ಸಿನಿಮಾ ಸುದ್ದಿ

'ದಕ್ಷ'ನಿಗೆ ಗಿನ್ನೆಸ್ ಗರಿ..?

Srinivasamurthy VN

ಬೆಂಗಳೂರು: ನಿರ್ದೇಶಕ ಎಸ್.ನಾರಾಯಣ್ ಮತ್ತು ನಟ ದುನಿಯಾ ವಿಜಿ ಜೋಡಿಯ ಬಹು ನಿರೀಕ್ಷಿತ 'ದಕ್ಷ' ಚಿತ್ರವು ಗಿನ್ನೆಸ್ ರೆಕಾರ್ಡ್‌ಗೆ ನಾಮನಿರ್ದೇಶನಗೊಂಡಿದೆ.

ಚಂಡ ಚಿತ್ರದ ಡಬ್ಬಿಂಗ್ ವಿವಾದದ ಬಳಿಕ ನಾನೊಂದು ತೀರ ನೀನೊಂದು ತೀರ ಎಂಬಂತ್ತಿದ್ದ ನಾರಾಯಣ್ ಮತ್ತು ದುನಿಯಾ ವಿಜಿ, ಇದೀಗ ದಕ್ಷ ಚಿತ್ರಕ್ಕಾಗಿ ತಮ್ಮ ವೈಮನಸ್ಸುಗಳನ್ನು ಮರೆತು ಮತ್ತೆ ಒಂದಾಗಿದ್ದಾರೆ. ಎಸ್. ನಾರಾಯಣ್ ಅವರು ಸಾಕಷ್ಟು ಮುತುವರ್ಜಿವಹಿಸಿ ನಿರ್ದೇಶಿಸಿರುವ ದಕ್ಷ ಚಿತ್ರದಲ್ಲಿ ನಟ ದುನಿಯಾ ವಿಜಿ ಕಮಾಂಡೋ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದೇ ಚಿತ್ರದಲ್ಲಿ ನಾರಾಯಣ್ ಪುತ್ರ ಪಂಕಜ್ ಮತ್ತು ನಟಿ ನೇಹಾ ಪಾಟೀಲ್ ದಂಪತಿಗಳಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಯೋತ್ಪಾದನೆ ಕುರಿತ ಕಥಾಹಂದರವುಳ್ಳ ದಕ್ಷ ಚಿತ್ರವನ್ನು ನಿರ್ದೇಶಕ ಎಸ್.ನಾರಾಯಣ್ ಅವರು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಿದ್ದು, ಚಿತ್ರವು ಒಟ್ಟು 2 ಗಂಟೆ 22 ನಿಮಿಷದ ಅವಧಿಯದ್ದಾಗಿದೆ. ಇದು ಇದೀಗ ದಾಖಲೆಯಾಗಿದ್ದು, ಇದೇ ಕಾರಣಕ್ಕಾಗಿ ಚಿತ್ರವು ಗಿನ್ನೆಸ್ ದಾಖಲೆಗೆ ನಾಮನಿರ್ದೇಶನಗೊಂಡಿದೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ ಬಳಿಕ ಒಂದೇ ಟೇಕ್‌ನಲ್ಲಿ ಚಿತ್ರದ ಚಿತ್ರೀಕರಣ ಮಾಡಿರುವುದು ಚಿತ್ರತಂಡದ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ದಕ್ಷ ಚಿತ್ರವು ಇದೇ ಫೆಬ್ರವರಿ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆಗಳಿದ್ದು, ಚಿತ್ರವು ಶೀಘ್ರದಲ್ಲಿ ಸೆನ್ಸಾರ್ ಅಂಗಳಕ್ಕೆ ಬರಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಒಟ್ಟಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟಿಗೆ ಕನ್ನಡ ಚಿತ್ರಗಳು ತಯಾರಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಹಿಂದೆಯೂ ಕೂಡ ನಟ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ಅಣಜಿ ನಾಗರಾಜ್ ಜೋಡಿ 'ಸುಗ್ರೀವ' ಚಿತ್ರದ ಮೂಲಕ ಇಂತಹುದೇ ದಾಖಲೆ ಮಾಡಿತ್ತು.

SCROLL FOR NEXT