ಮೋದಿ-ಸ್ಟಾರ್ಮರ್ 
ಅಂಕಣಗಳು

ಲೇಬರ್ ಪಕ್ಷ- ಭಾರತದ ನಡುವಿನ ಹಳೆಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರದ ನವಯುಗ ಸ್ಥಾಪಿಸಬಲ್ಲರೇ ಮೋದಿ-ಸ್ಟಾರ್ಮರ್? (ಜಾಗತಿಕ ಜಗಲಿ)

ಆ ದಿನಗಳಿಗೂ ಇಂದಿಗೂ ಭಾರತ - ಯುಕೆ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2022ರಲ್ಲಿ ಆರ್ಥಿಕತೆಯಲ್ಲಿ ಬ್ರಿಟನನ್ನು ಹಿಂದಿಕ್ಕಿ, ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು.

ಜುಲೈ 6ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೂತನವಾಗಿ ಚುನಾಯಿತರಾದ ಬ್ರಿಟಿಷ್ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರೊಡನೆ ಮಾತುಕತೆ ನಡೆಸಿದರು. ನರೇಂದ್ರ ಮೋದಿಯವರು ಭಾರತ ಮತ್ತು ಯುಕೆ ಎರಡಕ್ಕೂ ಪ್ರಯೋಜನಕಾರಿಯಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಪೂರೈಸುವ ಕುರಿತು ಸ್ಟಾರ್ಮರ್ ಅವರೊಡನೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಕ್ತ ವ್ಯಾಪಾರ ಒಪ್ಪಂದ (ಫ್ರೀ ಟ್ರೇಡ್ ಎಫ್‌ಟಿಎ): ಎಫ್‌ಟಿಎ ಎಂದರೆ, ಎರಡು ದೇಶಗಳ ನಡುವೆ ಸರಕು ಮತ್ತು ಸೇವೆಗಳ ವ್ಯಾಪಾರವನ್ನು ತೆರಿಗೆ ಮುಕ್ತಗೊಳಿಸುವುದು, ಅಥವಾ ತೆರಿಗೆ ವಿನಾಯಿತಿ ನೀಡುವುದು ಮತ್ತು ನಿರ್ಬಂಧಗಳನ್ನು ಕಡಿಮೆಗೊಳಿಸುವುದಾಗಿದೆ. ಎಫ್‌ಟಿಎ ಮೂಲಕ, ಉದ್ಯಮಗಳಿಗೆ ತಮ್ಮ ಉತ್ಪನ್ನಗಳನ್ನು ಗಡಿಗಳಾಚೆಗೂ ಮಾರಾಟ ಮಾಡುವುದು ಸುಲಭ ಮತ್ತು ಕಡಿಮೆ ವೆಚ್ಚದಾಯಕವಾಗಿಸುತ್ತದೆ. ಇದರಿಂದಾಗಿ ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ಲಭಿಸುತ್ತದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಮತ್ತು ಕಡಿಮೆ ದರಕ್ಕೆ ಸರಕುಗಳು ಲಭಿಸುತ್ತವೆ.

ಪ್ರಧಾನಿ ನರೇಂದ್ರ ಮೋದಿಯವರು ಸ್ಟಾರ್ಮರ್ ಅವರಿಗೆ ನೂತನವಾಗಿ ಪ್ರಧಾನ ಮಂತ್ರಿಯಾಗಿ ಚುನಾಯಿತರಾದುದಕ್ಕೆ ಮತ್ತು ಚುನಾವಣೆಯಲ್ಲಿ ಅವರ ಲೇಬರ್ ಪಕ್ಷದ ಭಾರೀ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಮಾತುಕತೆಯ ಸಂದರ್ಭದಲ್ಲಿ, ಉಭಯ ನಾಯಕರೂ ಭಾರತ ಮತ್ತು ಯುಕೆ ನಡುವಿನ ಸುದೀರ್ಘ ಸಂಬಂಧವನ್ನು ಸ್ಮರಿಸಿದರು ಎನ್ನಲಾಗಿದೆ. ಅದರೊಡನೆ, ಎರಡು ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು (ಕಾಂಪ್ರಹೆನ್ಸಿವ್ ಸ್ಟ್ರಾಟಜಿಕ್ ಪಾರ್ಟ್‌ನರ್ಶಿಪ್) ಇನ್ನಷ್ಟು ಬಲಪಡಿಸುವ ಕುರಿತು ಬದ್ಧತೆ ಪ್ರದರ್ಶಿಸಿದ್ದಾರೆ.

ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ: ಇದು ಎರಡು ರಾಷ್ಟ್ರಗಳ ನಡುವಿನ ಆಳವಾದ ಮತ್ತು ವಿಸ್ತಾರವಾದ ಸಂಬಂಧವಾಗಿದೆ. ಇದು ವ್ಯಾಪಾರ ಸಹಕಾರ, ರಕ್ಷಣೆ, ತಂತ್ರಜ್ಞಾನ, ಶಿಕ್ಷಣ, ಸಂಸ್ಕೃತಿ, ಪರಿಸರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರವನ್ನು ಒಳಗೊಂಡಿರುತ್ತದೆ. ಈ ಸಹಭಾಗಿತ್ವ ಪರಸ್ಪರ ಸಂಬಂಧವನ್ನು ಬಲಪಡಿಸುವ, ಆರ್ಥಿಕ ಪ್ರಗತಿಯನ್ನು ವೇಗಗೊಳಿಸುವ, ಮತ್ತು ಜಾಗತಿಕ ಸವಾಲುಗಳನ್ನು ಜೊತೆಯಾಗಿ ಎದುರಿಸುವ, ಪರಸ್ಪರರ ಕುರಿತು ಉನ್ನತ ಮಟ್ಟದ ನಂಬಿಕೆ ಮತ್ತು ಬದ್ಧತೆ ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ.

ಯುಕೆಯ ಸಮಾಜ, ಆರ್ಥಿಕತೆ, ಮತ್ತು ರಾಜಕಾರಣಕ್ಕೆ ಅನಿವಾಸಿ ಭಾರತೀಯರು ನೀಡುತ್ತಿರುವ ಕೊಡುಗೆಗಳನ್ನು ಉಭಯ ನಾಯಕರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಯುಕೆ ಮತ್ತು ಭಾರತದ ಜನರ ನಡುವೆ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಕುರಿತು ಇಬ್ಬರು ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರು ಸ್ಟಾರ್ಮರ್ ಅವರನ್ನು ಶೀಘ್ರವಾಗಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದು, ಉಭಯ ನಾಯಕರೂ ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಯುಕೆ ಪ್ರಧಾನ ಮಂತ್ರಿಯಾಗಿ ಚುನಾಯಿತರಾದುದಕ್ಕೆ ಸ್ಟಾರ್ಮರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಭಾರತ ಮತ್ತು ಯುಕೆ ನಡುವೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಮತ್ತು ಆರ್ಥಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವುದರಿಂದ ಭಾರತ ಮತ್ತು ಯುಕೆ ಜನರಿಗೆ ಮಾತ್ರವಲ್ಲದೆ, ಜಗತ್ತಿಗೂ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಕಾಶ್ಮೀರದ ಕುರಿತು ಲೇಬರ್ ಪಕ್ಷದ ವಿವಾದಗಳ ಇತಿಹಾಸ

ಲೇಬರ್ ಪಕ್ಷದ ಕ್ಲೆಮೆಂಟ್ ಆ್ಯಟ್ಲಿಯವರು ಯುಕೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, 1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿತ್ತು. ಈ ಕಾರಣದಿಂದಾಗಿ, ಭಾರತೀಯರು ಸಾಂಪ್ರದಾಯಿಕವಾಗಿ ಲೇಬರ್ ಪಕ್ಷವನ್ನು ಇಷ್ಟಪಡುತ್ತಿದ್ದರು.

ಆದರೆ, 1945ರಿಂದ 1947ರ ನಡುವೆ ಅದೇ ಕ್ಲೆಮೆಂಟ್ ಆ್ಯಟ್ಲಿಯವರ ಆಡಳಿತದ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಮೊದಲ ನಿರ್ಣಯಗಳನ್ನು ಕೈಗೊಂಡಿತ್ತು. ಈ ನಿಲುವುಗಳು ಭಾರತದ ಬದಲಿಗೆ ಪಾಕಿಸ್ತಾನಕ್ಕೆ ಪೂರಕವಾಗಿದ್ದವು.

ಇತ್ತೀಚಿನ ಸಮಯದಲ್ಲಿ, ಲೇಬರ್ ಪಕ್ಷದೊಡನೆ ಭಾರತದ ಸಂಬಂಧ ಧನಾತ್ಮಕ ಮತ್ತು ಋಣಾತ್ಮಕತೆಗಳ ಮಿಶ್ರಣದಂತಾಗಿದೆ. 1997ರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಸ್ವಾತಂತ್ರ್ಯದ 50ನೇ ವರ್ಷಾಚರಣೆಗೆ ಇಂಗ್ಲೆಂಡಿನ ರಾಣಿ ಎಲಿಜಬೆತ್ 2 ಅವರು ಭೇಟಿ ನೀಡಿದ್ದರು. ಆದರೆ, ರಾಣಿಯ ಭೇಟಿಗಿಂತಲೂ ಹೆಚ್ಚಾಗಿ, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ನಡೆಸುವ ಕುರಿತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ರಾಬಿನ್ ಕುಕ್ ಅವರ ಹೇಳಿಕೆಗಳು ಹೆಚ್ಚು ಸದ್ದು - ಸುದ್ದಿ ಮಾಡಿದ್ದವು.

ಕಾಶ್ಮೀರ ವಿಚಾರ ಭಾರತದ ಆಂತರಿಕ ವಿಚಾರ, ಮತ್ತು ಇದನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ನೇರವಾಗಿ ಪರಿಹರಿಸಬೇಕು ಎಂದು ಪರಿಗಣಿಸುವ ಭಾರತಕ್ಕೆ ರಾಬಿನ್ ಕುಕ್ ಅವರ ಹೇಳಿಕೆಗಳು ಅಸಮಾಧಾನ ಉಂಟುಮಾಡಿದ್ದವು.

2008ರಲ್ಲಿ ಯುಕೆಯಲ್ಲಿ ಲೇಬರ್ ಪಕ್ಷ ಅಧಿಕಾರದಲ್ಲಿತ್ತು. ಅದೇ ವರ್ಷ ನವೆಂಬರ್ 26-29ರಂದು ಮುಂಬೈನಲ್ಲಿ ನಡೆದ ಉಗ್ರಗಾಮಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಯುಕೆಯ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಡೇವಿಡ್ ಮಿಲಿಬ್ಯಾಂಡ್ ಅವರು, ಭವಿಷ್ಯದಲ್ಲಿ ಇಂತಹ ಭಯೋತ್ಪಾದಕ ದಾಳಿ ನಡೆಯದಂತೆ ತಡೆಗಟ್ಟಲು ಭಾರತ ಪಾಕಿಸ್ತಾನದೊಡನೆ ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದಿದ್ದರು. ಈ ಹೇಳಿಕೆ ಮತ್ತೊಮ್ಮೆ ನವದೆಹಲಿಯ ಕೆಂಗಣ್ಣಿಗೆ ಕಾರಣವಾಗಿತ್ತು.

ಮಿಲಿಬ್ಯಾಂಡ್ ಪಾಕಿಸ್ತಾನ ಮೂಲದ ಲಷ್ಕರ್ ಇ ತಯ್ಬಾ ಉಗ್ರಗಾಮಿ ಸಂಘಟನೆ ಈ ದಾಳಿಗೆ ಜವಾಬ್ದಾರ ಎನ್ನುವುದನ್ನು ಒಪ್ಪಿಕೊಂಡರೂ, ನೇರವಾಗಿ ಪಾಕಿಸ್ತಾನವನ್ನು ಆರೋಪಿಸುವುದನ್ನು ತಪ್ಪಿಸಿದ್ದರು. ಮುಂಬೈ ದಾಳಿ 'ಜಾಗತಿಕ ಭಯೋತ್ಪಾದನೆಯ' ಭಾಗ ಎಂದ ಭಾರತ, ಮುಂಬೈ ದಾಳಿಗೂ, ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿತ್ತು.

ಭಾರತ - ಯುಕೆ ಆರ್ಥಿಕತೆಯ ಸ್ಥಾನ ಬದಲಾವಣೆ

ಆ ದಿನಗಳಿಗೂ ಇಂದಿಗೂ ಭಾರತ - ಯುಕೆ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2022ರಲ್ಲಿ ಆರ್ಥಿಕತೆಯಲ್ಲಿ ಬ್ರಿಟನನ್ನು ಹಿಂದಿಕ್ಕಿ, ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು. ಅದರೊಡನೆ, ಈಗ ಯುಕೆಯಲ್ಲಿ 1.6 ಮಿಲಿಯನ್ ಭಾರತೀಯ ಸಮುದಾಯವಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಯುಕೆಯಲ್ಲಿ ನೆಲೆಸಿರುವ ಭಾರತೀಯ ಸಮುದಾಯ ವಿದ್ಯಾವಂತ, ಶ್ರೀಮಂತ, ಮತ್ತು ರಾಜಕೀಯವಾಗಿ ಸಕ್ರಿಯವಾಗಿರುವ ಸಮುದಾಯ ಎಂದು ಪರಿಗಣಿಸಲ್ಪಟ್ಟಿದೆ. ಅದರೊಡನೆ, ಭಾರತ ಯುಕೆಯಲ್ಲಿ ಎರಡನೇ ಅತಿದೊಡ್ಡ ಹೂಡಿಕೆದಾರನಾಗಿದ್ದು, ಅಂದಾಜು 900 ಭಾರತೀಯ ಮಾಲಿಕತ್ವದ ಸಂಸ್ಥೆಗಳು ಬಹುತೇಕ 1,10,000 ಜನರಿಗೆ ಉದ್ಯೋಗ ನೀಡಿವೆ.

ಯುಕೆ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ, ಭಾರತವನ್ನು ಅತ್ಯಂತ ಪ್ರಮುಖ ಮಾರುಕಟ್ಟೆ ಎಂದು ಪರಿಗಣಿಸುತ್ತಿದೆ.

ಹಿಂದೂಫೋಬಿಯಾ ದಾಳಿಗಳನ್ನು ಖಂಡಿಸಿದ ಸ್ಟಾರ್ಮರ್

ಲೇಬರ್ ಪಕ್ಷದ ಮುಖಂಡರು ಮತ್ತು ಮಾನವ ಹಕ್ಕುಗಳ ನ್ಯಾಯವಾದಿಯೂ ಆಗಿರುವ ಸ್ಟಾರ್ಮರ್, ಕಳೆದ ವಾರ ಉತ್ತರ ಲಂಡನ್ನಿನ ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರು ಯುಕೆಯಿಂದ 'ಹಿಂದೂಫೋಬಿಯಾ'ವನ್ನು ಇಲ್ಲವಾಗಿಸುವ ಕುರಿತು ಮಾತನಾಡಿದ್ದು, ಇತ್ತೀಚಿನ ದಾಳಿಗಳ ನಂತರ ಬ್ರಿಟಿಷ್ ಹಿಂದೂ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿ

ಈ ವಾರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಗೆ ಲೇಖನ ಬರೆದಿರುವ ವಿಶ್ಲೇಷಕ ಸಿ ರಾಜ ಮೋಹನ್ ಅವರು ಈಗ ಹೊರ ಹೋಗುತ್ತಿರುವ ಕನ್ಸರ್ವೇಟಿವ್ ಪಕ್ಷದ ಸರ್ಕಾರ ಭಾರತ - ಯುಕೆ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ್ದು, ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸ್ಟಾರ್ಮರ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಿದ್ದರು. ಹಿಂದಿನ ಸರ್ಕಾರ ಕಾಶ್ಮೀರದಂತಹ ವಿಚಾರದಿಂದ ದೂರ ಸಾಗಿದ್ದು, ಇಂಡೋ - ಪೆಸಿಫಿಕ್ ವಿಚಾರಗಳ ಕುರಿತು ಚರ್ಚಿಸಿದೆ.

ಅನಿಶ್ಚಿತತೆಗಳ ಸುಳಿಯಲ್ಲಿ ವಿದ್ಯಾರ್ಥಿ ವೀಸಾ ನೀತಿ

ಯುಕೆಗೆ ಅಧ್ಯಯನ ನಡೆಸಲು ತೆರಳುವ ಬಹಳಷ್ಟು ಭಾರತೀಯ ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ಸಾಲ ತೀರಿಸುವ ಸಲುವಾಗಿ ವಿದ್ಯಾಭ್ಯಾಸ ಪೂರೈಸಿದ ಬಳಿಕ, ಒಂದಷ್ಟು ಕಾಲ ಯುಕೆಯಲ್ಲಿ ಉದ್ಯೋಗ ನಡೆಸುವ ಆಸೆ ಹೊಂದಿರುತ್ತಾರೆ. ಆದರೆ, ಬ್ರಿಟಿಷ್ ಸರ್ಕಾರ ಬಹಳಷ್ಟು ಬಾರಿ ಈ ಅವಕಾಶವನ್ನು ಹಿಂಪಡೆಯುವ ಬೆದರಿಕೆ ಒಡ್ಡುತ್ತಾ ಬಂದಿದೆ.

2012ರಲ್ಲಿ, ತೆರೇಸಾ ಮೇ ಅವರು ಯುಕೆ ಗೃಹ ಕಾರ್ಯದರ್ಶಿಯಾಗಿದ್ದರು. ಆ ವೇಳೆ, ಅವರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಪೂರ್ಣಗೊಳಿಸಿದ ನಾಲ್ಕು ತಿಂಗಳ ಒಳಗಾಗಿ ಯುಕೆಯಿಂದ ಮರಳಬೇಕು ಎಂಬ ಕಾನೂನು ಪರಿಚಯಿಸಿದ್ದರು. ಬಳಿಕ 2019ರಲ್ಲಿ ಬೋರಿಸ್ ಜಾನ್ಸನ್ ಸರ್ಕಾರ ಈ ನೀತಿಯನ್ನು ಹಿಂಪಡೆಯಿತು.

ವಲಸೆಯಂತಹ ವಿಚಾರಗಳು ಯುಕೆಯಲ್ಲಿ ಹೆಚ್ಚಾಗಿ ವಿವಾದಾತ್ಮಕವಾಗಿ ಪರಿಣಮಿಸುತ್ತವೆ (ಉದಾಹರಣೆಗೆ, ಕನ್ಸರ್ವೇಟಿವ್ ಪಕ್ಷ ಅಕ್ರಮ ವಲಸೆಗಾರರನ್ನು ರವಾಂಡಾಗೆ ಕಳುಹಿಸುವ ಯೋಜನೆ ಹೊಂದಿತ್ತು). ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಕಟ್ಟುನಿಟ್ಟಿನ ಮಾತುಕತೆಗಳಿಗೆ ಭಾರತ ಸಜ್ಜಾಗಬೇಕು.

ಭಾರತ - ಯುಕೆ ಸಂಬಂಧದ ಮೇಲೆ ಕಾಶ್ಮೀರದ ಪ್ರಭಾವ

ಭಾರತದ ಮೋದಿ ಸರ್ಕಾರ ಮತ್ತು ಯುಕೆಯ ನೂತನ ಸ್ಟಾರ್ಮರ್ ಸರ್ಕಾರಗಳ ನಡುವಿನ ಸಂಬಂಧ ಹೇಗಿರಲಿದೆ ಎನ್ನುವುದು ಭಾರತದ ಭದ್ರತಾ ಕಳವಳಗಳನ್ನು ಲೇಬರ್ ಪಕ್ಷ ಹೇಗೆ ಪರಿಗಣಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರಲಿದೆ. ಐತಿಹಾಸಿಕವಾಗಿ, ಲೇಬರ್ ಪಕ್ಷ ಪಾಕಿಸ್ತಾನದ ಪರವಾಗಿ ವಾಲುವುದು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂದಿಸಿದಂತೆ ಅದರ ನಿಲುವುಗಳ ಕುರಿತು ನವದೆಹಲಿ ಜಾಗರೂಕವಾಗಿತ್ತು.

ಯುಕೆಯಲ್ಲಿ ಪಾಕಿಸ್ತಾನಿ ಸಮುದಾಯ, ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೀರ್‌ಪುರ್‌ನ ಜನತೆ ಹೆಚ್ಚಾಗಿರುವ ಕಾರಣದಿಂದ, ಭಾರತ ಲೇಬರ್ ಪಕ್ಷದ ಕುರಿತು ಜಾಗರೂಕತೆ ವಹಿಸುತ್ತಿದೆ. ಈ ಸಮುದಾಯ ಹಿಂದಿನಿಂದಲೂ ಲೇಬರ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೆ, ಭಾರತೀಯ ಮೂಲದ ಬ್ರಿಟಿಷ್ ಪ್ರಜೆಗಳ ಮತಗಳು ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳ ನಡುವೆ ಹಂಚಿಹೋಗುತ್ತಿತ್ತು. ಮೀರ್‌ಪುರ್ ಸಮುದಾಯದ ಮತಗಳು ಅತ್ಯಂತ ಪ್ರಭಾವಿಯಾಗಿದ್ದು, ಯುಕೆ ಸಂಸತ್ತಿನ 650 ಸ್ಥಾನಗಳ ಪೈಕಿ ಅಂದಾಜು 30-40 ಸ್ಥಾನಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲವು.

ಈ ಹಿನ್ನೆಲೆಯಲ್ಲಿ, ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಅವರು ಭಾರತೀಯ ಸಂವಿಧಾನದ ಆರ್ಟಿಕಲ್ 370ಯನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು. 370ನೇ ವಿಧಿಯ ರದ್ದತಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು.

ಜೆರೆಮಿ ಕಾರ್ಬಿನ್ ಅವರ ನಾಯಕತ್ವದಲ್ಲಿ, ಬ್ರಿಗ್‌ಟನ್ ನಲ್ಲಿ 2019ರ ಸೆಪ್ಟೆಂಬರ್‌ನಲ್ಲಿ ನಡೆದ ಲೇಬರ್ ಪಾರ್ಟಿಯ ಸಮಾವೇಶ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಧ್ಯಪ್ರವೇಶದ ಅವಶ್ಯಕತೆಯಿದೆ ಎಂಬ ಗೊತ್ತುವಳಿಯನ್ನು ಹೊರಡಿಸಿತು. ಅದರೊಡನೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹ ಆಗಬೇಕು ಎಂದೂ ಆಗ್ರಹಿಸಿತ್ತು. ಈ ನಿಲುವನ್ನು ಭಾರತ ತೀಕ್ಷ್ಣವಾಗಿ ಟೀಕಿಸಿ, ಖಂಡಿಸಿತ್ತು.

ಆಸಕ್ತಿಕರ ಬೆಳವಣಿಗೆ ಎಂದರೆ, 1984ರಲ್ಲಿ ಬರ್ಮಿಂಗ್‌ಹ್ಯಾಮ್‌ನ ಭಾರತೀಯ ರಾಯಭಾರ ಕಚೇರಿಯ ಸಹಾಯಕ ಆಯುಕ್ತರಾಗಿದ್ದ ರವೀಂದ್ರ ಮ್ಹಾತ್ರೆ ಅವರನ್ನು ಭಯೋತ್ಪಾದಕರು ಅಪಹರಿಸಿ, ಕೊಲೆಗೈದ ಘಟನೆಗೆ ಈ ವರ್ಷ 40 ವರ್ಷ ತುಂಬಲಿದೆ. ಆ ಭಯೋತ್ಪಾದಕರು ಕಾಶ್ಮೀರ ಭಾರತದಿಂದ ಪ್ರತ್ಯೇಕಗೊಳ್ಳಬೇಕು ಎಂಬ ಆಗ್ರಹ ಹೊಂದಿದವರಾಗಿದ್ದರು.

ಮ್ಹಾತ್ರೆ ಅವರನ್ನು ಅಪಹರಿಸಿದ ಭಯೋತ್ಪಾದಕರು, ಮಕ್ಬೂಲ್ ಭಟ್ ಸೇರಿದಂತೆ ಹತ್ತು ಭಯೋತ್ಪಾದಕರನ್ನು ಬಿಡುಗಡೆಗೊಳಿಸುವಂತೆ ಮತ್ತು ಒಂದು ಮಿಲಿಯನ್ ಪೌಂಡ್ ಮೊತ್ತ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಆ ಸಮಯದಲ್ಲಿ ಜಮ್ಮು ಆ್ಯಂಡ್ ಕಾಶ್ಮೀರ್ ಲಿಬರೇಶನ್ ಫ್ರಂಟ್ ನಾಯಕನಾಗಿದ್ದ ಅಮಾನುಲ್ಲಾ ಖಾನ್ ಆದೇಶದ ಮೇರೆಗೆ ಮ್ಹಾತ್ರೆ ಹತ್ಯೆ ನಡೆದಿತ್ತು ಎಂದು ವರದಿಯಾಗಿತ್ತು.

ಹೆಚ್ಚಿದ ಖಲಿಸ್ತಾನಿ ಪ್ರತ್ಯೇಕವಾದದ ಆತಂಕ

ಭಾರತದಿಂದ ಪಂಜಾಬ್ ಪ್ರತ್ಯೇಕಗೊಂಡು, ಖಲಿಸ್ತಾನ ಎಂಬ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಆಗ್ರಹಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿಗಳ ಚಟುವಟಿಕೆಗಳು ಹೆಚ್ಚಾಗಿರುವುದು ಭಾರತದ ಮುಂದಿರುವ ಇನ್ನೊಂದು ಭದ್ರತಾ ಕಳವಳವಾಗಿದೆ. ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಪ್ರತಿಭಟನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಮಾರ್ಚ್ 2023ರಲ್ಲಿ, 50 ಜನರಿದ್ದ ಒಂದು ಗುಂಪು ಲಂಡನ್ನಿನ ಭಾರತೀಯ ರಾಯಭಾರ ಕಚೇರಿ ಆವರಣದ ಮೇಲೆ ದಾಳಿ ನಡೆಸಿ, ಒಳಗೆ ಪ್ರವೇಶಿಸಿ, ಭಾರತದ ರಾಷ್ಟ್ರಧ್ವಜವನ್ನು ಉರುಳಿಸಿದ್ದರು. ಈ ಕುರಿತು ಭಾರತ ಸರ್ಕಾರ ಯುಕೆ ಅಧಿಕಾರಿಗಳಿಗೆ ಗಂಭೀರ ಪ್ರತಿಭಟನೆ ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಯುಕೆ ಪೊಲೀಸರು ಬಂಧಿಸಿದ್ದರು‌ ಎನ್ನಲಾಗಿತ್ತು.

ಬೆಳೆಯುತ್ತಿರುವ ಭಾರತ - ಯುಕೆ ಕಾರ್ಯತಂತ್ರದ ಸಹಯೋಗ

ಇವೆಲ್ಲ ಸಮಸ್ಯೆಗಳ ಹೊರತಾಗಿಯೂ, ಭಾರತ ಮತ್ತು ಯುಕೆ ಪರಸ್ಪರ ಕೈಜೋಡಿಸಬಲ್ಲ ಹಲವಾರು ವಿಚಾರಗಳಿವೆ. ರಕ್ಷಣಾ ಕ್ಷೇತ್ರವೂ ಇದರಲ್ಲಿ ಒಂದಾಗಿದ್ದು, ಭಾರತ ತಾನು ಮಿಲಿಟರಿ ಹಾರ್ಡ್‌ವೇರ್‌ಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ.

ಭಾರತ ಮತ್ತು ಯುಕೆಯ ಸಂಸ್ಥೆಗಳ ನಡುವಿನ ಸಹಭಾಗಿತ್ವ ಎರಡು ಆರ್ಥಿಕತೆಗಳಿಗೂ ನೆರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಔಷಧೀಯ ಉದ್ಯಮ ಇದಕ್ಕೊಂದು ಉತ್ತಮ ಉದಾಹರಣೆಯಾಗಿದ್ದು, ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯುಕೆಯ ಆ್ಯಸ್ಟ್ರಾಜೆ಼ನಕಾ ಜೊತೆಗೂಡಿ 2021ರಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸಿತ್ತು.

ಆದರೆ, ಇಂತಹ ಸಹಯೋಗಗಳು ಯಶಸ್ವಿಯಾಗಬೇಕಾದರೆ, ಎರಡೂ ದೇಶಗಳು ತಮ್ಮ ಸಂಬಂಧದಲ್ಲಿನ ಸೂಕ್ಷ್ಮ ವಿಚಾರಗಳನ್ನು ಜಾಗರೂಕವಾಗಿ ನಿಭಾಯಿಸಬೇಕು. ಇದಕ್ಕಾಗಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಮತ್ತು ಕುಶಲ ರಾಜತಾಂತ್ರಿಕತೆಯ ಅವಶ್ಯಕತೆಯಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT