ಸಿನಿಮಾ ಸುದ್ದಿ

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು

Harshavardhan M

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಮುಂಬೈ ಮೂಲದ ನಟಿ ಕಯಾದು ಲೋಹರ್ ತಾವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಇಚ್ಛಿಸುವುದಾಗಿ ಹೇಳಿದ್ದಾರೆ. 

ತಾವು ಹೀಗೆ ಬಂಡು ಒಂದೆರಡು ಚಿತ್ರಗಳಲ್ಲಿ ನಟಿಸಿಹೋಗಲು ಬರುತ್ತಿಲ್ಲ. ಬದಲಾಗಿ ತಮಗೆ ದಕ್ಷಿಣ ಭಾರತೀಯ ಚಿತ್ರರಂಗದ ಕುರಿತು ಒಲವು ಇರುವುದಾಗಿಯೂ ಅದರಿಂದಾಗಿ ತಾವು ಇಲ್ಲೆ ನೆಲೆ ಕಂಡುಕೊಳ್ಳಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ತಮ್ಮನ್ನು ಕನ್ನಡಿಗರು ನೋಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಕಯಾದು ಅವರು ಮೂಲತಃ ಮಾಡೆಲ್ ಆಗಿದ್ದು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೋರಂಜನ್ ಅವರ ಮುಗಿಲ್ ಪೇಟೆ ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ತಮಗೆ ಕೆಲ ಹಾಡುಗಳು, ರೊಮ್ಯಾಂಟಿಕ್ ಸನ್ನಿವೇಶಗಳು ಇರಬಹುದು ಎಂದುಕೊಂಡಿದ್ದರಂತೆ. ಆದರೆ ಸಿನಿಮಾ ಸೆಟ್ ಗೆ ಮೊದಲ ಬಾರಿ ಕಾಲಿಟ್ಟ ತಕ್ಷಣವೇ ತಾವು ಅಂದುಕೊಂಡಿದ್ದು ಸುಳ್ಳೆಂದು ಅರಿವಾಯಿತೆಂದು ಅವರು ಅನುಭವ ಹಂಚಿಕೊಂಡಿದ್ದಾರೆ.

ಮನೋರಂಜನ್ ಅವರಲ್ಲಿ ತಾವು ರವಿಚಂದ್ರನ್ ಅಂಶವನ್ನು ಕಂಡಿದ್ದಾಗಿ ಅವರು ಹೇಳಿದ್ದಾರೆ. ಕ್ಯಾಮೆರಾ ಮುಂದೆ ನಟಿಸುವಾಗ ಮನೋರಂಜನ್ ಅವರು ನೀಡಿದ ಪ್ರತಿ ಸಲಹೆ ಕೂಡಾ ನೆರವಾಯಿತು ಎನ್ನುತ್ತಾರೆ ಕಯಾದು. ಮುಂದಿನ ದಿನಗಳಲ್ಲಿ ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಭರತ್ ನಾವುಂದ ನಿರ್ದೇಶಿಸಿರುವ ಮುಗಿಲ್ ಪೇಟೆ ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ.

SCROLL FOR NEXT