಹೆಚ್ಚಳವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 94.96ರಷ್ಟಿದ್ದ ಅಮೆರಿಕದ ಡಾಲರ್ ಎದುರಿನ ರೂಪಾಯಿ ಮೌಲ್ಯ ಸೋಮವಾರ 7 ಪೈಸೆ ಏರಿಕೆಯಾಗಿ 94.89ಕ್ಕೆ ತಲುಪಿದೆ.
ವಿದೇಶಿ ಹೂಡಿಕೆದಾರರ ಮರಳುವಿಕೆ, ಆಟೋ ಷೇರುಗಳಿಗೂ ಲಾಭ
ಇತ್ತೀಚಿನ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಿಂದ ದೂರ ಉಳಿದಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಮತ್ತೆ ಖರೀದಿಯತ್ತ ಮುಖ ಮಾಡಿದ್ದಾರೆ. ಕಳೆದ 10 ವಹಿವಾಟು ದಿನಗಳಲ್ಲಿ ವಿದೇಶಿ ಹೂಡಿಕೆದಾರರು ಸುಮಾರು 1.2 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಕಳೆದ ವಾರ ಒಂದೇ ದಿನದಲ್ಲಿ ಸುಮಾರು ₹3,599 ಕೋಟಿ ಹೂಡಿಕೆ ಮಾಡಿರುವುದು ಮಾರುಕಟ್ಟೆಯ ಉತ್ಸಾಹಕ್ಕೆ ಕಾರಣವಾಗಿದೆ.
ಇದರ ಜತೆಗೆ ಅಕ್ಟೋಬರ್ ತಿಂಗಳ ವಾಹನ ಮಾರಾಟದ ಅಂಕಿಅಂಶಗಳು ಆಟೋಮೊಬೈಲ್ ಕಂಪನಿಗಳ ಷೇರುಗಳಿಗೆ ಬಲ ನೀಡಿವೆ. ಹಬ್ಬದ ಋತುವಿನ ಬೇಡಿಕೆಯಿಂದ ದೇಶೀಯ ಪ್ರಯಾಣಿಕ ವಾಹನಗಳ ಮಾರಾಟ ಐದು ಲಕ್ಷದ ಗಡಿ ದಾಟಿದ್ದು, ಮಾರುತಿ ಸುಜುಕಿ, ಹ್ಯುಂಡೈ ಮತ್ತು ಮಹೀಂದ್ರಾ ಕಂಪನಿಗಳು ತಮ್ಮ ಅತ್ಯಧಿಕ ಮಾಸಿಕ ಮಾರಾಟ ದಾಖಲಿಸಿವೆ.
ಕಚ್ಚಾ ತೈಲ ಬೆಲೆ ಇಳಿಕೆ ಮಾರುಕಟ್ಟೆಗೆ ಬಲ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಭಾರತೀಯ ಷೇರುಪೇಟೆಯ ಚೇತರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಕಳೆದ ವಾರ ಪ್ರತಿ ಬ್ಯಾರೆಲ್‌ಗೆ ಸುಮಾರು 117 ಡಾಲರ್ ತಲುಪಿದ್ದ ಕಚ್ಚಾ ತೈಲದ ಬೆಲೆ ಸೋಮವಾರ ಸುಮಾರು 108-110 ಡಾಲರ್‌ಗೆ ಇಳಿಕೆಯಾಗಿದೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ಹಾಗೂ ಕತಾರ್ ಅಧಿಕಾರಿಗಳ ನಡುವೆ ಮಾತುಕತೆ ಮುಂದುವರಿದಿರುವುದು ತೈಲ ಪೂರೈಕೆ ವ್ಯತ್ಯಯದ ಆತಂಕವನ್ನು ತಗ್ಗಿಸಿದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರಿಂದ ಬೆಲೆ ಇಳಿಕೆ ಹೂಡಿಕೆದಾರರ ಆತಂಕವನ್ನು ಕಡಿಮೆ ಮಾಡಿದೆ.