

ಯಶ್ ನಟನೆಯ ‘ಟಾಕ್ಸಿಕ್’ ಗೀತು ಮೋಹನ್ ದಾಸ್ ನಿರ್ದೇಶನದ ರೆಟ್ರೋ ಆಕ್ಷನ್-ಸೈಕಲಾಜಿಕಲ್ ಥ್ರಿಲ್ಲರ್. ಗೋವಾ, ಪೋರ್ಚುಗೀಸ್ ಆಳ್ವಿಕೆ, ಡ್ರಗ್ಸ್, ಅಂಡರ್‌ವರ್ಲ್ಡ್ ನಡುವೆ ರಾಯನ ಏಳು-ಬೀಳು, ಅಕ್ಕ ಗಂಗಾ, ನಾದಿಯಾ, ರೆಬೆಕಾ, ಟಿಕೆಟ್ ಪಾತ್ರಗಳ ಭಾವನಾತ್ಮಕ ಹೂರಣ, ಹಾಲಿವುಡ್ ಮಟ್ಟದ ವಿಶುವಲ್ಸ್, ಭರ್ಜರಿ ಫೈಟ್, ಸಂಗೀತ, ಅಶ್ಲೀಲತೆ, ಸೆಕ್ಸ್-ಡ್ರಗ್ಸ್ ಮಿಶ್ರಣದಿಂದ ಅದರ ಟ್ಯಾಗ್ ಲೈನ್ ಹೇಳುವಂತೆ ವಯಸ್ಕರಿಗೆ ತಯಾರಾದ ಸಿನಿಮಾ.
ಗೀತು ಮೋಹನ್ ದಾಸ್ ನಿರ್ದೇಶಿಸಿ ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿರುವ ರಾಕಿಂಗ್ ಸ್ಟಾರ್' ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ ಆಗಿದೆ. 2022ರಲ್ಲಿ ತೆರೆಕಂಡ 'ಕೆಜಿಎಫ್ ಚಾಪ್ಟರ್ 2 ಬಳಿಕ ಯಶ್ ತಮ್ಮ ನಾಲ್ಕು ವರ್ಷಗಳ ಸಂಪೂರ್ಣ ಸಮಯವನ್ನು 'ಟಾಕ್ಸಿಕ್' ಚಿತ್ರಕ್ಕಾಗಿ ಮೀಸಲಿಟ್ಟಿದ್ದರು. ಈ ಬಾರಿ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ಹಾಲಿವುಡ್ ಮಟ್ಟದಲ್ಲೂ ಸದ್ದು ಮಾಡುವ ಕನಸನ್ನು ಅವರು ಹೊತ್ತಿದ್ದರು.
ಮೇಲ್ನೋಟಕ್ಕೆ ಇದೊಂದು ರೆಟ್ರೋ ಕಾಲಘಟ್ಟದ ಆಕ್ಷನ್ ಥ್ರಿಲ್ಲರ್ ಎನಿಸಿದರೂ, ಸೈಕಲಾಜಿಕಲ್ ಥ್ರಿಲ್ಲರ್ ಎನ್ನಬಹುದು. ಇದರಲ್ಲಿ ಹಣ, ಅಧಿಕಾರದ ಮೇಲೆ ಆಸೆ, ಹೆಣ್ಣಿನ ಮೋಹ, ನಿಸ್ವಾರ್ಥ ಪ್ರೀತಿ, ತಂದೆ-ಮಗನ ಬಾಂಧವ್ಯ, ಅಕ್ಕ-ತಮ್ಮ ಅನುಬಂಧ, ತ್ರಿಕೋನ ಪ್ರೇಮಕಥೆ, ಅಂಡರ್‌ವರ್ಲ್ಡ್.. ಹೀಗೆ ಎಲ್ಲವೂ ಅಡಗಿದೆ. ಇಲ್ಲಿ ಎಲ್ಲವನ್ನೂ ಪಡೆದುಕೊಂಡು ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗುವ ರಾಯ, ಕೊನೆಗೆ ಹೇಗೆ ಬೆಲೆಕಟ್ಟಲಾಗದ ಸಂಬಂಧಗಳನ್ನೇ ಕಳೆದುಕೊಳ್ಳುತ್ತಾನೆ ಎಂಬುದೇ ಸಿನಿಮಾ ಕತೆಯಾಗಿದೆ.
'ಇದು ಚಂದಮಾಮ ಕಥೆ ಅಲ್ಲ. ಇದು ವಯಸ್ಕರಿಗಿರುವ ಕಥೆ ಎಂದು ಯಶ್ ಹೇಳಲಾರಂಭಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ(1947) ಕಥೆ ತೆರೆದಿಕೊಳ್ಳುತ್ತದೆ. ಸ್ವಾತಂತ್ರ್ಯ ಸಿಕ್ಕರೂ ಗೋವಾ ಇನ್ನೂ ಪೋರ್ಚುಗೀಸ್ ಆಡಳಿತದಲ್ಲಿದೆ. ಈ ಪ್ರದೇಶವು ಸಾಲ್ವಡಾರ್ (ಡ್ಯಾರೆಲ್ ಡಿ‘ಸಿಲ್ವ) ನಿಯಂತ್ರಣದಲ್ಲಿರುತ್ತದೆ. ಡ್ರಗ್ಸ್ ಇವರ ಉದ್ಯಮ. ರಾಯ(ಯಶ್) ಮತ್ತು ಗಂಗಾ (ನಯನ್‌ತಾರಾ) ಮುಧೋಳದ ದಳವಾಯಿಯ ಮಕ್ಕಳು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಪ್ರೀತಿಯೂ ಇವರಿಗೆ ಸಿಕ್ಕಲ್ಲ. ಇದು ರಾಯ ಮತ್ತು ಗಂಗಾ ಅವರ ಹಿನ್ನೆಲೆ.
ತಮ್ಮನನ್ನು ಚೆನ್ನಾಗಿ ಬೆಳೆಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕು ಎಂಬುದು ಗಂಗಾಳ ಆಸೆ. ಅದನ್ನು ಆಕೆ ನೆರವೇರಿಸುತ್ತಾಳೆ ಕೂಡ. ಪೋರ್ಚುಗೀಸರ ಆಳ್ವಿಕೆಯಲ್ಲಿದ್ದ ಗೋವಾದಲ್ಲಿರುವ ಈ ಅಕ್ಕ-ತಮ್ಮ, ತಮ್ಮದೇ ಆದ ದೊಡ್ಡ ಸಾಮ್ರಾಜ್ಯ ಕಟ್ಟಬೇಕೆಂಬ ಹಪಾಹಪಿ ಹೊಂದಿರುತ್ತಾರೆ. ಅಪ್ಪನನ್ನು ಕೊಂದವರ ವಿರುದ್ಧದ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಮಕ್ಕಳು. ಸಾಲ್ವಡಾರ್ ಜೊತೆ ಪಾಲುದಾರರಾಗಿ ಸೇರಿಕೊಂಡು ತಮ್ಮ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಾರೆ. ಸಾಲ್ವಡಾರ್ ಮಗಳಾದ ರೆಬೆಕಾಳನ್ನು(ತಾರಾ ಸುತಾರಿಯಾ) ಮದುವೆಯಾಗುವ ರಾಯ, ನಗರಕ್ಕೆ ಬಂದ ಸರ್ಕಸ್ ಕಂಪನಿಯ ಮುಖ್ಯಸ್ಥೆ ನಾದಿಯಾ (ಕಿಯಾರಾ ಅಡ್ವಾಣಿ) ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ರಾಯನಿಗೆ ಹಣ ಮತ್ತು ಹೆಣ್ಣಿನ ಮೇಲೆ ಅತಿಯಾದ ಮೋಹ. ಅದು ಕೊನೆಗೆ ಆತನನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದೇ ಚಿತ್ರದ ಕಥಾಹಂದರ.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಚಿತ್ರದಲ್ಲಿ ರಾಯ ಮತ್ತು ಆತನ ಮಗ ಟಿಕೆಟ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಗೋವಾ ಸಿಟಿಗೆ ಮಹಾರಾಯ ಆಗುವ ಪಾತ್ರಕ್ಕೆ ಯಶ್ ಜೀವ ತುಂಬಿದ್ದಾರೆ. ಈ ಎರಡೂ ಪಾತ್ರಗಳು ಕಥೆಗೆ ಪರಸ್ಪರ ಭಿನ್ನವಾದ ಶಕ್ತಿಯನ್ನು ಒದಗಿಸುತ್ತವೆ. ರಾಯ ಸಂಪೂರ್ಣವಾಗಿ ಗ್ಯಾಂಗ್‌ಸ್ಟರ್ ಜಗತ್ತಿನಲ್ಲಿ ಬೇರೂರಿದ ಪಾತ್ರವಾದರೆ, ಟಿಕೆಟ್ ಪಾತ್ರವು ಕಥೆಗೆ ಭಾವನಾತ್ಮಕ ಆಯಾಮವನ್ನು ತಂದುಕೊಡುತ್ತದೆ. ರಾಯನ ಹತ್ತಾರು ಶೇಡ್ ಗಳನ್ನು ಯಶ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಟಾಕ್ಸಿಕ್ ಒಬ್ಬ ಡಾನ್‌ನ ಏಳು-ಬೀಳುಗಳ ಕಥೆ ಮಾತ್ರ ಅಲ್ಲ. ಹೊರಗೆ ಅವನು ನಿರ್ಮಿಸಿಕೊಂಡಿರುವ ಜಗತ್ತಿಗಿಂತ, ತನ್ನೊಳಗೆ ಸಿಕ್ಕಿಹಾಕಿಕೊಂಡಿರುವ ಜಗತ್ತಿನ ಕಥೆ ಇದು. ಅವನು ತನ್ನ ಶತ್ರುಗಳನ್ನು ಕೊಲ್ಲಬಹುದು. ಆದರೆ ತನ್ನೊಳಗೆ ಬದುಕುತ್ತಿರುವ ಭೂತಕಾಲ ಎಂಬ ಮಹಾವೈರಿಯನ್ನು ಕೊಲ್ಲಲಾರ ಎಂಬುದನ್ನು ತೋರಿಸುತ್ತದೆ.
ರಾಯನ ಪ್ರೇಯಸಿ ನಾದಿಯಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಎಮೋಷನಲ್ ಸನ್ನಿವೇಶಗಳಲ್ಲಿ ಕಿಯಾರಾ ಅಡ್ವಾಣಿ ತಮ್ಮ ಬೆಸ್ಟ್ ನೀಡಿದ್ದಾರೆ. ರಾಯನ ಅಕ್ಕ ಗಂಗಾ ಪಾತ್ರದಲ್ಲಿ ನಯನತಾರಾ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಗಂಗಾ ಪಾತ್ರಕ್ಕೆ ಒಂದು ಗತ್ತು ಇದೆ. ಅದನ್ನ ನೀಟ್ ಆಗಿ ನಿರ್ವಹಿಸಿದ್ದಾರೆ ನಯನತಾರಾ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ನಯನತಾರಾ ಪ್ರತಿ ಫ್ರೇಮ್‌ನಲ್ಲೂ ಚೆಂದ ಕಾಣುತ್ತಾರೆ. ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಶಿ ಅಬ್ಬರಿಸಿದ್ದಾರೆ. ರಾಯನ ಪತ್ನಿ ಮಿಲಿಸ್ಸಾ ಪಾತ್ರದಲ್ಲಿ ರುಕ್ಮಿಣಿ ವಸಂತ್ ಸ್ಕ್ರೀನ್ ಪ್ರೆಸೆನ್ಸ್ ಉತ್ತಮವಾಗಿದೆ.
‘ಟಾಕ್ಸಿಕ್’ ಚಿತ್ರದ ಪ್ರತಿ ಫ್ರೇಮ್ ಸಹ ರಿಚ್ ಆಗಿದೆ. ವಿಶುವಲ್ಸ್, ಲೈಟಿಂಗ್ ಮತ್ತು ಕ್ಯಾಮರಾವರ್ಕ್ ಉತ್ತಮವಾಗಿ ಮೂಡಿಬಂದಿದೆ. ‘ತಬಾಹಿ’ ಹಾಗೂ ‘ಮನಮೋಹಕ’ ಹಾಡುಗಳು ಗುನುಗುವಂತಿದೆ. ರವಿಬಸ್ರೂರು ಹಿನ್ನೆಲೆ ಸಂಗೀತ ಕೊಂಚ ಅಬ್ಬರವೆನಿಸುತ್ತದೆ. ಕೆಲ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಕೆಲ ಫೈಟ್ ದೃಶ್ಯಗಳಂತೂ ವಿಪರೀತವಾಗಿ ಎಳೆದಂತಿದೆ. ಕಥೆ ಆರಂಭವಾದ ಕೆಲ ಸಮಯದವರೆಗೆ ಮೂಲ ಸ್ವರೂಪವೇನು ಎಂಬುದು ಸ್ಪಷ್ಟವಾಗುವುದಿಲ್ಲ, ನಿಧಾನವಾಗಿ ತೆರೆದುಕೊಳ್ಳುತ್ತದೆ. ಚಿತ್ರದ ಕಥೆ ಹಾಗೂ ಬರವಣಿಗೆಯ ಜವಾಬ್ದಾರಿ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಯಶ್ ಮೇಲಿತ್ತು. ಕಥೆ ಹಾಗೂ ಬರವಣಿಯಲ್ಲಿ ಇನ್ನೂ ಗಟ್ಟಿತನ ಬೇಕಿತ್ತು. ಒಂದಷ್ಟು ದೃಶ್ಯಗಳಲ್ಲಿ ಅಗತ್ಯವಾದ ವಿವರಣೆ ಮಿಸ್ ಆಗಿದೆ ಎನಿಸುತ್ತದೆ. ಸಿನಿಮಾದ ಅವಧಿ ಕೊಂಚ ತಗ್ಗಿದ್ದರೆ ಪ್ಲಸ್ ಆಗುವ ಸಾಧ್ಯತೆ ಇತ್ತು. ಸಾಹಸ ದೃಶ್ಯಗಳಿಗೆ ಹೆಚ್ಚಿನ ಸಮಯ ಮೀಸಲಾಗಿದೆ.
ಕಥೆಯಲ್ಲಿ ಲಾಜಿಕ್ ಹುಡುಕದೆ ನೋಡಿದರೆ ಈ ಸಿನಿಮಾ ಆಕ್ಷನ್ ಪ್ರಿಯರಿಗೆ ಮನರಂಜನೆ ನೀಡುತ್ತದೆ. ಹಾಲಿವುಡ್ ಶೈಲಿಯ ವಿಶುವಲ್ಸ್, ಭರ್ಜರಿ ಆಕ್ಷನ್ ಸನ್ನಿವೇಶಗಳನ್ನ ಇಷ್ಟಪಡುವವರಿಗೆ ‘ಟಾಕ್ಸಿಕ್’ ಹೇಳಿಮಾಡಿಸಿದ ಚಿತ್ರ. ಒಟ್ಟಾರೆ ಯಶ್ ಅಭಿಮಾನಿಗಳಿಗೆ ಸಿನಿಮಾ ರಸದೌತಣ ಬಡಿಸಲಿದೆ.
ಸಿನಿಮಾ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್‌ದಾಸ್
ತಾರಾಗಣ: ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್ ಮತ್ತು ಅಕ್ಷಯ್ ಒಬೆರಾಯ್