ಹಣಕಾಸು ಆರೋಗ್ಯ online desk
ಅಂಕಣಗಳು

ಹಣಕಾಸು ಆರೋಗ್ಯ ಸುಧಾರಣೆಗೆ ಪಾಲಿಸಬೇಕಾದ ಸರಳ ಸೂತ್ರಗಳು (ಹಣಕ್ಲಾಸು)

ಸದಾ ಮನಸ್ಸಿನಲ್ಲಿ ಕೇಳಿಕೊಳ್ಳಿ ಇದರಿಂದ ನನಗೇನು ಲಾಭ? ಲಾಭ ತಂದುಕೊಡುವ ಎಲ್ಲವೂ ಆಸ್ತಿ! ಲಾಭ ಎಂದ ಮಾತ್ರಕ್ಕೆ ಅದು ಹಣವೇ ಆಗಿರಬೇಕು ಎಂದಿಲ್ಲ. (ಹಣಕ್ಲಾಸು-434)

ನಾವು ಎಳವೆಯಲ್ಲಿರುವಾಗ ನಮ್ಮ ಹೆತ್ತವರು, ಸಮಾಜ, ಗುರು ಹಿರಿಯರು ಎಲ್ಲರಾದಿಯಾಗಿ ಹೇಳುವ ಮಾತು' ಚನ್ನಾಗಿ ಓದಬೇಕು, ಒಳ್ಳೆಯ ಕೆಲಸ ಪಡೆದುಕೊಂಡು, ಜೀವನದಲ್ಲಿ ಸೆಟ್ಟಲ್ ಆಗಬೇಕು'. ಈ ಮಾತುಗಳನ್ನು ಕೇಳದೆ ಇರುವವರು ಯಾರಾದರೂ ಇದ್ದರೆ ನನಗೂ ಸ್ವಲ್ಪ ತಿಳಿಸಿ. ಇದು ಅತ್ಯಂತ ಸಹಜ ಮಾತು. ನಮ್ಮ ಹೆತ್ತವರಿಗೆ ನಾವು ಜೀವನದಲ್ಲಿ ಬೇಗ ಒಂದು ನೆಲೆ ಕಂಡುಕೊಳ್ಳಬೇಕು ಎನ್ನುವುದು ಆಶಯ.

'ಬಂಗಾರದ ಇಟ್ಟಿಗೆಯಲ್ಲಿ ಮನೆ ಕಟ್ಟುವಂತನಾಗು', 'ದೊಡ್ಡ ಕಾರಿಟ್ಟು, ನಾಲ್ಕೈದು ಆಳುಕಾಳುಗಳನ್ನು ಮನೆತುಂಬಾ ಹೊಂದುವಂತನಾಗು' ನಮ್ಮಜ್ಜಿಗೆ ನಮಸ್ಕರಿದಾಗೆಲ್ಲಾ ಆಕೆ ಮಾಡುತ್ತಿದ್ದ ಆಶೀರ್ವಾದದ ಮಾತುಗಳು ಮೇಲಿನವು. ನಮ್ಮ ಮಕ್ಕಳು ಚನ್ನಾಗಿರಲಿ ಎನ್ನುವುದು ಈ ಆಶೀರ್ವಾದದ, ಮಾತುಗಳ ಸಾರ. ಆದರೆ ಇದರಲ್ಲಿ ಅವರಿಗೂ ಗೊತ್ತಿಲ್ಲದೇ ಸಣ್ಣದಾಗಿ ಒಂದು ಹೊರೆಯನ್ನು ಮಕ್ಕಳ ಮೇಲೆ ಹೊರಿಸಿ ಬಿಡುತ್ತಾರೆ. ಅದು ಚೆನ್ನಾಗಿ ಮಾಡಬೇಕೆನ್ನುವ ಒತ್ತಡ. ಜೊತೆಗೆ ಮನೆ ಮತ್ತು ಕಾರು ಇವೆರೆಡೂ ಅತ್ಯಂತ ಅವಶ್ಯಕವಾಗಿ ಹೊಂದಲೇಬೇಕಾದ ಆಸ್ತಿಗಳು ಎನ್ನುವ ಹೇರಿಕೆ.

ಆದರೆ ಇವತ್ತು ಕಾಲ ಬದಲಾಗಿದೆ. ಆಸ್ತಿ ಮತ್ತು ಲಿಯಬಲಿಟಿ ಯಾವುದು ಎನ್ನುವುದು ಸಮಯ ಮತ್ತು ಸಂದರ್ಭದ ಆಧಾರದ ಮೇಲೆ ನಿರ್ಣಯವಾಗುತ್ತದೆ. ಅಲ್ಲದೆ ಸೆಟಲ್ ಎನ್ನುವ ಪದಕ್ಕೆ ಇಂದು ಅರ್ಥವಿಲ್ಲವಾಗಿದೆ. ನಾವು ಸೆಟಲ್ ಎಂದುಕೊಂಡ ವಿಷಯ ಬದಲಾಗಲು ಕ್ಷಣ ಸಾಕು. ನಾವಿಂದು ಅತ್ಯಂತ ಏರಿಳಿತಗಳನ್ನು ಹೊಂದಿರುವ ಕಾಲಘಟ್ಟದಲ್ಲಿದ್ದೇವೆ. ನನ್ನ ತಮ್ಮ ಡಾ. ಲಕ್ಷ್ಮೀಕಾಂತ ನಿಗೆ ಈ ಸೆಟಲ್ ಎನ್ನುವ ಪದವನ್ನು ಕೇಳಿದರೆ ಅಲರ್ಜಿ. ಬದುಕು ನಿರಂತರ ಚಲನೆಯಲ್ಲಿರಬೇಕಾದದ್ದು, ಸೆಟ್ಟಲ್ ಎಂದರೆ ಒಂದು ಕಡೆ ನೆಲೆ ಕಂಡುಕೊಳ್ಳುವುದು ಎಂದರ್ಥ. ನೆಲೆ ಕಂಡುಕೊಂಡರೆ ಅಲ್ಲಿಗೆ ಪ್ರಯಾಣ ನಿಂತಂತೆ ಎನ್ನುವುದು ಅವನ ವ್ಯಾಖ್ಯಾನ.

ಜೀವನದ ಮೊದಲ 25ವರ್ಷ ಭಾರತದಲ್ಲಿ ಕಳೆದ ಅವನು ನಂತರ ಬಂದದ್ದು ಬಾರ್ಸಿಲೋನಾ, ಸ್ಪೇನ್ ದೇಶಕ್ಕೆ, ಅಲ್ಲಿಂದ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತೆ ಸ್ಪೇನ್, ಅಮೇರಿಕಾ, ಮತ್ತೆ ಸ್ಪೇನ್ ದೇಶಗಳನ್ನು ಮುಗಿಸಿ ಇದೀಗ ನೆದರ್ಲ್ಯಾಂಡ್ ನಿವಾಸಿಯಾಗಿದ್ದಾನೆ. ಅತ್ಯುತ್ತಮ ಹುದ್ದೆ, ಸಂಸ್ಥೆಗಳನ್ನು ತೊರೆದು ಹೋಗಲು ಕ್ಷಣವೂ ಚಿಂತಿಸುವುದಿಲ್ಲ. ಅವನ ಗುಣ ಗೊತ್ತಿದ್ದೂ ಅವನನ್ನು ಮಾತಿಗೆಳೆದು ಕೇಳಿದರೆ ಬಹುಕಾಲ ಒಂದೆಡೆ ನಿಂತರೆ ಗ್ರೋಥ್ - ಬೆಳವಣಿಗೆ ನಿಲ್ಲುತ್ತದೆ. ಸದಾ ಸಾಗುತ್ತಿರಬೇಕು. ಸಣ್ಣದಕ್ಕೆ, ಕೈಗೆಟುಕಿದ್ದಕ್ಕೆ ಖುಷಿಯಾಗಿ ನಿಂತರೆ, ಮುಂದೆ ನಮಗೆ ಕಾದಿರುವ ಬದುಕನ್ನು ನಾವು ಭೇಟಿ ಮಾಡುವುದೇ ಇಲ್ಲ, ಸೊ ಜನ, ಜಗತ್ತು ಹೇಳುವ ರೀತಿ ಸೆಟ್ಟಲ್ ಆಗುವುದು ನನಗಿಷ್ಟವಿಲ್ಲ ಎನ್ನುವ ಅವನ ಸಿದ್ದ ಉತ್ತರ ಸಿಗುತ್ತದೆ.

ಈ ಮಾತುಗಳನ್ನು ಯಾರನ್ನು ನೋಯಿಸಲು ಅಥವಾ ಹೋಲಿಕೆ ಮಾಡಲು ಬರೆಯುತ್ತಿಲ್ಲ. ನೀವೇ ಇದನ್ನು ಗಮನಿಸಿ ನೋಡಿ, ನಿರ್ಧಾರಕ್ಕೆ ಬನ್ನಿ. ಶ್ರೀಮಂತರು ಆಸ್ತಿಯನ್ನು ಖರೀದಿಸುತ್ತಾರೆ, ಮಧ್ಯಮವರ್ಗದ ಜನ ಲಿಯಬಲಿಟಿಯನ್ನು ಖರೀದಿಸುತ್ತಾರೆ ಮತ್ತು ಅದನ್ನು ಆಸ್ತಿ ಎಂದು ನಂಬಿ ಖುಷಿಯಾಗಿ ಜೀವನವನ್ನು ಸವೆಸುತ್ತಾರೆ. ಯಾವುದು ಆಸ್ತಿ? ಯಾವುದು ಲಿಯಬಲಿಟಿ? ಎನ್ನುವ ಗೊಂದಲದಿಂದ ಮುಕ್ತವಾದರೆ ಅಲ್ಲಿಗೆ ಶ್ರೀಮಂತಿಕೆಯ ಕಡೆಗೆ ನಮ್ಮ ನಡಿಗೆ ಪ್ರಾರಂಭವಾಗುತ್ತದೆ. ಇಲ್ಲಿ ನೀವು ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬೇಕು. ಈ ಸಮಾಜ, ನಮ್ಮ ಅಕೌಂಟಿಂಗ್ ಮತ್ತು ಫೈನಾನ್ಸಿಂಗ್ ಸಂಸ್ಥೆಗಳು ಕೂಡ ಇವುಗಳನ್ನು ಒಂದೇ ವರ್ಗದಲ್ಲಿ ಫಿಕ್ಸ್ ಮಾಡಿ ಬಿಟ್ಟಿವೆ. ಅಂದರೆ ಕಟ್ಟಡ, ಕಾರು, ಬಂಗಾರ, ನೆಲ, ಹಣ ಇತ್ಯಾದಿಗಳನ್ನು ಅಸೆಟ್ ಎಂದು ವರ್ಗಿಕರಿಸಲಾಗಿದೆ. ಇವು ಲಿಯಬಲಿಟಿ ಕೂಡ ಆಗಬಲ್ಲದು! ಅದರ ಬಗ್ಗೆ ನಮ್ಮ ಸಂಸ್ಥೆಗಳು ಇನ್ನೂ ಚಿಂತಿಸಿಲ್ಲ, ಇನ್ನು ಒಪ್ಪುವ ಮಾತು ಬೇರೆ. ಹೀಗಾಗಿ ಇವುಗಳನ್ನು ನಂಬಿಕೊಂಡವರು ಶ್ರೀಮಂತರಾಗದೆ ಹಾಗೆ ಉಳಿಯುತ್ತಾರೆ. ಬನ್ನಿ ಈ ಅಸೆಟ್ ಮತ್ತು ಲಿಯಬಲಿಟಿ ಸಮಯಕ್ಕೆ ಮತ್ತು ಸನ್ನಿವೇಶಕೆ ತಕ್ಕಂತೆ ಹೇಗೆ ಜಾಗ ಬದಲಾಯಿಸುತ್ತವೆ ನೋಡೋಣ.

ಅಕೌಂಟಿಂಗ್ ಟರ್ಮಿನಾಲಜಿ ಪ್ರಕಾರ ಆಸ್ತಿ ಅಂದರೆ ಯಾವುದು?

  • ಹಣ ಮತ್ತು ಹಣಕ್ಕೆ ಸಮವಾದ ಹೂಡಿಕೆಗಳು: ಅಂದರೆ ಹಣ, ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಬ್ಯಾಲೆನ್ಸ್, ರಿಕರಿಂಗ್ ಡೆಪಾಸಿಟ್ ಇತ್ಯಾದಿ

  • ರಿಯಲ್ ಎಸ್ಟೇಟ್: ನೆಲ, ಮನೆ, ಕಮರ್ಷಿಯಲ್ ಪ್ರಾಪರ್ಟಿ

  • ವೈಯಕ್ತಿಕ ಬಳಕೆ ವಸ್ತುಗಳು: ಒಡವೆಗಳು, ಬಂಗಾರ, ಕಾರು, ಸ್ಕೂಟರ್ ಇತ್ಯಾದಿ ವಾಹನಗಳು, ಪೀಠೋಪಕರಣ, ಆರ್ಟ್ ವರ್ಕ್, ಬಟ್ಟೆ ಇತ್ಯಾದಿ

  • ಇನ್ನಿತರ ಹೂಡಿಕೆಗಳು: ಷೇರು, ಬಾಂಡ್, ಮ್ಯೂಚುಯಲ್ ಫಂಡ್, ಇನ್ಶೂರೆನ್ಸ್, ಬೆಲೆಬಾಳುವ ಲೋಹಗಳ ಮೇಲಿನ ಹೂಡಿಕೆ.

ಮೇಲಿನ ಲೆಕ್ಕಾಚಾರದಲ್ಲಿ ಬರದೇ ಇರುವ ಎಲ್ಲವೂ ಲಿಯಬಿಲಿಟಿ ಎನ್ನಿಸಿಕೊಳ್ಳುತ್ತದೆ . ಯಾವುದು ನಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡಿಸುತ್ತದೆ ಅವೆಲ್ಲವೂ ಲಿಯಬಿಲಿಟಿ. ಯಾವುದು ಮೌಲ್ಯ ಹೆಚ್ಚುತ್ತದೆ , ಯಾವುದೇ ನಮಗೆ ಹಣವನ್ನು ತಂದು ಕೊಡುತ್ತದೆ ಅವೆಲ್ಲವೂ ಆಸ್ತಿ.

ಅಯ್ಯೋ ಮೇಲಿನ ಸಾಲುಗಳನ್ನು ಓದಿ ಇನ್ನಷ್ಟು ಸಂಶಯ ಶುರುವಾಯ್ತು. ಸರಿಯಾಗಿ ಹೇಳಿ ಯಾವುದು ಆಸ್ತಿ ಅಥವಾ ಯಾವುದು ಆಸ್ತಿಯಲ್ಲ, ಯಾವುದನ್ನು ಆಸ್ತಿ ಎನ್ನುತ್ತೀರಾ ಅದನ್ನೇ ಕೊಳ್ಳುತ್ತೇವೆ ಎನ್ನುವ ಮಾತುಗಳು ನಿಮ್ಮ ಮನಸ್ಸಿನಲ್ಲಿ ಈ ವೇಳೆಗೆ ಬಂದಿದ್ದರೆ ಅದು ತಪ್ಪಲ್ಲ ಸಹಜ. ಈ ರೀತಿಯ ಸ್ಟ್ಯಾಂಡರ್ಡ್ ಡೆಫಿನಿಷನ್ ಇಲ್ಲ ಎನ್ನುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯ್ತು. ಅಕೌಂಟಿಂಗ್ ಮತ್ತು ಫೈನಾನ್ಸ್ ಸ್ಟ್ಯಾಂಡರ್ಡ್ಸ್ ಪ್ರಕಾರ ಕಾರು, ಫರ್ನಿಚರ್, ಕಂಪ್ಯೂಟರ್, ಲ್ಯಾಪ್ಟಾಪ್, ದುಬಾರಿ ಮೊಬೈಲ್, ಫ್ರಿಡ್ಜ್, ವಾಷಿಂಗ್ ಮಷೀನ್, ಲಿಫ್ಟ್ ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ. ಇವೆಲ್ಲವೂ ಆಸ್ತಿ. ಗಮನಿಸಿ ನೋಡಿ ಅವರು ಡೆಫಿನಿಶನ್ ಹೇಳಿದರು, ಇವೆಲ್ಲವೂ ಆಸ್ತಿ ಎಂದರು, ನೀವು ಕೊಳ್ಳಲು ಶುರು ಮಾಡಿದಿರಿ ಅದನ್ನು ಆಸ್ತಿ ಎಂದು ನಂಬಿದಿರಿ, ಹೀಗಾಗಿ ಶ್ರೀಮಂತರಾಗದೆ ಬಹುತೇಕರು ಉಳಿದರು.

ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ಜಗತ್ತಿನಲ್ಲಿ ನೀವು ಪರ್ಮನೆಂಟ್ ಡೆಫಿನಿಶನ್ ಬಯಸುವುದೇ ತಪ್ಪು! ಹಿಂದಿನ ಅಧ್ಯಾಯದಲ್ಲಿ ಹೇಳಿದ್ದೇನೆ-ಟ್ರಸ್ಟ್ ನೋ ಒನ್! ಸದಾ ಮನಸ್ಸಿನಲ್ಲಿ ಕೇಳಿಕೊಳ್ಳಿ ಇದರಿಂದ ನನಗೇನು ಲಾಭ? ಲಾಭ ತಂದುಕೊಡುವ ಎಲ್ಲವೂ ಆಸ್ತಿ! ಲಾಭ ಎಂದ ಮಾತ್ರಕ್ಕೆ ಅದು ಹಣವೇ ಆಗಿರಬೇಕು ಎಂದಿಲ್ಲ. ಮಾನಸಿಕ ನೆಮ್ಮದಿ ಕೊಡುವ ವಸ್ತುಗಳೂ ಕೂಡ ಆಸ್ತಿಯೇ , ವಿತ್ತ ಪ್ರಪಂಚದಲ್ಲಿ ಅದಕ್ಕೆ ಮೌಲ್ಯವಿಲ್ಲದಿರಬಹುದು, ಅದನ್ನು ಆಸ್ತಿ ಎಂದು ಪರಿಗಣಿಸದೆ ಇರಬಹದು, ಅದನ್ನು ನೀವು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ.

ಕೊನೆಮಾತು: ಯಾವುದೆಲ್ಲಾ ನಮಗೆ ಲಾಭ, ಖುಷಿ ಕೊಡುತ್ತದೆ ಅವಷ್ಟೇ ಆಸ್ತಿ ಮಿಕ್ಕವೆಲ್ಲಾ ಲಿಯಬಲಿಟಿ . ಜೊತೆಗೆ ಸಮಯಕ್ಕೆ ತಕ್ಕಂತೆ ಮೌಲ್ಯ ಕಳೆದುಕೊಳ್ಳುವ ವಸ್ತುಗಳು ಸಹ ಲಿಯಬಿಲಿಟಿ ಎನ್ನಿಸಿಕೊಳ್ಳುತ್ತವೆ.

  1. ಇಂದು ನಾವು ಕೊಂಡ ವಸ್ತುವಿನ ಮೌಲ್ಯ ದೀರ್ಘಕಾಲದಲ್ಲಿ ವೃದ್ಧಿಯಾದರೆ ಅದನ್ನು ಆಸ್ತಿ ಎನ್ನಬಹುದು

  2. ಇಂದು ನಾವು ಕೊಂಡ ವಸ್ತು ನಮಗೆ ಆದಾಯ ತಂದುಕೊಟ್ಟರೆ ಅದನ್ನು ಕೂಡ ಆಸ್ತಿ ಎನ್ನಬಹುದು. ಉದಾಹರಣೆಗೆ ಮನೆಯ ಗ್ಯಾರೇಜ್ ನಲ್ಲಿ ಸುಮ್ಮನೆ ನಿಂತ ಕಾರು ಲಿಯಬಿಲಿಟಿ, ಅದನ್ನು ಟ್ಯಾಕ್ಸಿ ಸರ್ವಿಸ್ ಗೆ ಬಳಸುವ ವ್ಯಕ್ತಿಗೆ ಅದು ಅಸೆಟ್.

  3. ಯಾವುದೆಲ್ಲಾ ನಮಗೆ ಮಾನಸಿಕ ನೋವು, ಯಾತನೆ ನೀಡುತ್ತದೆ ಅವೆಲ್ಲವೂ ಲಿಯಬಿಲಿಟಿ. ಯಾವುದು ಖುಷಿ ನೀಡುತ್ತದೆ ಅದು ಅಸೆಟ್.

  4. ಅಸೆಟ್ ಅಂಡ್ ಲಿಯಬಿಲಿಟಿ ಎನ್ನುವುದು ಸಮಯಕ್ಕೆ ತಕ್ಕ ಹಾಗೆ ನಮ್ಮ ಸನ್ನಿವೇಶ ಬದಲಾದಂತೆ ಬದಾಲಾಗುತ್ತದೆ. ಒಂದು ಪರ್ಮನೆಂಟ್ ಡೆಫಿನಿಶನ್ಗೆ ಕಟ್ಟುಬೀಳುವಂತಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT