ರಂಗ ನಾಟಕವನ್ನು ಬೆಳ್ಳಿತೆರೆಗೆ ಅಳವಡಿಸಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ನಾಟಕವೊಂದನ್ನು ಸಿನೆಮಾವಾಗಿಸುವ ನಾಜೂಕು ಅದರಲ್ಲಿ ಕಾಣೆಯಾಗಿತ್ತು. ಈ ವಾರದ ಎನ್.ಎಸ್. ರಾವ್ ರಚಿಸಿರುವ ‘ರೊಟ್ಟಿ ಋಣ’ ನಾಟಕ ಆಧಾರಿತ '1944' ಸಿನೆಮಾವನ್ನು ಎಸ್ ಬದ್ರಿನಾಥ್ ನಿರ್ದೇಶಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ಸಾಮಾನ್ಯ ನಾಗರಿಕನೊಬ್ಬನ ಸಣ್ಣ ಅಧ್ಯಾಯದ ಕಥಾಹಂದರ ಹೊಂದಿರುವ ಈ ಸಿನೆಮಾ ಇಂದಿನ ಪ್ರೇಕ್ಷಕನನ್ನು ಚಳುವಳಿಯ ಕಾಲಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆಯೇ?
ಉತ್ತರ ಕರ್ನಾಟಕದ ಗ್ರಾಮವೊಂದರಲ್ಲಿ ವಾಸವಾಗಿರುವ ಗಿರಿಜಮ್ಮನಿಗೆ (ಶ್ರುತಿ) ದೇಶದ ಸ್ವಾತಂತ್ರ್ಯದ ಬಗ್ಗೆ ಕಾಳಜಿ, ಬ್ರಿಟಿಷರ ಬಗ್ಗೆ ಕೋಪ ಆದರೆ ಗಿರಿಜಮ್ಮನ ಪತಿ ವಿಷಕಂಠಯ್ಯ (ಸುಚೇಂದ್ರ ಪ್ರಸಾದ್) ಬ್ರಿಟಿಷರ ಕಂಪನಿಯಲ್ಲಿ ಪೊಲೀಸ್ ಅಧಿಕಾರಿ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಗಿರಿಜಮ್ಮನಿಗೆ ತನ್ನ ಗಂಡನನ್ನು ಚಳುವಳಿ ಹೋರಾಟಗಾರರು ಹಿಂಸಿಸಿ ಸುಡುವ ಕನಸಗಳು ಬೀಳುತ್ತಿರುತ್ತವೆ. ಗಂಡ-ಸಂಸಾರ ಹಾಗು ಪರಕೀಯರಿಂದ ದೇಶದ ಬಿಡುಗಡೆಯ ತೊಳಲಾಟದ ನಡುವೆ ಸಿಲುಕಿ ಒದ್ದಾಡುತ್ತಿರುವ ಗಿರಿಜಮ್ಮನ ಮನೆಗೆ ಚಳುವಳಿಕಾರ ದುಗ್ಗಪ್ಪ(ನವೀನ್ ಕೃಷ್ಣ) ಕಾರಾಗೃಹದಿಂದ ತಪ್ಪಿಸಿಕೊಂಡು ಆಶ್ರಯ ಕೇಳಿ ಹೊಕ್ಕುತ್ತಾನೆ. ತನ್ನ ಗಂಡ ಹೊರಗೆ ಹುಡುಕುತ್ತಿದ್ದರೆ, ದುಗ್ಗಪ್ಪನಿಗೆ ರೊಟ್ಟಿ-ಊಟ ನೀಡಿ ಗಿರಿಜಮ್ಮ ಉಪಚರಿಸುತ್ತಾಳೆ. ಇಂತಹ ಒಂದು ಮುಖ್ಯ ಸಂಘರ್ಷವನ್ನು ವಿಷಯವಾಗಿ ಈ ಸಿನೆಮಾ ಬಳಸಿಕೊಂಡಿದ್ದರು, ರಂಗಭೂಮಿಯ ಕೃತಿಗೆ ಬಹಳ ಪರಿಣಾಮಕಾರಿ ಎಂದೆನಿಸಿದರೂ, ಸಿನಿಮೀಯ ವಾತಾವರಣದಲ್ಲಿ ಸೃಷ್ಟಿಸಬಹುದಾಗಿದ್ದ ಉಪಕಥೆಗಳು-ಪೂರಕ ಘಟನೆಗಳು ಯಾವುವೂ ಕಾಣದೆ ಸಂಭಾಷಣೆಯ ಮೇಲಷ್ಟೇ ನಿಂತಿರುವುದರಿಂದ ಇದು ರಂಗಭೂಮಿಯಿಂದ ಸಿನೆಮಾಗೆ ಜಿಗಿದ ಅನುಭವವೇ ಪ್ರೇಕ್ಷಕನಿಗೆ ದಕ್ಕುವುದಿಲ್ಲ.
ಆಶ್ರಯ ಪಡೆದ ಸಮಯದಲ್ಲಿ ದುಗ್ಗಪ್ಪ ಗಿರಿಜಮ್ಮನಿಗೆ ತನ್ನ ಪೂರ್ವ ಕಥೆಯನ್ನು ಹೇಳುತ್ತಾನೆ. (ಮೂಲ ನಾಟಕದಿಂದ ತುಸು ಡೀವಿಯೇಟ್ ಆಗಿದ್ದು?). ತನ್ನ ತಂದೆ ಬ್ರಿಟಿಷರ ಬಾವುಟದ ಬದಲು ಭಾರತದ ಬಾವುಟ ಹಾರಿಸಿದ್ದಕ್ಕೆ ಪೊಲೀಸರಿಂದ ಹತ್ಯೆಯಾದದ್ದು, ಮುಂದೆ ತಾನು ಚಳುವಳಿಕಾರನಾಗಿದ್ದರಿಂದ ಪೊಲೀಸರು ತನ್ನ ಹುಡುಕಿ ಬಂದು ತಾಯಿಯನ್ನು ಕೊಂದದ್ದು ನಂತರ ಬಂಧನವಾದದ್ದು. ಈ ಭಾಗದಲ್ಲಿ ಕೂಡ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳದ ನಿರ್ದೇಶಕ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಡೆದಿರಬಹುದಾದ ಘಟನೆಗಳ ಬಗ್ಗೆ ಪ್ರೇಕ್ಷಕನಲ್ಲಿ ಉದ್ವೇಗ ಸೃಷ್ಟಿಸಲು ವಿಫಲರಾಗುತ್ತಾರೆ. ಮಾತುಗಳಲ್ಲಿ ಸಂವಹನ ಮಾಡುವಂತಯೇ ದೃಶ್ಯಗಳನ್ನು ಕಟ್ಟುತ್ತ ಹೋಗಿರುವುದು ನೀರಸವಾಗಿದೆ.
ತನ್ನಮ್ಮನನ್ನು ಕೊಂದ ಅಧಿಕಾರಿ ಗಿರಿಜಮ್ಮನ ಪತಿಯೇ ಎಂಬ ವಿಷಯ ದುಗ್ಗಪ್ಪನಿಗೆ ತಿಳಿಯದೆ ಅವನನ್ನು ಕೊಲ್ಲುವುದಾಗಿ ಗಿರಿಜಮ್ಮನ ಎದುರು ಶಪಥ ಮಾಡುತ್ತಾನೆ. ವಿಷಕಂಠಯ್ಯ ಮನೆಗೆ ಆಗಮಿಸಿದಾಗ ದುಗ್ಗಪ್ಪ ತಪ್ಪಿಸಿಕೊಂಡರು, ಅನುಮಾನದ ವಾಸನೆ ವಿಷಕಂಠಯ್ಯನಿಗೆ ಬಡಿಯದೇ ಇರುವುದಿಲ್ಲ. ಮುಂದೇನು?
ಬೆಳ್ಳಿತೆರೆಯ ಮೇಲೆ ರಂಗ ನಾಟಕದ ಅಳವಡಿಕೆ ಮಾಧ್ಯಮಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಬದಲಾಗದೆ ಇರುವುದು ಒಂದು ತೊಡಕಾದರೆ, ಮುಖ್ಯ ಪಾತ್ರಧಾರಿ ನವೀನ್ ಕೃಷ್ಣ ಅವರ ನಟನೆ ಕೂಡ ಅಗತ್ಯ ಭಾವನೆಗಳನ್ನು ಕೆರಳಿಸಲು ವಿಫಲವಾಗಿದೆ. ಇಡೀ ಸಿನೆಮಾದ ಟೋನ್ ಅಗತ್ಯಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿದ್ದು, ಮೂಲ ಸಂಘರ್ಷಕ್ಕೆ ಮತ್ತು ಚಳುವಳಿಯ ಅಂದಿನ ಮನೋಭಾವಕ್ಕೆ ನೈಜ ರೂಪದಲ್ಲಿ ಕನ್ನಡಿ ಹಿಡಿಯಲು ಸಿನೆಮಾ ವಿಫಲವಾಗಿದೆ. ಶ್ರುತಿ ಅವರ ನಟನೆ ಮತ್ತು ಉತ್ತರ ಕರ್ನಾಟಕದ ಭಾಷೆಯ ಬಳಕೆ ಸಿನೆಮಾವನ್ನು ತುಸು ಸರಿದಾರಿಯಲ್ಲಿ ಹಿಡಿದಿಡಲು ಸಹಕರಿಸಿದೆ. ಸುಚೇಂದ್ರ ಪ್ರಸಾದ್ ನಟನೆ ಕೂಡ ಪರವಾಗಿಲ್ಲ. ಹಿನ್ನಲೆ ಸಂಗೀತ ಒಂದು ಮಟ್ಟಕ್ಕೆ ದೃಶ್ಯದಲ್ಲಿ ಕಾಣೆಯಾದ ಭಾವನೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದರು ರಾಜೇಶ್ ರಾಮನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳ ಅವಶ್ಯಕತೆಯೇ ಇರಲಿಲ್ಲ ಎಂದೆನಿಸದೆ ಇರದು. ಛಾಯಾಗ್ರಹಣ-ಲೈಟಿಂಗ್ ನಲ್ಲಿ ವಿಶೇಷತೆಯಿದ್ದು, ಕತ್ತಲ ಸನ್ನಿವೇಶಗಳಲ್ಲಿ ಚಿತ್ರೀಕರಿಸಿರುವ ದೃಶ್ಯಗಳಲ್ಲಿ ನಿರ್ದೇಶಕ-ಛಾಯಾಗ್ರಾಹಕ ಎಸ್ ಭದ್ರಿನಾಥ ಅವರ ಕುಸುರಿ ಕೆಲಸ ಎದ್ದು ಕಾಣುವಂತೆ ಮಾಡುತ್ತದೆ.
ಒಳ್ಳೆಯ ಸಂಘರ್ಷವಿರುವ ಕಥೆಯನ್ನು ಆಯ್ದುಕೊಂಡರು, ಸ್ವಾತಂತ್ರ್ಯ ಚಳುವಳಿಯ ಕಥೆಯನ್ನು ಇಂದಿನ ಪೀಳಿಗೆಗೆ ಮತ್ತೆ ತಿಳಿ ಹೇಳುವ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದರು, ಸಿನೆಮಾ ಮಾದ್ಯಮಕ್ಕೆ ರಂಗ ನಾಟಕವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗದೆ, ಭಾವನಾತ್ಮಕತೆಯನ್ನು ಮೀರಿ ಅಂದಿನ ಚಳುವಳಿಯ ಸ್ವರೂಪವನ್ನು ನೈಜವಾಗಿ ಕಟ್ಟಿಕೊಡಲಾಗದೆ, ಎಲ್ಲರಿಂದಲೂ ಅತ್ಯುತ್ತಮ ನಟನೆಯನ್ನು ತೆಗೆಯಲು ಸಾಧ್ಯವಾಗದೆ ಸಾಧಾರಣ ಸಿನೆಮಾವೊಂದನ್ನು ನೀಡಿದ್ದಾರೆ ನಿರ್ದೇಶಕ ಬದ್ರಿನಾಥ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics