Indian Stock Market: ಪುಟಿದೆದ್ದ ಷೇರುಪೇಟೆ, ಸೆನ್ಸೆಕ್ಸ್ 1,502 ಅಂಕ ಜಿಗಿತ, 4 ಲಕ್ಷ ಕೋಟಿ ರೂ ಲಾಭ!
ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಭಾರಿ ಹೂಡಿಕೆ, ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಪ್ರಮುಖ ಬ್ಯಾಂಕ್‌ಗಳ ಷೇರುಗಳ ಖರೀದಿ ಭರಾಟೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ.
ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬುಧವಾರ ವಿದೇಶಿ ಹೂಡಿಕೆದಾರರ ಖರೀದಿ ಅಬ್ಬರ ಜೋರಾದ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಭರ್ಜರಿ ಚೇತರಿಕೆ ಕಂಡಿದ್ದು, ಹೂಡಿಕೆದಾರರು ಬರೊಬ್ಬರಿ 4 ಲಕ್ಷ ಕೋಟಿ ರೂ ಲಾಭ ಗಳಿಸಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಭಾರಿ ಹೂಡಿಕೆ, ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಪ್ರಮುಖ ಬ್ಯಾಂಕ್‌ಗಳ ಷೇರುಗಳ ಖರೀದಿ ಭರಾಟೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ.
ಬಿಎಸ್‌ಇ ಸೆನ್ಸೆಕ್ಸ್ 1,502.29 ಪಾಯಿಂಟ್ಸ್ ಅಥವಾ ಶೇ.1.82ರಷ್ಟು ಏರಿಕೆಯಾಗಿ 83,938.28 ಅಂಕಗಳಿಗೆ ತಲುಪಿದೆ. ದಿನದ ವಹಿವಾಟಿನ ಮಧ್ಯೆ ಒಂದು ಹಂತದಲ್ಲಿ 2,062.22 ಪಾಯಿಂಟ್ಸ್ ಏರಿಕೆ ಕಂಡು 84,498.21 ಅಂಕಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.
ಇದೇ ರೀತಿ ಎನ್‌ಎಸ್‌ಇ ನಿಫ್ಟಿ 469.60 ಪಾಯಿಂಟ್ಸ್ ಅಥವಾ ಶೇ.1.85ರಷ್ಟು ಜಿಗಿದು 25,819.25 ಅಂಕಗಳಿಗೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಗರಿಷ್ಠ 25,951.65 ಅಂಕಗಳವರೆಗೂ ಏರಿಕೆ ಕಂಡಿತ್ತು.
ಸೋಮವಾರದ ಕುಸಿತದ ಬಳಿಕ ಬುಧವಾರ ಷೇರುಪೇಟೆ ಮತ್ತೆ ಚೇತರಿಸಿಕೊಂಡಿದೆ. ಮಂಗಳವಾರ ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗೆ ರಜೆ ಇತ್ತು.
ಅಂದಹಾಗೆ ಇಂದಿನ ವಹಿವಾಟಿನಲ್ಲಿ ಎಫ್‌ಎಂಸಿಜಿ, ಫೈನಾನ್ಸ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ. ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್ ಷೇರುಗಳಿಗೆ ಭರ್ಜರಿ ಬೇಡಿಕೆ ಕಂಡುಬಂದಿತ್ತು. ಅಂತೆಯೇ ಸರಕು, ಕೈಗಾರಿಕೆ, ದೂರಸಂಪರ್ಕ, ಯುಟಿಲಿಟೀಸ್ ಮತ್ತು ಹೌಸಿಂಗ್ ಫೈನಾನ್ಸ್ ವಲಯಗಳು ಇಳಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದವು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಗರಿಷ್ಠ ಶೇ.5.94ರಷ್ಟು ಏರಿಕೆ ಕಂಡವು. ಇನ್ನು ಟ್ರೆಂಟ್ ಶೇ.3.59, ಐಸಿಐಸಿಐ ಬ್ಯಾಂಕ್ ಶೇ.3.44, ಇಂಟರ್‌ಗ್ಲೋಬ್ ಏವಿಯೇಷನ್ ಶೇ.3.24, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.3.18 ಮತ್ತು ಬಜಾಜ್ ಫೈನಾನ್ಸ್ ಶೇ.3.04ರಷ್ಟು ಏರಿಕೆ ದಾಖಲಿಸಿದವು. ಆದರೆ ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್ ಮತ್ತು ಟೈಟಾನ್ ಕಂಪನಿಗಳ ಷೇರುಗಳು ಇಳಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದವು.
ಎಫ್‌ಎಂಸಿಜಿ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಏರಿಕೆ
ಬಿಎಸ್‌ಇ ವಲಯವಾರು ಸೂಚ್ಯಂಕಗಳ ಪೈಕಿ ಎಫ್‌ಎಂಸಿಜಿ ವಲಯ ಶೇ.3.14ರಷ್ಟು ಏರಿಕೆಯೊಂದಿಗೆ ಮುಂಚೂಣಿಯಲ್ಲಿತ್ತು. ಟಾಪ್ 10 ಬ್ಯಾಂಕ್‌ಗಳ ಸೂಚ್ಯಂಕ ಶೇ.2.28, ಖಾಸಗಿ ಬ್ಯಾಂಕ್ ಸೂಚ್ಯಂಕ ಶೇ.2.22, ಹಣಕಾಸು ಸೇವೆಗಳು ಶೇ.1.79, ಬ್ಯಾಂಕೆಕ್ಸ್ ಶೇ.1.74, ಆರೋಗ್ಯ ಸೇವೆಗಳು ಶೇ.1.46 ಮತ್ತು ವಿಮಾ ವಲಯ ಶೇ.1.17ರಷ್ಟು ಏರಿಕೆ ದಾಖಲಿಸಿದವು. ಇನ್ನೊಂದೆಡೆ ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ.0.43 ಮತ್ತು ಮಿಡ್‌ಕ್ಯಾಪ್ ಸೆಲೆಕ್ಟ್ ಸೂಚ್ಯಂಕ ಶೇ.0.11ರಷ್ಟು ಕುಸಿದವು.
ವಿದೇಶಿ ಹೂಡಿಕೆದಾರರಿಂದ ₹5,673 ಕೋಟಿ ಹೂಡಿಕೆ
ಷೇರುಪೇಟೆಯ ಚೇತರಿಕೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಪ್ರಮುಖ ಕಾರಣವಾಗಿದೆ. ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತೀಯ ಷೇರುಪೇಟೆಯಲ್ಲಿ ₹5,672.99 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರಗಳ ಅಂಕಿಅಂಶಗಳು ತಿಳಿಸಿವೆ.
ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯೂ ಹೂಡಿಕೆದಾರರ ಉತ್ಸಾಹ ಹೆಚ್ಚಿಸಿದೆ. ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.19ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 91.38 ಡಾಲರ್‌ಗೆ ತಲುಪಿತ್ತು.
4 ಲಕ್ಷ ಕೋಟಿ ಲಾಭ
ಷೇರುಪೇಟೆಯ ಭರ್ಜರಿ ಏರಿಕೆಯಿಂದ ಹೂಡಿಕೆದಾರರ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ₹3.49 ಲಕ್ಷ ಕೋಟಿ ಹೆಚ್ಚಳವಾಗಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಬುಧವಾರ ₹5,12,48,042.08 ಕೋಟಿಗೆ (5.54 ಟ್ರಿಲಿಯನ್ ಡಾಲರ್) ಏರಿಕೆಯಾಗಿದೆ.