ಖ್ಯಾತ ಕಾರ್ಯಕ್ರಮ ನಿರೂಪಕಿ ಮತ್ತು ನಟಿ ಅಪರ್ಣಾ ವಸ್ತಾರೆ ಶ್ವಾಸಕೋಶದ ಕ್ಯಾನ್ಸರಿನಿಂದಾಗಿ ಇತ್ತೀಚೆಗೆ ತೀರಿಕೊಂಡರು. ಈ ಹಿನ್ನೆಲೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಎಂದರೇನು, ಇದು ಹೇಗೆ ಬರುತ್ತದೆ, ಇದರ ಚಿಕಿತ್ಸೆ ಹೇಗೆ ಮತ್ತು ಇದನ್ನು ಬಾರದಂತೆ ಹೇಗೆ ತಡೆಗಟ್ಟುವುದು ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ.
ಶ್ವಾಸಕೋಶದ ಕ್ಯಾನ್ಸರ್ ಒಂದು ರೀತಿಯ ಮಾರಣಾಂತಿಕ ಕ್ಯಾನ್ಸರ್. ಶ್ವಾಸಕೋಶದಲ್ಲಿ ಅಸಹಜ ಕೋಶಗಳು ಅನಿಯಂತ್ರಿತ ರೀತಿಯಲ್ಲಿ ಬೆಳೆದಾಗ ಅಲ್ಲಿ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು ಅದು ತೀವ್ರ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು.
ವಿಶ್ವಾದ್ಯಂತ ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಈ ಕ್ಯಾನ್ಸರ್ 40-50 ವರ್ಷಗಳಾದ ನಂತರ ಬರುತ್ತದೆ. ಧೂಮಪಾನವು ಶ್ವಾಸಕೋಶದ ಕ್ಯಾನ್ಸರಿಗೆ ಪ್ರಮುಖ ಕಾರಣವಾಗಿದೆ. ಸಿಗರೇಟಿನ ಹೊಗೆಯು 60ಕ್ಕಿಂತ ಹೆಚ್ಚು ವಿಭಿನ್ನ ವಿಷಕಾರಿ ಪದಾರ್ಥಗಳನ್ನು ಹೊಂದಿರುತ್ತದೆ, ಇವುಗಳನ್ನು ಕಾರ್ಸಿನೋಜೆನಿಕ್ (ಕ್ಯಾನ್ಸರ್ ಉತ್ಪಾದಕ) ಪದಾರ್ಥಗಳು ಎಂದು ಕರೆಯಲಾಗುತ್ತದೆ. ಬೀಡಿ ಅಥವಾ ಸಿಗರೇಟಿನಿಂದ ಹೊಗೆ ಎಳೆದುಕೊಂಡಾಗ ಅದು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಅಲ್ಲೆಲ್ಲಾ ಸುತ್ತು ಹೊಡೆದು ಶ್ವಾಸಕೋಶದ ಅಂಗಾಂಶಗಳನ್ನು ಹಾನಿ ಮಾಡುತ್ತದೆ. ಒಂದೆರಡು ಬಾರಿ ಈ ರೀತಿ ಆದರೆ ಶ್ವಾಸಕೋಶ ತಾನೇ ಇದನ್ನು ಸರಿಪಡಿಸಿಕೊಳ್ಳುತ್ತದೆ. ಆದರೆ ಪ್ರತಿ ದಿನವೂ ಅಥವಾ ದಿನದಲ್ಲಿ ಹಲವು ಬಾರಿ ಇದೇ ರೀತಿ ಮುಂದುವರೆದರೆ ಸಂಪೂರ್ಣ ಶ್ವಾಸಕೋಶವೇ ಹಾಳಾಗಿ ಹೋಗುತ್ತದೆ. ಇದರಿಂದ ಶ್ವಾಸಕೋಶಗಳಲ್ಲಿ ಕಂಡು ಬರುವ ಸಣ್ಣ ಸಣ್ಣ ಜೀವ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾಗಿ ಉಸಿರಾಟದ ತೊಂದರೆಯನ್ನು ನೀಡುತ್ತವೆ. ಮಹಿಳೆಯರು ಧೂಮಪಾನ ಮಾಡದಿದ್ದರೂ ಕೂಡ ಅವರನ್ನು ಇದು ಬಾಧಿಸುತ್ತಿದೆ. ಕೊರೊನಾ ಮಹಾಮಾರಿ ಬಂದುಹೋದ ನಂತರ ಕ್ಯಾನ್ಸರ್ ಮತ್ತಿತರ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ.
ಧೂಮಪಾನ ಮಾಡದೇ ಇರುವವರಿಗೆ ತೀವ್ರ ವಾಯು ಮಾಲಿನ್ಯ, ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್-ಬೀಡಿ, ಸಿಗರೇಟ್ ಸೇದುವವರ ಹತ್ತಿರ ಇದ್ದು ಅದರ ಗಾಳಿಯ ಸೇವನೆ ಮಾಡುವುದು), ರಸಾಯನಿಕಗಳು (ಅದರಲ್ಲಿಯೂ ಆರ್ಸೆನಿಕ್, ಕ್ಯಾಡ್ಮಿಯಂ, ಕ್ರೋಮಿಯಂ, ನಿಕಲ್, ಯುರೇನಿಯಂ ಮತ್ತು ಕೆಲವು ಬಗೆಯ ಪೆಟ್ರೋಲಿಯಮ್ ಉತ್ಪನ್ನಗಳು) ತುಂಬಿರುವ ವಾತಾವರಣದಲ್ಲಿ ಹೆಚ್ಚಾಗಿ ಉಸಿರಾಡುವುದು, ಅನುವಂಶೀಯತೆ ಹೀಗೆ ನಾನಾ ಕಾರಣಗಳಿಂದ ಈ ರೋಗ ಬರಬಹುದು. ಅವರಿಗೆ ಈ ರೋಗ ಬರುವುದಿಲ್ಲ ಎಂದೇನಿಲ್ಲ.
ಶ್ವಾಸಕೋಶದ ಕ್ಯಾನ್ಸರಿನ ಅತ್ಯಂತ ಸಾಮಾನ್ಯ ವಿಧಗಳೆಂದರೆ ಸಣ್ಣದಲ್ಲದ ಜೀವಕೋಶದ ಕಾರ್ಸಿನೋಮ (NSCLC) ಮತ್ತು ಸಣ್ಣ ಜೀವಕೋಶದ ಕಾರ್ಸಿನೋಮ (SCLC). NSCLC ಹೆಚ್ಚು ಸಾಮಾನ್ಯವಾಗಿದೆ ಮತ್ತು ನಿಧಾನವಾಗಿ ಬೆಳೆಯುತ್ತದೆ, ಆದರೆ SCLC ಹೆಚ್ಚಾಗಿ ಕಂಡುಬರುವುದಿಲ್ಲ, ಆದರೆ ಆಗಾಗ್ಗೆ ವೇಗವಾಗಿ ಬೆಳೆಯುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ ಮತ್ತು ಜಾಗತಿಕವಾಗಿ ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗಿದೆ.
ಶ್ವಾಸಕೋಶದ ಕ್ಯಾನ್ಸರ್ ಶ್ವಾಸಕೋಶದಲ್ಲಿನ ಸಮಸ್ಯೆಯನ್ನು ಸೂಚಿಸುವ ಹಲವಾರು ರೋಗಲಕ್ಷಣಗಳನ್ನು ತೋರಿಸಬಹುದು. ಇದರ ಸಾಮಾನ್ಯ ಲಕ್ಷಣಗಳು: ಒಮ್ಮೆ ಶುರುವಾದರೆ ವಾಸಿಯಾಗದ ಕೆಮ್ಮು, ಎದೆ ನೋವು, ಉಸಿರಾಟದ ತೊಂದರೆ, ಕೆಮ್ಮಿದಾಗ ರಕ್ತ ಹೋಗುವುದು, ಆಯಾಸ, ಯಾವುದೇ ಕಾರಣವಿಲ್ಲದೆ ದೇಹದ ತೂಕ ನಷ್ಟ ಮತ್ತು ಪದೇ ಪದೇ ಉಂಟಾಗುವ ಶ್ವಾಸಕೋಶದ ಸೋಂಕು. ಆರಂಭಿಕ ರೋಗಲಕ್ಷಣಗಳು ಸೌಮ್ಯ ಅಥವಾ ಸಾಮಾನ್ಯ ಉಸಿರಾಟದ ಸಮಸ್ಯೆಗಳಾಗಿರಬಹುದು ಇಂತಹ ಸಮಸ್ಯೆಗಳು ಗಂಭೀರವಾಗಿದ್ದು ದೀರ್ಘಕಾಲಿಕವಾಗಿದ್ದರೆ ವೈದ್ಯರ ಹತ್ತಿರ ಹೋದಾಗ ಕೆಲವೊಂದು ಪರೀಕ್ಷೆಗಳನ್ನು ಮಾಡಿ ಶ್ವಾಸಕೋಶದ ಕ್ಯಾನ್ಸರ್ ಇದೆ ಅಥವಾ ಇಲ್ಲ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಇಮೇಜಿಂಗ್ ಟೆಸ್ಟ್, ಎಕ್ಸ್ ರೇ, ಎಂಆರ್‌ಐ ಸ್ಕ್ಯಾನಿಂಗ್, ಸಿಟಿ ಮತ್ತು ಪಿಇಟಿ ಸ್ಕ್ಯಾನಿಂಗ್; ಕಫದ ಪರೀಕ್ಷೆ; ಬ್ರೊಂಕೋಸ್ಕೋಪಿ; ಮೀಡಿಯಾಸ್ಪೆನೊಸ್ಕೋಪಿ ಮತ್ತು ನೀಡಲ್ ಬಯೋಪ್ಸಿಗಳ ಮೂಲಕ ಶ್ವಾಸಕೋಶದ ಕ್ಯಾನ್ಸರನ್ನು ನಿಖರವಾಗಿ ಪತ್ತೆ ಹಚ್ಚಬಹುದು.
ಶ್ವಾಸಕೋಶದ ಕ್ಯಾನ್ಸರಿಗೆ ಚಿಕಿತ್ಸೆಗಳು ಕ್ಯಾನ್ಸರಿನ ವಿಧ, ಅದು ಎಷ್ಟು ಹರಡಿದೆ ಮತ್ತು ರೋಗಿಗಳ ವೈದ್ಯಕೀಯ ಇತಿಹಾಸವನ್ನು ಆಧರಿಸಿದೆ. ಶಸ್ತ್ರಚಿಕಿತ್ಸೆ, ರೇಡಿಯೇಶನ್, ಕೀಮೋಥೆರಪಿ, ಇಮ್ಮುನೋಥೆರಪಿ, ಟಾರ್ಗೆಟ್ ಥೆರಪಿ ಚಿಕಿತ್ಸೆಗಳ ಮೂಲಕ ಶ್ವಾಸಕೋಶದ ಕ್ಯಾನ್ಸರನ್ನು ಗುಣಪಡಿಸಲಾಗುತ್ತದೆ/ಅದರ ದುಷ್ಟರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಆರಂಭವಾದ ತಕ್ಷಣ ಪತ್ತೆಯಾದರೆ ಚಿಕಿತ್ಸೆ ಮತ್ತು ಅದರ ಯಶಸ್ಸು ಅಧಿಕವಾಗಿರುತ್ತದೆ. ಆದರೆ ವಾಸ್ತವವೆಂದರೆ ಈ ರೋಗ ಮುಂದುವರೆದ ಹಂತಗಳನ್ನು ತಲುಪಿದ ನಂತರವೇ ಪತ್ತೆಯಾಗುವುದು. ಈ ಸ್ಥಿತಿಯಲ್ಲಿ ರೋಗಿಗಳು ಆರು ತಿಂಗಳಿನಿಂದ ಎರಡು ವರ್ಷಗಳ ತನಕ ಬದುಕಿರಬಹುದು.
ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಬೀಡಿ/ಸಿಗರೇಟ್/ತಂಬಾಕು ಸೇವನೆ ಮಾಡದಿರುವುದೇ ಉತ್ತಮ ಮಾರ್ಗವಾಗಿದೆ. ಜೊತೆಗೆ ಬೀಡಿ/ಸಿಗರೇಟ್ ಸೇದುವ ಸ್ಥಳದಲ್ಲಿ ಕಲುಷಿತ ಗಾಳಿಯನ್ನು ಉಸಿರಾಡುವುದು, ವಾಯು ಮಾಲಿನ್ಯ, ಮತ್ತು ರಾಸಾಯನಿಕಗಳು ಇರುವ ವಾತಾವಣದಲ್ಲಿ ಹೆಚ್ಚು ಹೊತ್ತು ಇರಬಾರದು. ಹೊಗೆ ಮುಕ್ತ ಪರಿಸರ, ತಂಬಾಕು ನಿಯಂತ್ರಣ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಔದ್ಯೋಗಿಕ ಅಪಾಯಗಳನ್ನು ಪರಿಹರಿಸುವುದು ಮತ್ತು ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವುದರಿಂದ ಈ ರೋಗವನ್ನು ತಡೆಯಬಹುದು.
ಹೆಚ್ಚು ಜನದಟ್ಟಣೆ ಮಾರುಕಟ್ಟೆ, ಬಸ್, ರೈಲು ನಿಲ್ದಾಣಗಳು, ಏರ್‌ಪೋರ್ಟ್, ವಾಯುಮಾಲಿನ್ಯ ಇರುವ ಕಡೆ ಓಡಾಡುವಾಗ ಮಾಸ್ಕ್ ಹಾಕಿಕೊಳ್ಳುವುದು ಒಳ್ಳೆಯದು.
ಪ್ಲಾಸ್ಟಿಕ್ಕಿನಲ್ಲಿ ಕೂಡ ಕಾರ್ಸಿನೋಜೆನಿಕ್ ಪದಾರ್ಥಗಳಿರುವುದರಿಂದ ಅದರ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್ ಸಾಧನಗಳಲ್ಲಿ ಬಿಸಿ ಮಾಡಬಾರದು, ಸಂಗ್ರಹಿಸಿಡಬಾರದು ಮತ್ತು ಕವರುಗಳಲ್ಲಿ ಹಾಕಿಡಬಾರದು.
ರಾಸಾಯನಿಕಗಳನ್ನು ಅತಿಯಾಗಿ ಬಳಸಿ ಮಾಡಿರುವ ಮೇಕಪ್ ವಸ್ತುಗಳನ್ನು ಬಳಸಬಾರದು. ಸಮತೋಲಿತ ಆಹಾರ, ದೈಹಿಕ ಸದೃಢತೆ ವಾಕಿಂಗ್ ಅಥವಾ ವ್ಯಾಯಾಮದ ಜೊತೆಗೆ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಮಾಡಿದರೆ ಒಳಿತು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com