ಸಾಂಕೇತಿಕ ಚಿತ್ರ online desk
ಅಂಕಣಗಳು

ಸರ್ಕಾರ, ಮಿಲಿಟರಿಗಳ ಯುದ್ಧ ಸನ್ನದ್ಧತೆಯ ಪ್ರಶ್ನೆ ಹಾಗಿರಲಿ, ನಾವು ನಾಗರಿಕರ ಸಿದ್ಧತೆ ಏನು? (ತೆರೆದ ಕಿಟಕಿ)

ನಾಳೆ ಇದೇ ಸಿಂಧು ಹಾಗೂ ಬ್ರಹ್ಮಪುತ್ರಗಳಿಗೆ ಅವುಗಳ ಮೂಲದಲ್ಲೇ ಚೀನಾವೇನಾದರೂ ಆಣೆಕಟ್ಟು ಕಟ್ಟಿದರೆ ಭಾರತಕ್ಕೂ ನೀರು ಸಿಗದ ಅಪಾಯ ಎದುರಾಗುವುದಿಲ್ಲವೇ ಎಂಬಂತಹ ಪ್ರಶ್ನೆಗಳೂ ಚರ್ಚೆಯಾಗಿವೆ.

ಪಹಲ್ಗಾಮಿನ ಕೃತ್ಯ ನಡೆದಾಗಿನಿಂದ ಜನರ ನಡುವೆ ಹಲವು ಚರ್ಚೆಗಳು ಆಗುತ್ತಿವೆ. ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಬೇಕು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯುದ್ಧವಾಗಿಬಿಡಲಿ ಎನ್ನುವವರಿಂದ ಹಿಡಿದು, ಕೆಲಕಾಲ ತುರ್ತು ಪರಿಸ್ಥಿತಿ ಘೋಷಿಸಿಬಿಡಿ ಎನ್ನುವವರೆಗೆ ಹಲವು ಒತ್ತಾಸೆಗಳು ಇಲ್ಲಿವೆ.

ಸಿಂಧು ನೀರಿನ ಹಂಚಿಕೆ ಒಪ್ಪಂದ ರದ್ದುಗೊಳಿಸಿರುವ ನಡೆ ಕೆಲವರ ಕಣ್ಣಿಗೆ ಮಾಸ್ಟರ್ ಸ್ಟ್ರೋಕ್ ಎನಿಸಿದರೆ, ಇನ್ನು ಕೆಲವರ ವಾದದ ಪ್ರಕಾರ ಅಷ್ಟು ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ನಮ್ಮಲ್ಲೇನೂ ಇಲ್ಲವಾದ್ದರಿಂದ ಇದು ಕೇವಲ ಬಾಯ್ಮಾತಿನ ಸಮರ. ಸಿಂಧು ನದಿ ಒಪ್ಪಂದ ಮುರಿದಿರುವುದು ತಕ್ಷಣಕ್ಕೊಂದು ಡ್ಯಾಮ್ ಕಟ್ಟಿಬಿಡುವ ಇರಾದೆಯಿಂದಲ್ಲ. ಬದಲಿಗೆ, ಮಾಹಿತಿ ಹಂಚಿಕೆ ಕೂಡ ರದ್ದಾಗುವುದರಿಂದ ಪಾಕಿಸ್ತಾನಕ್ಕೆ ಯಾವ ಪೂರ್ವಸೂಚನೆ ಕೊಡದೇ ನೀರು ಹೊರಹಾಕುವುದರಿಂದ ಅತ್ತಲಿನವರು ಕೃಷಿ ಸೇರಿದಂತೆ ಯಾವುದಕ್ಕೂ ಪ್ಲಾನ್ ಮಾಡಿಕೊಳ್ಳಲಾಗದ, ಆಗಾಗ ಪ್ರವಾಹ ಸ್ಥಿತಿಗೆ ತೆರೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ವಿಶ್ಲೇಷಕರ ಅಭಿಮತ.

ನಾಳೆ ಇದೇ ಸಿಂಧು ಹಾಗೂ ಬ್ರಹ್ಮಪುತ್ರಗಳಿಗೆ ಅವುಗಳ ಮೂಲದಲ್ಲೇ ಚೀನಾವೇನಾದರೂ ಆಣೆಕಟ್ಟು ಕಟ್ಟಿದರೆ ಭಾರತಕ್ಕೂ ನೀರು ಸಿಗದ ಅಪಾಯ ಎದುರಾಗುವುದಿಲ್ಲವೇ ಎಂಬಂತಹ ಪ್ರಶ್ನೆಗಳೂ ಚರ್ಚೆಯಾಗಿವೆ. ಆ ಪ್ರದೇಶಗಳಲ್ಲಿ ಓಡಾಟ ಮಾಡಿರುವ, ಅಲ್ಲಿನ ಭೂಸಂರಚನೆಗಳ ಬಗ್ಗೆ ವಿಶೇಷ ಅಧ್ಯಯನವೂ ಇರುವ ಪರಿಣತು ಹೇಳುತ್ತಿರುವ ಪ್ರಕಾರ, ಇವೆರಡು ನದಿಗಳ ಮೂಲಗಳು ಚೀನಾ ಅಧೀನದಲ್ಲಿರುವುದು ಹೌದಾದರೂ, ಇವಕ್ಕೆಲ್ಲ ನೀರು ಜಮೆಯಾಗುವ ಪ್ರದೇಶ, ಅಂದರೆ ಕ್ಯಾಚ್ಮೆಂಟ್ ಏರಿಯಾ ಎಂದು ಏನನ್ನು ಹೇಳಲಾಗುತ್ತದೆಯೋ, ಅದು ಭಾರತದಲ್ಲೇ ಇದೆ.

ಇನ್ನು, ಯುದ್ಧ ಶುರುವಾದರೆ ಭಾರತದ ಸೇನಾಬಲವೇನು, ಅತ್ತಲಿನ ಬಲವೇನು, ಅವರ ಬಳಿ ಯುದ್ಧಕಾಲದ ದಾಸ್ತಾನು ಸಂಗ್ರಹ ಎಷ್ಟಿದೆ, ನಮ್ಮಲ್ಲೆಷ್ಟಿದೆ, ಪಾಕಿಸ್ತಾನಕ್ಕೆ ಯಾರೆಲ್ಲ ಸಹಾಯ ಮಾಡಬಹುದು, ಭಾರತದ ಅರ್ಥವ್ಯವಸ್ಥೆಗೆ ಉಂಟಾಗಬಹುದಾದ ಹಾನಿ ಏನು ಎಂಬೆಲ್ಲದರ ಬಗ್ಗೆ ಚರ್ಚೆಗಳಿವೆ.

ಸರಿ…ಭಾರತದ ಪ್ರಜೆಯಾಗಿ ಹಾಗೂ ಮತದಾರನಾಗಿ ತನ್ನ ಸರ್ಕಾರ ಹೇಗೆ ಹೆಜ್ಜೆ ಇಡಬೇಕೆಂಬ ಬಗ್ಗೆ ಅಭಿಪ್ರಾಯ ಹಾಗೂ ಅಪೇಕ್ಷೆಗಳನ್ನು ಹೊಂದಿರುವುದೇನೂ ತಪ್ಪಲ್ಲ. ಆದರೆ, ಈ ಮೇಲಿನ ವಿಷಯಗಳನ್ನೇ ಪದೇ ಪದೆ ಭಾವೋತ್ಕಟತೆಯಿಂದ ಚರ್ಚಿಸುವುದರಲ್ಲಿ ಅಂಥ ಫಾಯಿದೆಯೇನೂ ಇಲ್ಲ. ಏಕೆಂದರೆ, ಈ ಎಲ್ಲ ವಿಷಯಗಳಲ್ಲಿ ಸರ್ಕಾರ ಮತ್ತದು ಸೃಷ್ಟಿಸಿರುವ ರಕ್ಷಣಾ ವ್ಯವಸ್ಥೆಗೆ ಇದ್ದಿರುವ ಮಾಹಿತಿಯ ಕಾಲುಭಾಗವೂ ಜನಸಾಮಾನ್ಯರಿಗೆ ತಿಳಿದಿರಲಾರದು. ಹೀಗಾಗಿ, ಆ ಮಾಹಿತಿಗಳ ಆಧಾರದಲ್ಲಿ ಮಿಲಿಟರಿ ಹಾಗೂ ಕಾರ್ಯತಂತ್ರಗಳ ಮಟ್ಟದಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸುವುದನ್ನು ಹಾಗೂ ಅದಕ್ಕೆ ತಕ್ಕ ಸಮಯ ಆಯ್ದುಕೊಳ್ಳುವುದನ್ನು ಅವರಿಗೇ ಬಿಡಬೇಕಷ್ಟೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ವಿಷಯದಲ್ಲಿ ಈಗಿರುವ ಸರ್ಕಾರ ತನ್ನ ಸಾಮರ್ಥ್ಯ ತೋರಿಸಿದೆಯಾದ್ದರಿಂದ ಆ ವಿಷಯಗಳಲ್ಲಿ ಅದಕ್ಕಿರುವ ಗ್ರಹಿಕೆ ಹೆಚ್ಚಿನದ್ದು. ಈಗ ಹೆಚ್ಚಾಗಿ ಚರ್ಚೆಯಾಗಬೇಕಿರುವುದು ಸರ್ಕಾರವೆಷ್ಟು ಸಿದ್ಧ ಎಂಬುದರ ಬಗ್ಗೆ ಅಲ್ಲ, ನಾವೆಷ್ಟು ಸಿದ್ಧ ಎಂಬುದರ ಬಗ್ಗೆ.

ನಾಗರಿಕತೆಯ ಉಳಿವಿಗೆ ನಾವೆಷ್ಟು ಸಿದ್ಧ?

ಹಿಂದು ಸಮಾಜದ ಬಹುದೊಡ್ಡ ಭಾಗ ಪ್ರಜಾಪ್ರಭುತ್ವ ಮತ್ತು ಆಧುನಿಕ ಶಿಕ್ಷಣದಲ್ಲಿ ರೂಪುಗೊಂಡಿರುವ ಮಾದರಿ ಇದೆಯಲ್ಲ… ಅದು ಅವಕಾಶ ಮತ್ತು ಅಪಾಯಗಳೆರಡನ್ನೂ ಸಮಪ್ರಮಾಣದಲ್ಲಿ ತಂದಿರಿಸಿದೆ. ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸಿಕೊಂಡಿದ್ದೇವೆ, ಹಿಂದಿನ ಪೀಳಿಗೆಗಳಿಗೆ ಹೋಲಿಸಿದರೆ ಆರ್ಥಿಕ ಪ್ರಗತಿ ಸಾಧಿಸಿದ್ದೇವೆ ಎಲ್ಲವೂ ಸರಿ. ಆದರೆ, ಹೀಗೆ ಆರ್ಥಿಕ ಪ್ರಗತಿ ಸಾಧಿಸುತ್ತ ನಮಗೆ ಬೀದಿಬಲ, ಸಮುದಾಯ ಶಕ್ತಿ ಇವೆಲ್ಲ ಅನಕ್ಷರಸ್ತರಿಗೆ ಸಂಬಂಧಿಸಿದ ಗೌಣ ವಿಷಯಗಳು ಎನಿಸಿಬಿಟ್ಟಿವೆ. ಯಾವುದು ಹಣದೊಂದಿಗೆ ಬೆರೆತಿಲ್ಲವೋ ಅದು ಕೆಲಸಕ್ಕೆ ಬಾರದ್ದು ಎಂಬ ಗ್ರಹಿಕೆ ನಮ್ಮದು ಹಾಗೂ ಹೀಗೆ ಯೋಚಿಸುವುದನ್ನು ಬುದ್ಧಿವಂತಿಕೆ ಎಂದುಕೊಂಡಿದ್ದೇವೆ.

ನಮ್ಮಲ್ಲಿ ಹೆಚ್ಚಿನವರನ್ನು ಇವತ್ತಿಗೆ ರಸ್ತೆಯಲ್ಲಿ ಯಾರೋ ಅಡ್ಡಹಾಕಿ ಅವಮಾನಿಸಿದರೆ ಸ್ವಂತವಾಗಿ ಬಲಪ್ರದರ್ಶನ ಮಾಡುವುದಕ್ಕೆ ನಮ್ಮ ಆಫೀಸು, ಸ್ಟೇಟಸ್ಸು ಇವೆಲ್ಲ ಮೆತ್ತಗಾಗಿಸಿವೆ. ಇನ್ನು ಬೆನ್ನ ಹಿಂದೆ ಸಮುದಾಯದ ಬಲ ಇದೆಯಾ ಅಂತ ನೋಡಿದರೆ ಯಾರಿಲ್ಲ. ಏಕೆಂದರೆ, ಜಾತ್ರೆ-ಹಬ್ಬ, ಹರಿದಿನಗಳನ್ನೆಲ್ಲ ನಮ್ಮ ದುಡಿಮೆಯೆದುರು ಗೌಣವಾಗಿಸಿಕೊಂಡಿರುವುದರಿಂದ ಸಮುದಾಯ ರೂಪುಗೊಳ್ಳುವುದಾದರೂ ಹೇಗೆ? “ಪೊಲೀಸ್ ಕಂಪ್ಲೇಂಟ್ ಮಾಡ್ತೇನೆ, ಕೋರ್ಟಿಗೆ ಹಾಕ್ತೇನೆ” ಎನ್ನುವುದೇ ನಮ್ಮ ದೊಡ್ಡ ಅಸ್ತ್ರ ಎಂದುಕೊಂಡಿದ್ದೇವೆ. ಸರ್ಕಾರ ಯಾವ ಸಿದ್ಧಾಂತದ್ದೇ ಇದ್ದರೂ ಈ ವ್ಯವಸ್ಥೆಗಳೆಲ್ಲ ಸಾಮಾನ್ಯರ ಪಾಲಿಗೆ ಸೂಕ್ತ ಸಮಯದಲ್ಲಿ ಸಹಾಯಕ್ಕೆ ಬಂದಿರುವುದರ ಉದಾಹರಣೆಗಳೇ ಕಡಿಮೆಯಾದ್ದರಿಂದ ಎದುರಿಗಿರುವ ನಮ್ಮ ವೈರಿ ಗಹಗಹಿಸಿ ನಗುತ್ತಾನೆ.

ಹೋಗಲಿ, ಅಷ್ಟೆಲ್ಲ ದುಡಿದು ಆ ಹಣವನ್ನಾದರೂ ‘ಕಾರ್ಯತಂತ್ರ’ದ ದೃಷ್ಟಿಯಿಂದ ವ್ಯೂಹಾತ್ಮಕವಾಗಿ ಬಳಸುತ್ತೇವಾ? ಊಹುಂ, ಅವೆಲ್ಲ ಸರ್ಕಾರ ಹಾಗೂ ಮಿಲಿಟರಿಗೆ ಸಂಬಂಧಿಸಿದ ಪದಕೋಶ ಎಂದುಕೊಂಡುಬಿಟ್ಟಿದ್ದೇವೆ. ಕಾಶ್ಮೀರಕ್ಕೆ ಹೋಗುತ್ತೇವೆ, ಆದರೆ ಅಲ್ಲಿನ ಶಿಥಿಲ ದೇವಾಲಯಗಳಿಗೆ ಭೇಟಿ ಕೊಡುತ್ತೇವೆ…ಆ ಮೂಲಕ ನಮ್ಮ ಸ್ಮೃತಿಗಳನ್ನು, ನಮ್ಮೊಳಗಿನ ಪ್ರತಿರೋಧದ ಭಾವವನ್ನು ಜಾಗೃತವಾಗಿ ಇಟ್ಟುಕೊಳ್ಳುತ್ತೇವೆ ಅಂತ ಯೋಚಿಸುವ ಹಿಂದು ಮನಸ್ಸುಗಳ ಸಂಖ್ಯೆ ಬಹಳ ಕಡಿಮೆ.

ಕಣಿವೆ, ಉದ್ಯಾನ, ಜಿಪ್ಲೈನ್ ಇವುಗಳದ್ದೇ ಮಜಾ ತೆಗೆದುಕೊಳ್ಳಬೇಕು ಎಂದಾದರೆ ಹಿಂದು ಬಹುಸಂಖ್ಯಾತ ಹಿಮಾಚಲ ಹಾಗೂ ಉತ್ತರಾಖಂಡಗಳಲ್ಲೇ ಅವೆಲ್ಲ ಇವೆ ಎಂಬ ವ್ಯೂಹಾತ್ಮಕ ದೃಷ್ಟಿ ಬರುವುದೇ ಇಲ್ಲ. ಹಿಂದುಗಳು ಹೆಚ್ಚಿರುವ ಜಮ್ಮುವಿನಲ್ಲಿ ಏನೆಲ್ಲ ನೋಡುವುದಕ್ಕಿದೆ ಅಂತ ಗಮನಿಸೋಣ, ನಮ್ಮ ದುಡ್ಡು ಅಲ್ಲಿನ ಸ್ಥಳೀಯ ಹಿಂದುಗಳಿಗೆ ಹೋಗಲಿ ಎಂದೆಲ್ಲ ಯೋಚಿಸುವ ಶಕ್ತಿಯೂ ಕ್ಷೀಣಿಸಿದೆ. ಟರ್ಕಿಯೋ ಇನ್ಯಾವುದೋ ದೇಶವೋ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದಾಗ, ಅಲ್ಲಿನ ಪ್ರವಾಸೋದ್ಯಮಕ್ಕೆ ಭಾರತೀಯರ ಹಣ ಸಿಗುವುದಿಲ್ಲ ಎಚ್ಚರ ಎಂಬಂತೆ ನಡೆದುಕೊಳ್ಳಬೇಕೆಂದು ಒಬ್ಬ ಪ್ರವಾಸಿ ಹಿಂದುವಿಗೆ ಅನ್ನಿಸುವುದಿಲ್ಲ. ಅಲ್ಲೆಲ್ಲ, “ಇವೆಲ್ಲ ಸರ್ಕಾರಗಳಿಗೆ ಸಂಬಂಧಿಸಿದ ವಿಷಯ. ನನ್ನ ದುಡ್ಡು, ನನ್ನ ಮಜಾ” ಅಂತೆಲ್ಲ ಸಮಜಾಯಿಷಿ ಹುಟ್ಟಿಕೊಳ್ಳುತ್ತದೆ.

ಈಗಂತೂ ಹಿಂದು ಸಮಾಜದ ಕುಟುಂಬಗಳು ತಮ್ಮ ಒಂದೊಂದೇ ಮಕ್ಕಳನ್ನು ಬೆಳೆಸುತ್ತಿರುವ ರೀತಿಯೇ ನಾಗರಿಕತೆಯ ಉಳಿವಿನ ದೃಷ್ಟಿಗೆ ಭಯ ಹುಟ್ಟಿಸುವಂತಿದೆ. ನನ್ನ ಮಗು ಓದುತ್ತಿದೆ ಅಂತ ಅವರಿದ್ದಲ್ಲಿಗೇ ಊಟ-ತಿಂಡಿ, ಅವರ ಪರೀಕ್ಷೆ ಬಂದಿದೆ ಅಂತ ಜಗತ್ತಿಗೆಲ್ಲ ಬಾಗಿಲು ಹಾಕಿ ಮನೆಯನ್ನು ಮೌನದಲ್ಲಿಟ್ಟುಕೊಳ್ಳುವುದು, ಹೆಜ್ಜೆ-ಹೆಜ್ಜೆಗೂ ಅವರಿಗೆ ರಕ್ಷಣಾತ್ಮಕತೆ… ನಿಜ, ಹೆಚ್ಚಿನವರು ಕೋಟಿ ರುಪಾಯಿಗಳ ಪ್ಯಾಕೇಜಿನ ಉದ್ಯೋಗಕ್ಕೇ ಕಾಲಿರಿಸಿ ಸಫಲರಾಗುತ್ತಾರೇನೋ…ಆದರೆ, ರಸ್ತೆಯಲ್ಲಿ ಬಿದ್ದು ಮೈ ತರಚಿಕೊಂಡರೆ ಅವರ ಮೈ ರಕ್ತ ನೋಡಿ ಗಾಬರಿಯಾಗಿ ಅವರಿಗೇ ತಲೆತಿರುಗಿಬಿಡುವಂಥ ಪರಿಸ್ಥಿತಿ ಇದೆ.

ಮಧ್ಯರಾತ್ರಿ ಉನ್ಮತ್ತ ಗುಂಪೊಂದು ಬಾಗಿಲು ಬಡಿಯುತ್ತಿದೆ… ನಾವು ಪೊಲೀಸರಿಗೆ ಕರೆ ಮಾಡಿ ಅವರು ಸ್ಥಳಕ್ಕೆ ಬರುವುದರೊಳಗಿನ ಹದಿನೈದಿಪ್ಪತ್ತು ನಿಮಿಷಗಳ ಒಳಗೆ ನಮ್ಮ ನಮ್ಮ ಮನೆಗಳಲ್ಲಿ ನಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ಯಾವ ತಂತ್ರ, ಯಾವ ಪರಿಕರಗಳಿವೆ ಎಂಬ ಪ್ರಶ್ನೆ ಹಾಕಿಕೊಂಡುಬಿಟ್ಟರೆ ನಾವು ಕುಸಿದಿರುವ ಪಾತಾಳ ಎಷ್ಟೆಂಬುದರ ಅರಿವು ನಮಗೆ ಬಂದುಬಿಡುತ್ತದೆ!

ವೋಕ್ ಮತ್ತು ಭಾವತೀವ್ರತೆ, ಎರಡರ ನಡುವಿನ ವಾಸ್ತವಿಕತೆ

ಮತನಂಬಿಕೆಗಳಿಂದ ಹುಟ್ಟಿರುವ ಉಗ್ರವಾದದ ಚರ್ಚೆ ಬಂದಾಗಲೆಲ್ಲ ಎರಡು ನಮೂನೆಗಳು ಎದುರಿಗೆ ಬರುತ್ತವೆ. ಮೊದಲನೆಯದು ವೋಕ್ ಮನಸ್ಥಿತಿ (ಅಂದರೆ ಯಾವುದನ್ನೂ ಅಧ್ಯಯನಕ್ಕೆ ಒಳಪಡಿಸದೇ ತೆಳು ಆದರ್ಶದ ನೆಲೆಯಲ್ಲಿ ಯೋಚಿಸುವುದು). ಅದು ಹೇಳುತ್ತದೆ - ಏನ್ರೀ ಎಲ್ಲ ಕಾಶ್ಮೀರಿಗಳನ್ನು, ಎಲ್ಲ ಇಸ್ಲಾಂ ಮತಸ್ಥರನ್ನು ಒಂದು ನಮೂನೆಯಲ್ಲಿಟ್ಟು ಮಾತನಾಡುವುದು ಸರಿಯಾ? ಒಳ್ಳೆಯದ್ದು, ಕೆಟ್ಟದ್ದು ಎಲ್ಲದರಲ್ಲೂ ಇರುತ್ತದೆ. ಮತ್ತೊಂದು ಭಾವತೀವ್ರತೆ ಹೇಳುತ್ತದೆ- ಇವರಿರುವುದೇ ಹಾಗೆ, ಇವರ ನಾಶವಾಗುವವರೆಗೆ ಶಾಂತಿ ಸಾಧ್ಯವಿಲ್ಲ.

ಮೊದಲನೆಯದ್ದನ್ನು ಪರೀಕ್ಷೆಗೆ ಒಳಪಡಿಸುವುದಾದರೆ, ನಮ್ಮಲ್ಲಿ ಪರಮೋಚ್ಚ ಶೌರ್ಯ ಪ್ರಶಸ್ತಿ ಪಡೆದ ಮುಸ್ಲಿಂ ಯೋಧರಿದ್ದಾರೆ, ಪಾಕಿಸ್ತಾನಿಯರ ವಿರುದ್ಧ ಮಾಹಿತಿ ನೀಡಿ ಉಪಕರಿಸಿದವರೂ ಇದ್ದಾರೆ. ಆದರೆ ಅಲ್ಲಿನ ಸಮಾಜಕ್ಕೆ ಅವರು ಆದರ್ಶರಾಗಿದ್ದಾರಾ ಎಂಬುದು ಪ್ರಶ್ನೆ. ವಾಸ್ತವ ಏನೆಂದರೆ, ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಹೊರಹಾಕುವುದಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಾಗ ಅಲ್ಲಿನ ಸಾಮಾನ್ಯ ಕಾಶ್ಮೀರಿಗಳು ಸಹ ಖಾಲಿಯಾಗುವ ಯಾವ ಮನೆ ತನಗೆ ಸಿಗುತ್ತದೆ, ಅಲ್ಲಿನ ಯಾವ ಹಿಂದು ಹೆಣ್ಣನ್ನು ತಾನು ಹಂಚಿಕೊಳ್ಳಬಹುದು ಎಂದೆಲ್ಲ ಚರ್ಚಿಸಿಕೊಂಡಿದ್ದದ್ದು ದಾಖಲಾಗಿರುವ ಸತ್ಯ.

ಇನ್ನು, ಒಂದು ಸಮೂಹವೇ ಹಾಗೆ ಮತ್ತದು ನಾಶವಾಗುವುದೇ ಪರಿಹಾರ ಎಂದು ಹೊರಟರೆ ಅದು ಕೊನೆಗೆ ಹಿಟ್ಲರನ ನಾಜಿ ಶಿಬಿರದ ಮಾದರಿಗೆ ಕರೆದೊಯ್ಯುತ್ತದೆ. ಅದು ಅಕಲ್ಪನೀಯ, ಅಮಾನುಷ.

ವಾಸ್ತವ ಇರುವುದು ಹಾವು ಕೆಟ್ಟದ್ದು ಎಂದು ನಿರ್ಧರಿಸುವುದರಲ್ಲಾಗಲೀ, ಇಲ್ಲ-ಇಲ್ಲ ಅದೂ ನಾಯಿ-ಬೆಕ್ಕುಗಳಂತೆ ಒಂದು ಜೀವಿ ಎಂದು ವಾದಿಸುವುದರಲ್ಲಾಗಲೀ ಅಲ್ಲ. ಹಾವಿನ ಸ್ವಭಾವ ಕಚ್ಚುವುದು. ಅದು ಕೆಟ್ಟದ್ದೋ ಒಳ್ಳೆಯದೋ ಎಂಬ ಪ್ರಶ್ನೆಗೆ ಔಚಿತ್ಯವೇ ಇಲ್ಲ. ಹಾವನ್ನು ನಿರ್ವಹಿಸುವ, ಅದರಿಂದ ಅಪಾಯವಾಗದಂತೆ ತನ್ನನ್ನು ಕಾಪಾಡಿಕೊಳ್ಳುವ, ಅದರ ಆವಾಸದಲ್ಲಿ ಅದಿರುವುದಕ್ಕೆ ಬಿಡುವ ಪ್ರಜ್ಞೆ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುತ್ತೇವೆ ಎಂಬುದರಲ್ಲಿ ವಾಸ್ತವಿಕತೆ ಇದೆ.

ಸರ್ಕಾರಗಳು ಅವರ ಕೆಲಸ ಮಾಡಲಿ. ರೀಲ್ಸ್-ರಿಯಾಲಿಟಿ ಶೊಗಳಿಂದ ಸ್ವಲ್ಪ ತಲೆ ಮೇಲೆತ್ತಿ ಭಾರತೀಯ ಸಮಾಜ ವಾಸ್ತವಿಕ ದೃಷ್ಟಿ ದಕ್ಕಿಸಿಕೊಳ್ಳಲಿ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT